ಚಿಕ್ಕೋಡಿ: ಸ್ನೇಹವನ್ನು ನೆನೆದು ಮಾಜಿ ಡಿಸಿಎಂ ಸವದಿ ಭಾವುಕರಾಗಿದ್ದು, ಸಚಿವ ಸಿ.ಸಿ.ಪಾಟೀಲ್ ಕಣ್ಣೀರು ಹಾಕಿರುವ ಭಾವನಾತ್ಮಕ ಸನ್ನಿವೇಶ ಅಥಣಿಯಲ್ಲಿ ನಡೆದಿದೆ. ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಭಾಷಣ ಮಾಡುವಾಗ, ಯಾವುದೇ ಕಾಮಗಾರಿಗೂ ಸಿ.ಸಿ.ಪಾಟೀಲ್ ಇಲ್ಲ ಎನ್ನದೆ ಕೆಲಸ ಮಾಡಿಕೊಟ್ಟಿದ್ದಾರೆ. ಅವರು ನನ್ನ ಒಡಹುಟ್ಟಿದ ಅಣ್ಣನಿಗಿಂತೂ ಹೆಚ್ಚು ಎಂದು ಭಾವುಕರಾದಾಗ, ವೇದಿಕೆಯ ಮೇಲೆ ಸಚಿವ ಸಿ.ಸಿ.ಪಾಟೀಲ್ ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ.
35 ಕೋಟಿ ರೂ.ಗಳ ವೆಚ್ಚದಲ್ಲಿ ಅಥಣಿ ತಾಲೂಕಿನ ಕೊಟ್ಟಲಗಿ- ನಿಪ್ಪಾಣಿ ರಸ್ತೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭಾವನಾತ್ಮಕ ಸನ್ನಿವೇಶಕ್ಕೆ ಸಮಾರಂಭ ಸಾಕ್ಷಿಯಾಯಿತು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಿ.ಸಿ.ಪಾಟೀಲ್ ತಮ್ಮ ಸ್ನೇಹವನ್ನು ನೆನೆದು ಭಾವುಕರಾಗಿದ್ದರಿಂದ ಒಂದು ಕ್ಷಣ ಸಮಾರಂಭದಲ್ಲಿದ್ದವರು ಮೌನಕ್ಕೆ ಜಾರಿದರು.
ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಸಚಿವ ಸಿ.ಸಿ.ಪಾಟೀಲ್ ಪ್ರತಿಕ್ರಿಯಿಸಿ, ಅವರಿಗೆ ನ್ಯಾಯಾಲಯದ ವಾರಂಟ್ ಬಂದಿರುವುದರಿಂದ ಬೆಂಗಳೂರಿಗೆ ಹೋಗಿದ್ದಾರೆ. ನಾನು ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದ್ದೇನೆ ಎಂದು ಸಮಜಾಯಿಷಿ ನೀಡಿದರು. ಚಿಕ್ಕೋಡಿ ಉಪವಿಭಾಗದಲ್ಲಿ ಕಳಪೆ ಕಾಮಗಾರಿ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಳಪೆ ಕಾಮಗಾರಿ ಮಾಡುವ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಅವರೇ ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಸಾವರ್ಕರ್ ಹೆಸರು ಹೇಳಲು ಕಾಂಗ್ರೆಸ್‌ನವರಿಗೆ ಯೋಗ್ಯತೆ ಇಲ್ಲ
ವೀರ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್‌ಗೆ ಕಾಂಗ್ರೆಸ್‌ನವರು ಹೋಲಿಕೆ ಮಾಡುತ್ತಾರೆ. ವೀರ ಸಾವರ್ಕರ್ ಹೆಸರು ಹೇಳುವುದಕ್ಕೆ ಕಾಂಗ್ರೆಸ್‌ನವರಿಗೆ ಯೋಗ್ಯತೆಯೇ ಇಲ್ಲ, ಕಾಂಗ್ರೆಸ್ ನಾಲಿಗೆಯಲ್ಲಿ ಸಾವರ್ಕರ್ ಹೆಸರು ಬರಬಾರದು ಎಂದು ಅಥಣಿಯಲ್ಲಿ ಸಚಿವ ಸಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದರು.
ಅಧಿಕಾರಕ್ಕೆ ಬರಬೇಕು ಎಂದು ಇತಿಹಾಸ ಮಹಾಪುರುಷನನ್ನು ಗೇಲಿ ಮಾಡುವುದು ಎಷ್ಟು ಸರಿ? ಕಾಂಗ್ರೆಸ್‌ನವರು ಒಂದು ಧರ್ಮದ ಓಲೈಕೆ ರಾಜಕೀಯ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಆದರೆ, ಮತ ರಾಜಕೀಯಕ್ಕೆ ಮಹಾನ್ ವ್ಯಕ್ತಿಗಳನ್ನು ಟೀಕಿಸುವುದು ಸರಿಯಲ್ಲ ಎಂದು ಅಥಣಿ ತಾಲೂಕಿನ ಕೊಟ್ಟಲಗಿ-ನಿಪ್ಪಾಣಿ ರಸ್ತೆ ಕಾಮಗಾರಿ ಭೂಮಿಪೂಜೆ ವೇಳೆ ಕಿಡಿಕಾರಿದರು.