ಬೆಳಗಾವಿ: ಈ ಬಾರಿ ಬೆಳಗಾವಿಯ ಗಣೇಶೋತ್ಸವವನ್ನು ಸಾವರ್ಕರ್ ಉತ್ಸವ ಆಗಿಸಲು ಹಿಂದೂ ಸಂಘಟನೆಗಳ ಮುಖಂಡರು ಪಣ ತೊಟ್ಟಿದ್ದು, ಚಕ್ರವರ್ತಿ ಸೂಲಿಬೆಲೆ ಅವರಿಗೆ ಸಾಥ್ ನೀಡಿದ್ದಾರೆ. ಈ ಬಾರಿ ಗಣೇಶ ಮಂಟಪಗಳಲ್ಲಿ ಸಾವರ್ಕರ್ ಭಾವಚಿತ್ರವೂ ರಾರಾಜಿಸಲಿದೆ.
ಸಾವರ್ಕರ್ ಕುರಿತು ರಾಜ್ಯಾದ್ಯಂತ ಪ್ರವಾಸ ಮಾಡಿ ಚಕ್ರವರ್ತಿ ಸೂಲಿಬೆಲೆ ಜಾಗೃತಿ ಅಭಿಯಾನ ನಡೆಸುತ್ತಿದ್ದು, ಬೆಳಗಾವಿಯಲ್ಲೂ ಹಿಂದೂಪರ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿದರು. ಬೆಳಗಾವಿಯ ಸಮಾದೇವಿ ಮಂದಿರದ ಸಭಾ ಭವನದಲ್ಲಿ ಸಭೆ ನಡೆದು ವಿಶ್ವಹಿಂದು ಪರಿಷತ್, ಬಜರಂಗದಳ, ಹಿಂದೂಪರ ಸಂಘಟನೆಗಳ ಮುಖಂಡರು ಭಾಗಿಯಾದರು. ಗಣೇಶೋತ್ಸವ ಪ್ರತಿಷ್ಠಾಪನೆ ಮಾಡುವ ಮಂಡಳಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ವೀರ ಸಾವರ್ಕರ್ ಇತಿಹಾಸ ಬಗ್ಗೆ ಮಾಹಿತಿ ನೀಡಿ ಜನ ಜಾಗೃತಿ ಮಾಡಲಾಗುತ್ತದೆ. ಇದಕ್ಕಾಗಿ ಸಾವರ್ಕರ್ ಭಾವಚಿತ್ರ ಪ್ರಿಂಟ್ ತೆಗೆದುಕೊಂಡು ಗಣೇಶ ಮಂಟಪಗಳಲ್ಲಿ ಹಚ್ಚಲು ಫೇಸ್‌ಬುಕ್ ಹಾಗೂ ಗೂಗಲ್ ಡ್ರೈವ್‌ನಲ್ಲಿ ಹೈ ಡೆಫಿನಿಶನ್ ಫೋಟೋ ಅಪ್‌ಲೋಡ್ ಮಾಡಲಾಗುತ್ತದೆ. ʼʼಹೇ ಮೃತ್ಯುವೇ, ನನ್ನ ದೇಶಕ್ಕೆ ಬಲಿದಾನವಾಗುವ ನನ್ನಿಚ್ಛೆ ಪೂರೈಸಲು ನೀನು ಬರುವುದಾದರೆ; ಇಗೋ, ಎಲ್ಲ ಬಾಗಿಲನ್ನು ತೆರೆದಿಟ್ಟಿದ್ದೇನೆ!’ʼ ಎಂಬ ಸಾವರ್ಕರ್ ಮಾತೂ ಅದರಲ್ಲಿರುತ್ತದೆ ಎಂದಿದ್ದಾರೆ ಸೂಲಿಬೆಲೆ. ಅಷ್ಟೇ ಅಲ್ಲದೇ, ಸಾವರ್ಕರ್ ಕುರಿತು ತಾವು ಬರೆದಿರುವ ʼವೀರ ಸಾವರ್ಕರ್, ಸಾಹಸ ಯಾತನೆ ಅವಮಾನ’ ಕಿರುಹೊತ್ತಿಗೆಯನ್ನು ಕೇವಲ 6 ರೂ.ಗೆ ನೀಡಲು ನಿರ್ಧರಿಸಲಾಗಿದೆ. ಕಿರುಹೊತ್ತಿಗೆಗೆ ಈಗಾಗಲೇ ಒಂದು ಲಕ್ಷ ಪ್ರತಿಗಳ ಬೇಡಿಕೆ ಬಂದಿದೆ. ಇದನ್ನು ಮರಾಠಿ ಭಾಷೆಗೂ ಅನುವಾದಿಸಲು ನಿರ್ಧರಿಸಲಾಗಿದೆ ಎಂದರು.
ಸಾವರ್ಕರ್ ಜೀವನ ಚರಿತ್ರೆ ಸಾರುವ ಫ್ಲೆಕ್ಸ್ ಬೋರ್ಡ್ ಅಳವಡಿಸಲಾಗುವುದು. ಬೆಳಗಾವಿಯ ಸಾರ್ವಜನಿಕ ಗಣೇಶೋತ್ಸವಕ್ಕೆ ಶತಮಾನದ ಇತಿಹಾಸವಿದ್ದು, ಬೆಳಗಾವಿ ನಗರದಲ್ಲಿ 400ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ನಡೆಯುತ್ತದೆ. ಎಲ್ಲಾ ಮಂಟಪಗಳಲ್ಲೂ ಸಾವರ್ಕರ್ ಭಾವಚಿತ್ರ ಅಳವಡಿಸಲಾಗುತ್ತದೆ. ಪ್ರತಿವರ್ಷ 11 ದಿನಗಳು ಬೆಳಗಾವಿಯಲ್ಲಿ ನಡೆಯುವ ಅದ್ಧೂರಿ ಗಣೇಶೋತ್ಸವದಲ್ಲಿ ಒಂದು ದಿನ ಬೆಳಗಾವಿಗೆ ಬರುವಂತೆ ಹಿಂದೂಪರ ಸಂಘಟನೆಗಳು ಆಹ್ವಾನಿಸಿವೆ.
ಜಾರಕಿಹೊಳಿಗೆ ಟಾಂಗ್
ಹಿಂದೂ ಕಾರ್ಯಕರ್ತರು ಸಾವರ್ಕರ್ ಭಾವಚಿತ್ರ ಅಳವಡಿಸಿದರೆ ನಾವು ಬುದ್ಧ, ಅಂಬೇಡ್ಕರ್ ಭಾವಚಿತ್ರ ಹಾಕ್ತೀವಿ ಎಂಬ ಸತೀಶ್ ಜಾರಕಿಹೊಳಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಸೂಲಿಬೆಲೆ, ನಾಸ್ತಿಕರಾದ ಜಾರಕಿಹೊಳಿಯವರನ್ನು ಗಣೇಶೋತ್ಸವ ಪೆಂಡಾಲ್‌ಗೆ ಬರುವಂತೆ ಮಾಡಿದ್ದು ಸಾವರ್ಕರ್ ಪ್ರೇರಣೆ ಎಂದು ಚಾಟಿಯೇಟು ನೀಡಿದ್ದಾರೆ.
ಗಣೇಶೋತ್ಸವ ಪೆಂಡಾಲ್ ನಿರ್ಮಾಣಗೊಂಡಿದ್ದೇ ಮಹಾಪುರುಷರ ಪರಿಚಯಕ್ಕಾಗಿ. ಈ ಕಾರಣಕ್ಕೆ ಮತ್ತೆ ನೀವೆಲ್ಲರನ್ನೂ ಕರೆದುಕೊಂಡು ಬರುವುದಾದರೆ ಗಣೇಶೋತ್ಸವ ಸಾರ್ಥಕ. ಸತೀಶ್ ಜಾರಕಿಹೊಳಿ ದೇವರನ್ನು ನಂಬುವುದಿಲ್ಲ. ಆದರೆ ತೀರಿಕೊಂಡ ಸಾವರ್ಕರ್ ಅವರು ಜಾರಕಿಹೊಳಿಯವರನ್ನು ಪೆಂಡಾಲ್‌ವರೆಗೆ ಕರೆತಂದಿದ್ದಾರೆ ಎಂದರೆ ಎಂತಹ ಬದಲಾವಣೆ! ಸಾವರ್ಕರ್ ಅವರ ಆತ್ಮವೂ ಪ್ರೇರಣೆ ಕೊಡುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ | Veer Savarkar | ವೀರ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದೇಕೆ?
ರಸ್ತೆಯಲ್ಲಿ ಹಿಂದೂ ಕಾರ್ಯಕರ್ತರ ಕೊಲೆ
ಇತ್ತೀಚೆಗೆ ಹಿಂದೂ ಕಾರ್ಯಕರ್ತರು ರಸ್ತೆ ಮೇಲೆ ಹೋಗುವಾಗ ಅವರನ್ನು ಕೊಲ್ಲಲಾಗುತ್ತಿದೆ. ಇಂಥ ಸ್ಥಿತಿ ಇರುವಾಗ ಹಿಂದೂ ಧರ್ಮವನ್ನು ಪುನರ್‌ಸಂಘಟಿಸುವ ಅಗತ್ಯವಿದೆ. ನಮ್ಮ ಧರ್ಮ, ಚಿಂತನೆಯಲ್ಲಿ ನ್ಯೂನತೆ ಸರಿಪಡಿಸಿಕೊಂಡು ಮತ್ತೆ ಕಟ್ಟಬೇಕು. ಅದೇ ಕಾರಣಕ್ಕೆ ಸಾವರ್ಕರ್ ಮತ್ತೆ ಜೀವಂತವಾಗಿ ಬಂದಿದ್ದಾರೆ ಅನಿಸುತ್ತದೆ. ಹಿಂದೂ ಧರ್ಮ ಪುನರ್ ಸಂಘಟನೆಗೆ ಸಾವರ್ಕರ್ ಜೀವಂತಗೊಂಡಿದ್ದಾರೆ ಎಂದು ಸೂಲಿಬೆಲೆ ಹೇಳಿದ್ದಾರೆ.
ಅಖಾಡಕ್ಕಿಳಿದ ಕಾರ್ಯಕರ್ತರು
ಹಿಂದೂ ಸಂಘಟನೆ ಮುಖಂಡರ ಬಳಿಕ ಬಿಜೆಪಿ ಕಾರ್ಯಕರ್ತರೂ ಗಣೇಶೋತ್ಸವ ಅಖಾಡಕ್ಕೆ ಇಳಿದಿದ್ದು, ವೀರ ಸಾವರ್ಕರ್ ಬಗ್ಗೆ ಜಾಗೃತಿ ಬಗ್ಗೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ಆಟೋಗಳಲ್ಲಿ ಸಾವರ್ಕರ್ ಭಾವಚಿತ್ರ ಅಂಟಿಸುತ್ತಿದ್ದಾರೆ. ಬಿಜೆಪಿ ಮುಖಂಡ ಮಹಾಂತೇಶ ಒಕ್ಕುಂದ ನೇತೃತ್ವದಲ್ಲಿ ಸಾವರ್ಕರ್ ಫೋಟೊ ಅಂಟಿಸುವ ಅಭಿಯಾನ ನಡೆಯುತ್ತಿದೆ.
ಇದನ್ನೂ ಓದಿ | ಸಾವರ್ಕರ್ ಕುರಿತ ಸತ್ಯವನ್ನು ಎಲ್ಲರಿಗೂ ತಿಳಿಸಲು ಪುಸ್ತಕ ಪ್ರಕಟಿಸಿದ್ದೇವೆ ಎಂದಿದ್ದಾರೆ ಚಕ್ರವರ್ತಿ ಸೂಲಿಬೆಲೆ