Site icon Vistara News

ತುಮಕೂರಲ್ಲಿ ಸಾವರ್ಕರ್‌ ಪಾರ್ಕ್‌ ಸ್ಥಾಪಿಸಿದ್ದೇ ಕಾಂಗ್ರೆಸ್‌, ಸ್ವಾತಂತ್ರ್ಯ ವೀರ ಅಂದಿದ್ದರು ಕಾಂಗ್ರೆಸ್‌ ನಾಯಕರು!

tumkur savarkar park

ತುಮಕೂರು: ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ವಿಚಾರದಲ್ಲಿ ಬೀದಿ ಕಾಳಗಕ್ಕೆ ಇಳಿದಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ತಮ್ಮ ಹಿಂದಿನ ನಿಲುವುಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ರಾಜಕಾರಣಿಗಳ ಬಣ್ಣ ಕಾಲಕಾಲಕ್ಕೆ ಬದಲಾಗುತ್ತದೆ ಎನ್ನುವುದಕ್ಕೆ ಅಪ್ಪಟ ಉದಾಹರಣೆಯೊಂದು ಇಲ್ಲಿದೆ.

ಈಗ ವೀರ ಸಾವರ್ಕರ್‌ ಅವರ ಹೆಸರು ಕೇಳಿದರೆ ನಖಶಿಖಾಂತ ಉರಿಯುವ ಕಾಂಗ್ರೆಸ್‌ ನಾಯಕರು ಕೇವಲ ಆರು ವರ್ಷದ ಹಿಂದೆ ತಾವೇ ಮುಂದಾಗಿ ನಿಂತು ಒಂದು ಉದ್ಯಾನಕ್ಕೆ ಸಾವರ್ಕರ್‌ ಹೆಸರಿಟ್ಟಿದ್ದರು. ಇದು ನಡೆದಿರುವುದು ತುಮಕೂರಿನಲ್ಲಿ. ಅಂದಿನ ಭಾಷಣದಲ್ಲಿ ನಾಯಕರೆಲ್ಲಿ ಸಾವರ್ಕರ್‌ ಅವರನ್ನು ಹೊಗಳಿದ್ದೇ ಹೊಗಳಿದ್ದು. ಆದರೆ, ಈಗ ವರಸೆ ಸಂಪೂರ್ಣ ಬದಲಾಗಿದೆ!

ತುಮಕೂರು ನಗರದಲ್ಲಿ ೨೦೧೬ರಲ್ಲಿ ಸಾವರ್ಕರ್‌ ಪಾರ್ಕ್‌ ಸ್ಥಾಪನೆ ವೇಳೆ ಕಾರಂಜಿಗೆ ಚಾಲನೆ ನೀಡಿದ ಕಾಂಗ್ರೆಸ್‌ ನಾಯಕರು

ತುಮಕೂರು ನಗರದ ವಾರ್ಡ್‌ ೧೫ರಲ್ಲಿರುವ ಪಾರ್ಕ್‌ಗೆ ಕಾಂಗ್ರೆಸ್‌ ನಾಯಕರೆಲ್ಲ ಸೇರಿ ಸ್ವಾತಂತ್ರ್ಯ ವೀರ ಸಾವರ್ಕರ್‌ ಉದ್ಯಾನವನ ಎಂದು ಹೆಸರಿಟ್ಟಿದ್ದರು. ಇದು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾಗ ನಡೆದ ವಿದ್ಯಮಾನ. ಅಂದರೆ, ೨೦೧೬ರ ಸೆಪ್ಟೆಂಬರ್‌ ೬ರಂದು ಉದ್ಘಾಟನೆ ನಡೆದಿತ್ತು.

ಭಾಗವಹಿಸಿದ ಕಾಂಗ್ರೆಸ್‌ ನಾಯಕರು

ಕಾಂಗ್ರೆಸ್‌ ನಾಯಕರೆಲ್ಲರೂ ಇದ್ದರು
ಅಂದು ಉದ್ಯಾನವನವನ್ನು ಉದ್ಘಾಟಿಸಿದ್ದು ಆಗ ನಗರಾಭಿವೃದ್ಧಿ ಸಚಿವರಾಗಿದ್ದ ಆರ್‌ ರೋಷನ್‌ ಬೇಗ್‌, ಮುಖ್ಯ ಅತಿಥಿಗಳಾಗಿದ್ದವರು ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಟಿ.ಬಿ. ಜಯಚಂದ್ರ, ಆಗ ಗೃಹ ಸಚಿವರಾಗಿದ್ದ ಡಾ. ಜಿ. ಪರಮೇಶ್ವರ್‌ ಅವರೂ ಬಂದಿದ್ದರು. ಅಧ್ಯಕ್ಷತೆ ವಹಿಸಿದ್ದು ತುಮಕೂರು ನಗರ ಶಾಸಕರಾಗಿದ್ದ ಎಸ್.‌ ರಫೀಕ್‌ ಅಹಮದ್‌. ಉಳಿದಂತೆ ಲೋಕಸಭಾ ಸದಸ್ಯರಾದ ಎಸ್‌.ಪಿ. ಮುದ್ದಹನುಮೇಗೌಡ, ವಿಧಾನ ಪರಿಷತ್‌ ಸದಸ್ಯರಾಗಿರುವ ವಿ.ಎಸ್‌. ಉಗ್ರಪ್ಪನವರೂ ಇದ್ದರು.

ತುಮಕೂರು ನಗರದಲ್ಲಿ ಇಂದಿಗೂ ಕೂಡಾ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಎಂಬ ಹೆಸರಿನಲ್ಲೇ ಇರುವ ಉದ್ಯಾನವನವಿದೆ. ವಿಶೇಷವೆಂದರೆ, ಅಂದು ಉದ್ಘಾಟನೆಯಲ್ಲಿ ಭಾಗವಹಿಸಿದ ನಾಯಕರಲ್ಲಿ ಹೆಚ್ಚಿನವರು ಈಗ ಸಾವರ್ಕರ್‌ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಆಂದು ಸ್ವಾತಂತ್ರ್ಯವೀರ ಅಂತ ಹಾಡಿ ಹೊಗಳಿದವರೇ ಈಗ ಬೇರೇನೋ ಹೇಳುತ್ತಿದ್ದಾರೆ.

ನಿಜವೆಂದರೆ, ಅವರು ಆಗ ಸಾವರ್ಕರ್‌ ಪರವಾಗಿದ್ದರು. ಈಗ ವಿರೋಧಿಗಳಾಗಿದ್ದಾರೆ ಅಂತೇನೂ ಅಲ್ಲ. ಆಗ ಸಾವರ್ಕರ್‌ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೆಚ್ಚು ಅರಿವಿಲ್ಲದೆ ಇರಬಹುದು. ಹೆಸರು ಕೇಳಿ ಅವರೊಬ್ಬ ದೊಡ್ಡ ಮನುಷ್ಯ ಅನ್ನುವ ಸಾಮಾನ್ಯ ತಿಳುವಳಿಕೆ ಹೊಂದಿರಲೂಬಹುದು. ಆದರೆ, ಯಾವಾಗ ಬಿಜೆಪಿ ಸಾವರ್ಕರ್‌ ಅವರನ್ನು ಐಕಾನ್‌ ಆಗಿ ಎತ್ತಿಕೊಂಡು ಮೆರೆಸಲು ಶುರು ಮಾಡಿತೋ ಆಗ ಅವರಲ್ಲಿ ಹುಳುಕುಗಳನ್ನು ಹುಡುಕಲು ಶುರು ಮಾಡಲಾಯಿತು. ಎಲ್ಲವೂ ರಾಜಕೀಯಕ್ಕಾಗಿ ಎನ್ನುವುದಷ್ಟೇ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಇತ್ತೀಚೆಗೆ ತುಮಕೂರು ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಹಾಕಲಾಗಿದ್ದ ಸಾವರ್ಕರ್‌ ಭಾವಚಿತ್ರವನ್ನು ದುಷ್ಕರ್ಮಿಗಳು ಹರಿದು ಹಾಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ | Flex Controversy | ತುಮಕೂರಿನಲ್ಲಿ ಮತ್ತೆ ಸಾವರ್ಕರ್‌ ಚಿತ್ರವಿರುವ ಫ್ಲೆಕ್ಸ್‌ ಅಳವಡಿಸಿದ ಹಿಂದೂ ಕಾರ್ಯಕರ್ತರು

Exit mobile version