Site icon Vistara News

Satyameva Jayate : ಏ. 9ರಂದು ಸತ್ಯಮೇವ ಜಯತೇ ಹೋರಾಟಕ್ಕೆ ಕೋಲಾರದಲ್ಲಿ ರಾಹುಲ್‌ ಗಾಂಧಿ ಚಾಲನೆ

Satyameva jayate

#image_title

ಬೆಂಗಳೂರು: ʻಎಲ್ಲ ಕಳ್ಳರ ಉಪನಾಮ ಮೋದಿ ಎಂದೇ ಯಾಕಿರುತ್ತದೆʼ ಎಂಬ ಹೇಳಿಕೆಗಾಗಿ ತನ್ನ ಲೋಕಸಭಾ ಸದಸ್ಯತ್ವದ ಅರ್ಹತೆಯನ್ನೇ ಕಳೆದುಕೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಏಪ್ರಿಲ್‌ 9ರಂದು ಸತ್ಯಮೇವ ಜಯತೇ ಎಂಬ ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ. ರಾಹುಲ್‌ ಗಾಂಧಿ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು ಕೋಲಾರದಿಂದ. ಹೀಗಾಗಿ ಅದೇ ಜಾಗದಿಂದ ರಾಹುಲ್‌ ಅವರು ಸತ್ಯಕ್ಕಾಗಿ ಹೋರಾಟ ಆರಂಭಿಸಲಿದ್ದಾರೆ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಮತ್ತು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಪ್ರಕಟಿಸಿದರು.

ಸತ್ಯಮೇವ ಜಯತೇ ಕಾರ್ಯಕ್ರಮ ಏಪ್ರಿಲ್‌ ಐದರಂದು ನಡೆಯಬೇಕಿತ್ತು. ಆದರೆ, ರಾಹುಲ್‌ ಗಾಂಧಿ ಅವರಿಗೆ ಬರಲು ಸಾಧ್ಯವಾಗದೆ ಇರುವುದರಿಂದ ಏಪ್ರಿಲ್‌ 9ರಂದು ನಡೆಯಲಿದೆ. ಕೋಲಾರದಲ್ಲಿ ಆಡಿದ ಮಾತಿಗೆ ಮಾನನಷ್ಟ ಮೊಕದ್ದಮೆ ಹೂಡಿದ್ದರಿಂದ ಇದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ʻʻಇದು ಬರೀ ರ‍್ಯಾಲಿ ಅಲ್ಲ. ದೇಶದಲ್ಲಿ ಶಾಂತಿ ನೆಲೆಸಲು ಹೋರಾಟ. ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಿಧಾನ ಅಪಾಯದಲ್ಲಿವೆ. ಇದನ್ನು ಉಳಿಯುವ ಜವಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ. ಬಿಜೆಪಿಯವರ ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಉಳಿಸಬೇಕು ಎಂದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕು. ರಾಹುಲ್‌ ಗಾಂಧಿಯವರು ಸ್ವಾರ್ಥಕ್ಕಾಗಿ ಈ ಹೋರಾಟ ಮಾಡುತ್ತಿಲ್ಲ. ದೇಶದ ಜನರಿಗಾಗಿ ಹೋರಾಟ ಪ್ರಾರಂಭ ಮಾಡುತ್ತಿದ್ದಾರೆʼʼ ಎಂದರು ಸಿದ್ದರಾಮಯ್ಯ.

ʻʻಬಿಜೆಪಿಯವರು ದ್ವೇಷದ, ಸೇಡಿನ ರಾಜಕಾರಣ ಮಾಡಿ ಅಶಾಂತಿ ಸೃಷ್ಟಿ ಮಾಡಿದ್ದಾರೆ. ದಲಿತರು, ಮಹಿಳೆಯರು, ರೈತರ ಸೇರಿದಂತೆ ಯಾರು ಸಹ ನೆಮ್ಮದಿಯಿಂದ ಇಲ್ಲ. ಬೇರೆಯವರಿಗೆ ಭಯ ಮೂಡಿಸಲು ರಾಹುಲ್‌ ಗಾಂಧಿ ಅವರನ್ನು ಅನರ್ಹ ಮಾಡಿದ್ದಾರೆ. ಮನೆಯಿಂದ ಹೊರ ಹಾಕಿದ್ದಾರೆʼʼ ಎಂದು ಹೇಳಿದ ಸಿದ್ದರಾಮಯ್ಯ, ʻʻಒಂದು ದೇಶ, ಭಾಷೆ, ಮೇಲೆ‌ ನಂಬಿಕೆ ಇಟ್ಟುವರು ಬಿಜೆಪಿಯವರು. ಮುಸಲೋನಿ, ಹಿಟ್ಲರ್ ವಂಶಸ್ಥರು ಬಿಜೆಪಿಯವರು. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲʼʼ ಎಂದರು.

ಓಡಿ ಹೋದವರನ್ನು ಸಾಧು ಸಂತರೆನ್ನಬೇಕಾ?

ʻʻಲಲಿತ್ ಮೋದಿ, ನೀರವ್ ಮೋದಿ ಹಣ ತೆಗೆದುಕೊಂಡು ಓಡಿ ಹೋಗಿಲ್ಲವಾ? ಜನರ ಹಣ ಲೂಟಿ ಮಾಡಿ ಓಡಿ ಹೋದವರನ್ನು ಏನಂತ ಕರೆಯುಬೇಕು‌…? ಸಾಧು, ಸಂತರು ಎಂದು ಕರೆಯಬೇಕಾ..?ʼʼ ಎಂದು ಕೇಳಿದ ಸಿದ್ದರಾಮಯ್ಯ ಅವರು, ʻʻಕಳ್ಳರು ಎಂದರೆ ಇವರೇಕೆ ಹೆಗಲು ಮುಟ್ಟಿಕೊಳ್ಳುತ್ತಾರೆʼʼ ಎಂದು ಕೇಳಿದರು.

ʻʻರಾಹುಲ್‌ ಅವರು ಆಡಿದ ಮಾತು ಮಾನನಷ್ಟ ಮೊಕದ್ದಮೆ ಆಗುವುದಿಲ್ಲ. ಕೋಲಾರದವರೇ ಹೋಗಿ ಸಾಕ್ಷಿ ಹೇಳಿದ್ದಾರೆʼʼ ಎಂದು ಕೇಳಿದ ಅವರು, ಎರಡು ವರ್ಷ ಜೈಲು ಶಿಕ್ಷೆಗೆ ಒಳಗಾದ ಹಾವೇರಿಯ ಬಿಜೆಪಿ ಶಾಸಕ ನೆಹರು ಓಲೇಕಾರ ಮೇಲೆ‌ ಕ್ರಮ ಆಗಿಲ್ಲ ಯಾಕೆ ಎಂದು ಕೇಳಿದರು.

ಲೂಟಿ ಬಗ್ಗೆ ಮಾತನಾಡಿದರೆ ತಪ್ಪಾ?

ʻʻರಾಹುಲ್‌ ಗಾಂಧಿ ಅವರು ದೇಶದಲ್ಲಿ ಲೂಟಿ ಮಾಡಿ ಓಡಿ ಹೋದವರ ಬಗ್ಗೆ ಮಾತಾಡಿದರು. ಲೂಟಿ ಮಾಡಿದವರು ಮೋದಿ ಎಂಬ ಹೆಸರಿನವರು. ಲಲಿತ್ ಮೋದಿ, ನೀರವ್ ಮೋದಿ ಲೂಟಿ ಮಾಡಿದರು. ಅದನ್ನು ಕೇಳುವುದು ತಪ್ಪಾ..? ಲೂಟಿ ಹೊಡೆದ ಹಣ ದಲಿತ, ಒಬಿಸಿ, ಬಡವರ, ರೈತರ, ಲಿಂಗಾಯತ, ಒಕ್ಕಲಿಗರ ಹಣ. ಇದರ ಬಗ್ಗೆ ರಾಹುಲ್ ಪ್ರಶ್ನೆ ಮಾಡಿದ್ರೆ, ತಪ್ಪಾ, ಅದು ಕ್ರೈಮ್ ಆಗುತ್ತಾ…?ʼʼ ಎಂದು ರಣದೀಪ್‌ ಸುರ್ಜೇವಾಲ ಪ್ರಶ್ನಿಸಿದರು.

ʻʻದೇಶದ ಬ್ಯಾಂಕ್ ಗಳಲ್ಲಿ ಜಮಾ ಆಗಿರುವ ಹಣ ಯಾಕೆ ಲೂಟಿ ಮಾಡಿದರು ಎಂದು ಕೇಳಿದರೆ ಲೋಕಸಭೆಯಲ್ಲಿ ಮೈಕ್‌ ಆಫ್‌ ಮಾಡುತ್ತಾರೆ. ಈಗ ಲೋಕಸಭೆಯಿಂದ, ಮನೆಯಿಂದ ಹೊರ ಹಾಕಿದರು. ರಾಹುಲ್‌ ಗಾಂಧಿ ದೇಶದ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆʼʼ ಎಂದು ಹೇಳಿದರು ಸುರ್ಜೇವಾಲ.

ಪರಸ್ಪರ ಮುಖ ನೋಡದ ರಮೇಶ್‌ ಕುಮಾರ್‌- ಕೆ.ಎಚ್‌ ಮುನಿಯಪ್ಪ!

ಸತ್ಯಮೇವ ಜಯತೇ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಸುರ್ಜೇವಾಲ ಅವರಲ್ಲದೆ, ಕಾಂಗ್ರೆಸ್‌ ನಾಯಕರಾದ ರಮೇಶ ಕುಮಾರ್, ಕೆಎಚ್ ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ , ಅಭಿಷೇಕ ದತ್ತ್, ಕೋಲಾರ ಶಾಸಕ ಶ್ರೀನಿವಾಸ್ ಗೌಡ, ಶಾಸಕ ಶಿವಶಂಕರರೆಡ್ಡಿ, ನಂಜೇಗೌಡ, ನಾರಾಯಣಸ್ವಾಮಿ, ನಜೀರ್ ಅಹ್ಮದ್, ಕೊತ್ತೂರು ಮಂಜುನಾಥ್, ಎಂಸಿ ಸುಧಾಕರ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇರಲಿಲ್ಲ. ಕೆ.ಎಚ್‌ ಮುನಿಯಪ್ಪ ಹಾಗೂ ರಮೇಶ ಕುಮಾರ್ಒಂ ದೇ ವೇದಿಕೆಯಲ್ಲಿದ್ದರೂ ಪರಸ್ಪರ ಮುಖ ನೋಡಲಿಲ್ಲ!

ಕೋಲಾರದಿಂದ ಆರಂಭಗೊಳ್ಳುವ ಈ ಹೋರಾಟ ಇಡೀ ದೇಶದಲ್ಲಿ ನಡೆಯುತ್ತದೆ. ಕೋಲಾರದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಮಹಮ್ಮದ್‌ ಮನವಿ ಮಾಡಿದರು.

ಹಿಟ್ಲರ್ ಸರ್ಕಾರದ ವಿರುದ್ಧ ಹೋರಾಟ‌‌ ಮಾಡಬೇಕು

Exit mobile version