ಉಡುಪಿ: ಇಲ್ಲಿನ ಪ್ರತಿಷ್ಠಿತ ಬ್ರಹ್ಮಗಿರಿ ಸರ್ಕಲ್‌ಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಹೆಸರಿಡಬೇಕೇ? ಅಥವಾ ಅಜಾಶತ್ರು ರಾಜಕಾರಣಿ, ಕಾಂಗ್ರೆಸ್ ನಾಯಕರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ಹೆಸರಿಡಬೇಕೇ ಎನ್ನುವ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಹಾಗಂತ ಇದು ಬಿಜೆಪಿ, ಕಾಂಗ್ರೆಸ್ ನಡುವಿನ ವಿವಾದವೇನೂ ಅಲ್ಲ. ಬಿಜೆಪಿಯೊಳಗೇ ಇಬ್ಬರು ನಾಯಕರ ನಡುವಿನ ಫೈಟ್ ಇದು. ಬ್ರಹ್ಮಗಿರಿ ಸರ್ಕಲ್ ಎನ್ನುವುದು ರಾಷ್ಟ್ರೀಯ ಹೆದ್ದಾರಿಯಿಂದ ಉಡುಪಿ ನಗರ ಪ್ರವೇಶಿಸುವ ರಸ್ತೆಯಲ್ಲಿ ಸಿಗುವ ಪ್ರಮುಖ ವೃತ್ತ. ಇಲ್ಲಿ ಫೈಟಿಗೆ ನಿಂತಿರುವ ಬಿಜೆಪಿ ನಾಯಕರು ಯಾರೆಂದರೆ ಶಾಸಕ ರಘುಪತಿ ಭಟ್ ಮತ್ತು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ.
ಆಸ್ಕರ್ ಹೆಸರು ಇಡಲು ನಿರ್ಧರಿಸಲಾಗಿತ್ತು
ಉಡುಪಿ ಸಂಸದರೂ, ಕೇಂದ್ರದಲ್ಲಿ ಸಚಿವರೂ ಆಗಿ ಬಹುಕಾಲ ರಾಜಕೀಯ ನಾಯಕರಾಗಿ ಮರೆದಿದ್ದ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರು ೨೦೨೧ರ ಸೆಪ್ಟೆಂಬರ್ ೧೩ರಂದು ನಿಧನರಾಗಿದ್ದರು. ಅವರು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದರೂ ಎಲ್ಲ ಪಕ್ಷಗಳ ಜತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಜತೆಗೆ ಅಜಾತಶತ್ರು ಎಂಬ ಹೆಸರು ಪಡೆದಿದ್ದರು. ಅವರ ನಿಧನದ ಸಂದರ್ಭದಲ್ಲಿ ಮಾತನಾಡಿದ್ದ ಶಾಸಕ ರಘುಪತಿ ಭಟ್ ಅವರು ಬ್ರಹ್ಮಗಿರಿ ಸರ್ಕಲ್‌ಗೆ ಆಸ್ಕರ್ ಹೆಸರಿಡಲಾಗುವುದು ಎಂದು ಪ್ರಕಟಿಸಿದ್ದರು. ಮುಂದೆ ಈ ಬಗ್ಗೆ ನಗರಸಭೆಯಲ್ಲಿ ನಿರ್ಣಯವೂ ಆಗಿದೆ ಎನ್ನಲಾಗಿದೆ.
ಎದ್ದು ಬಂದ ಸಾವರ್ಕರ್ ವಿವಾದ
ಈ ನಡುವೆ ಕಳೆದ ಆಗಸ್ಟ್ ೧೫ರ ಸ್ವಾತಂತ್ರ್ಯ ದಿನಾಚರಣೆ ಬೆನ್ನಿಗೇ ಶಿವಮೊಗ್ಗದಲ್ಲಿ ಮೊದಲ್ಗೊಂಡು ಸ್ವಾತಂತ್ರ್ಯ ವೀರ ಸಾವರ್ಕರ್ ಅವರು ಮತ್ತೆ ಸುದ್ದಿ ಕೇಂದ್ರ ಬಿಂದುವಾದರು. ಈ ವೇಳೆ ಬ್ರಹ್ಮಗಿರಿ ವೃತ್ತದಲ್ಲಿ ವಿ.ಡಿ. ಸಾವರ್ಕರ್ ಅವರ ಫ್ಲೆಕ್ಸ್‌ಗಳನ್ನು ಬಿಜೆಪಿ ನಾಯಕ ಯಶಪಾಲ್ ಸುವರ್ಣರ ನೇತೃತ್ವದಲ್ಲಿ ಹಾಕಲಾಗಿತ್ತು. ಆಗ ಎಸ್‌ಡಿಪಿಐ ಮತ್ತಿತರ ಸಂಘಟನೆಗಳು ಆಕ್ಷೇಪಿಸಿದ್ದವು. ಈ ಸಂದರ್ಭದಲ್ಲಿ ಹಬ್ಬಗಳೂ ಬಂದಿದ್ದರಿಂದ ವಿವಾದ ಬೇಡ ಎಂದು ಪೊಲೀಸರು ಮನವೊಲಿಸಿ ಫ್ಲೆಕ್ಸ್‌ಗಳನ್ನು ತೆಗೆಸಿದ್ದರು. ಆವತ್ತು ಫ್ಲೆಕ್ಸ್ ತೆಗೆಯುವ ಸಂದರ್ಭದಲ್ಲಿ ಯಶಪಾಲ್ ಸುವರ್ಣ ಅವರು ಒಂದು ಘೋಷಣೆ ಮಾಡಿದ್ದರು. ಬ್ರಹ್ಮಗಿರಿ ಸರ್ಕಲ್‌ಗೆ ವಿ.ಡಿ. ಸಾವರ್ಕರ್ ಅವರ ಹೆಸರು ಇಡಲಾಗುವುದು, ಸರ್ಕಲ್‌ನಲ್ಲಿ ಸಾವರ್ಕರ್ ಅವರ ದೊಡ್ಡ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದಿದ್ದರು. ಅದೆಲ್ಲ ಕಳೆದು ಸ್ವಲ್ಪ ದಿನವಾಗುತ್ತಿದ್ದಂತೆಯೇ ಯಶಪಾಲ್ ಸುವರ್ಣರು ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಆಗ ಆಸ್ಕರ್ ಹೆಸರಿಡಲು ಮಾಡಿದ್ದ ನಿರ್ಣಯ ಮುನ್ನೆಲೆಗೆ ಬಂದಿದೆ.
ಬ್ರಹ್ಮಗಿರಿ ಸರ್ಕಲ್-ಚಿತ್ತರಂಜನ್ ಸರ್ಕಲ್
ಬ್ರಹ್ಮಗಿರಿ ಸರ್ಕಲ್‌ಗೆ ಸಾವರ್ಕರ್ ಹೆಸರು ಇಡಬೇಕು ಎನ್ನುವ ಪ್ರಸ್ತಾವನೆ ಚರ್ಚೆಗೆ ಬಂದಾಗ ಶಾಸಕ ರಘುಪತಿ ಭಟ್ ಇದನ್ನು ಆಕ್ಷೇಪಿಸಿದ್ದಾರೆ. ಈ ಸರ್ಕಲ್‌ಗೆ ಮೊದಲೇ ಆಸ್ಕರ್ ಹೆಸರು ಇಡಲು ನಿರ್ಧಾರವಾಗಿರುವುದರಿಂದ ಗೊಂದಲ ಮಾಡುವುದು ಬೇಡ. ಸಾವರ್ಕರ್ ಹೆಸರನ್ನು ಚಿತ್ತರಂಜನ್ ಸರ್ಕಲ್‌ಗೆ (ಹಳೆ ತಾಲೂಕು ಆಫೀಸು ಬಳಿ) ಇಡಬಹುದು, ಅಲ್ಲೇ ಪ್ರತಿಮೆಯನ್ನೂ ಸ್ಥಾಪಿಸಬಹುದು ಎಂದು ಎಂಬ ಸಲಹೆ ನೀಡಿದ್ದಾರೆ. ಇದು ಯಶಪಾಲ್ ಸುವರ್ಣ ಅವರಿಗೆ ಒಪ್ಪಿಯಾಗಿಲ್ಲ. ಅವರ ಪ್ರಕಾರ ಆಸ್ಕರ್ ಹೆಸರು ಬೇರೆಲ್ಲಾದರೂ ಇಡಬಹುದು.
ಹಾಗಿದ್ದರೆ ಯಶಪಾಲ್ ಸುವರ್ಣ ಹೇಳುವುದೇನು?
ʻʻನಮ್ಮ ಆದರ್ಶ ವ್ಯಕ್ತಿ ವೀರ ಸಾವರ್ಕರ್ ಕುರಿತಾಗಿ ನಮಗೆ ಸಾಕಷ್ಟು ಗೌರವವಿದೆ. ಬ್ರಹ್ಮಗಿರಿ ಸರ್ಕಲ್‌ಗೆ ಅವರ ಹೆಸರಿಡುವ, ಪ್ರತಿಮೆ ಸ್ಥಾಪಿಸುವ ಬಗ್ಗೆ ಸರ್ಕಾರಕ್ಕೆ ನಾವು ಈಗಾಗಲೇ ಮನವಿ ಮಾಡಿದ್ದೇವೆ. ಇವತ್ತಲ್ಲ ನಾಳೆ ಬ್ರಹ್ಮಗಿರಿ ಸರ್ಕಲ್ ನಲ್ಲೇ ಸಾವರ್ಕರ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿಯೇ ಮಾಡುತ್ತೇವೆ. ಸಾವರ್ಕರ್ ಓರ್ವ ದೇಶಭಕ್ತ ಅವರಿಗೆ ಉಡುಪಿಯ ಜನತೆ ಗೌರವವನ್ನು ಸಲ್ಲಿಸುತ್ತಿದ್ದಾರೆ. ಇಂದು ಹಿಂದುತ್ವಕ್ಕೆ ಸಂಘಟನೆಗೆ ಶಕ್ತಿ ನೀಡಿದ್ದು ಉಡುಪಿ. ಹಾಗಾಗಿ ಸಾವರ್ಕರ್ ಅವರ ಪ್ರತಿಮೆಯನ್ನು ನಿರ್ಮಿಸುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಈ ಬಗ್ಗೆ ಸರಕಾರ, ಶಾಸಕರು, ಸ್ಥಳೀಯ ನಗರಸಭೆಯ ಗಮನಕ್ಕೆ ತಂದು ಪ್ರತಿಮೆಯನ್ನು ನಿರ್ಮಿಸುತ್ತೇವೆʼʼ ಎಂದಿದ್ದಾರೆ ಯಶಪಾಲ್ ಸುವರ್ಣ.
ನಿರ್ಣಯ ಬದಲಿಸಲು ಮನವಿ ಮಾಡುತ್ತೇವೆ
ಆಸ್ಕರ್ ಫರ್ನಾಂಡಿಸ್ ಅವರು ತೀರಿಕೊಂಡ ನಂತರ ಶಾಸಕರು ಬ್ರಹ್ಮಗಿರಿ ಸರ್ಕಲ್‌ಗೆ ಆಸ್ಕರ್ ಹೆಸರಿಡಲು ತೀರ್ಮಾನ ಮಾಡಿದ್ದು ನಿಜ. ಆ ಸಂದರ್ಭದಲ್ಲಿ ಇಂತಹ ಪರಿಸ್ಥಿತಿಗಳು ಇರಲಿಲ್ಲ. ಈಗ ನಿರ್ಣಯವನ್ನು ಸೂಕ್ತ ಚೌಕಟ್ಟಿನಲ್ಲಿ ತಿದ್ದುಪಡಿ ಮಾಡುವ ಅವಶ್ಯಕತೆ ಇದೆ. ಈ ಬಗ್ಗೆ ಮನವಿ ಮಾಡುತ್ತೇವೆ ಎಂದು ಯಶಪಾಲ್ ಸುವರ್ಣ ಹೇಳಿದ್ದಾರೆ.
ʻʻಒಂದು ಬಾರಿ ಮಾಡಿದ ನಿರ್ಣಯವನ್ನು ವಾಪಾಸ್ ತೆಗೆದುಕೊಳ್ಳುವುದು ತುಂಬಾ ಕಷ್ಟದ ಕೆಲಸ ಎನ್ನುವುದು ಗೊತ್ತಿದೆ. ಕಾನೂನು ಬದ್ಧವಾಗಿ ಮಾಡಿದ ನಿರ್ಣಯವನ್ನು ವಾಪಾಸ್ ಪಡೆದು ಪುನಃ ಅರ್ಜಿ ಸಲ್ಲಿಸಬೇಕಾಗುತ್ತದೆ. ನಗರ ಸಭೆಗೆ ತನ್ನದೇ ಆದ ಕಾನೂನು ಚೌಕಟ್ಟು ಇದೆ. ಕಾನೂನಿನ ಚೌಕಟ್ಟಿನೊಳಗೆ ನಾವು ಕೆಲಸ ಮಾಡಲು ಸಿದ್ಧʼʼ ಎಂದಿದ್ದಾರೆ.
ಆಸ್ಕರ್ ಹೆಸರು ಬೇರೆಡೆಗೆ ಇಡಬಹುದು
ರಾಜಕೀಯವಾಗಿ, ಸಂಸದರಾಗಿ ಈ ಭಾಗದಲ್ಲಿ ಕೆಲಸ ಮಾಡಿದ ಆಸ್ಕರ್ ಅವರಿಗೂ ಸ್ವಾತಂತ್ರ್ಯ ವೀರ ಸಾವರ್ಕರ್ ಅವರಿಗೂ ವ್ಯತ್ಯಾಸವಿದೆ. ಆಸ್ಕರ್ ಅವರ ಹೆಸರನ್ನು ಬಸ್ ನಿಲ್ದಾಣ, ಯಾವುದೇ ಸರಕಾರಿ ಕಚೇರಿಗಳಿಗೆ ಇಡಲು ಅವಕಾಶವಿದೆ. ಆದರೆ, ಸಾವರ್ಕರ್ ಹಾಗಲ್ಲ ಎಂದಿದ್ದಾರೆ ಅವರು.