Site icon Vistara News

Save Nandini:‌ ಕನ್ನಡ ಬಳಸುತ್ತಿರುವುದಕ್ಕೇ ನಂದಿನಿಯನ್ನು ನಾಶಪಡಿಸಲು ಬಿಜೆಪಿ ಮುಂದಾಗಿದೆ: ಎಐಸಿಸಿ ವಕ್ತಾರ ಗೌರವ್‌ ವಲ್ಲಭ್‌

save nandini bjp attacking nandini because it uses kannada says gaurav vallabh of congress

#image_title

ಬೆಂಗಳೂರು: ನಂದಿನಿ ಉತ್ಪನ್ನದಲ್ಲಾಗಲಿ, ಸರಬರಾಜಿನಲ್ಲಾಗಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಬರೆಯಲಾಗಿದೆ ಎನ್ನುವುದೇ ಅಮಿತ್‌ ಶಾ ಹಾಗೂ ನರೇಂದ್ರ ಮೋದಿ ಇದನ್ನು ನಾಶಪಡಿಸಲು ಮುಂದಾಗಿರುವುದಕ್ಕೆ ಪ್ರಮುಖ ಕಾರಣ ಎಂದು ಎಐಸಿಸಿ ವಲ್ತಾರ ಗೌರವ್‌ ವಲ್ಲಭ್‌ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌರವ್‌ ವಲ್ಲಭ್‌, ಮೋದಿ ಸರ್ಕಾರ ಪ್ರತಿ ರಾಜ್ಯಗಳಲ್ಲಿ ಅದರದೇ ಆದ ಹೆಮ್ಮೆಯ ಸಂಸ್ಥೆಗಳನ್ನು ನಾಶ ಮಾಡಲು ಮುಂದಾಗುತ್ತಿದೆ. ಇದಕ್ಕೆ ಸೂಕ್ತ ಉದಾಹರಣೆ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ವಿರುದ್ಧದ ದಾಳಿ. ನಂದಿನಿ ಬ್ರ್ಯಾಂಡ್‌ನಲ್ಲಿ ಯಾವ ಲೋಪದೋಷವಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ನಂದಿನಿ ವಿರುದ್ಧ ನಿಂತಿದ್ದಾರೆ? ನಂದಿನಿ ಉತ್ಪನ್ನಗಳಲ್ಲಿ ಯಾವ ದೋಷವಿದೆ? ಈ ಉತ್ಪನ್ನಗಳ ಮೇಲೆ ಕನ್ನಡ ಭಾಷೆ ಬಳಸಲಾಗಿದೆ ಎಂಬುದು ನಿಮ್ಮ ಸಮಸ್ಯೆಯೇ? ಎಂದರು.

ಮೋದಿ ಹಾಗೂ ಅಮಿತ್ ಶಾ ಅವರು ನಂದಿನಿ ಉತ್ಪನ್ನಗಳ ರುಚಿ ನೋಡಬೇಕು. ಇದು ಕರ್ನಾಟಕದ ಹೆಮ್ಮೆ. ಆರೂವರೆ ಕೋಟಿ ಜನರ ಈ ಹೆಮ್ಮೆಯನ್ನು ಯಾಕೆ ತುಳಿಯಲು ಹೊರಟಿದ್ದೀರಿ? ಇದರಿಂದ ಏನು ಸಾಧಿಸಲು ಹೊರಟಿದ್ದೀರಿ? ಅಮಿತ್ ಶಾ ಅವರೇ ಸಹಕಾರಿ ಸಚಿವಾಲಯದ ಮೂಲ ಉದ್ದೇಶವೇನು? ನೀವು ಸಹಕಾರ ಕ್ಷೇತ್ರದಲ್ಲೂ ಸ್ಪರ್ಧೆ ತರಲು ಹೊರಟಿದ್ದೀರಿ. ಉದ್ದೇಶಪೂರ್ವಕವಾಗಿ ಇದನ್ನು ಯಾಕೆ ಮಾಡುತ್ತಿದ್ದೀರಿ? ನಂದಿನಿ ಆಶ್ರಯದಲ್ಲಿ ಸುಮಾರು 2 ಕೋಟಿ ಜನರು ಆಶ್ರಯ ಪಡೆದಿದ್ದಾರೆ.

ಮೋದಿ ಅವರೇ ಇನ್ನು ಒಂದು ತಿಂಗಳು ಮೂರು ದಿನಗಳು ಮಾತ್ರ ಬಾಕಿ ಇವೆ. ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಂತರ ಕರ್ನಾಟಕದ ಹೆಮ್ಮೆಯ ಸಂಸ್ಥೆಗಳನ್ನು ಯಾರೂ ಕೂಡ ಮುಟ್ಟಲು ಸಾಧ್ಯವಿಲ್ಲ. ದೆಹಲಿಯಲ್ಲಿ ಕೂತು ಕರ್ನಾಟಕದ ಹೆಮ್ಮೆಯ ಸಂಸ್ಥೆಗಳ ಭವಿಷ್ಯ ನಿರ್ಧರಿಸಲು ಬಿಡುವುದಿಲ್ಲ. ನಂದಿನಿ ಬ್ರ್ಯಾಂಡ್ ರೈತರು, ಕಾರ್ಮಿಕರ ಪರಿಶ್ರಮದ ಫಲವಾಗಿದೆ. ಪ್ರತಿಯೊಬ್ಬ ಕನ್ನಡಿಗನೂ ಈ ಬ್ರ್ಯಾಂಡ್ ಬಗ್ಗೆ ಹೆಮ್ಮೆ ಹೊಂದಿದ್ದಾನೆ. ಮೋದಿ ಅವರು ಒಮ್ಮೆ ಇದರ ರುಚಿ ನೋಡಲಿ, ಅವರು ತಮ್ಮ ನಿಲುವು ಬದಲಿಸಬಹುದು. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರೂ ಇದಕ್ಕೆ ಉತ್ತೇಜನ ನೀಡುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದರು.

ನಂದಿನಿ ವಿನಾಶಕ್ಕೆ ಬಿಜೆಪಿ ಯಾಕೆ ಮುಂದಾಗಿದೆ ಎಂದು ಕೇಳಿದಾಗ, ನಾವು ಯಾವುದೇ ಇತರೆ ಸಂಸ್ಥೆಗಳ ವಿರುದ್ಧವಿಲ್ಲ. ಬಿಜೆಪಿಯವರಿಗೆ ಇರುವ ಸಮಸ್ಯೆ ಎಂದರೆ ಈ ಉತ್ಪನ್ನಗಳ ಮೇಲೆ ಕನ್ನಡವನ್ನು ಬಳಸಲಾಗಿದೆ. ಅದರ ಹೊರತಾಗಿ ಬಿಜೆಪಿಗರು ಆಕ್ಷೇಪಿಸುವಂತಹ ಯಾವುದೇ ಅಂಶಗಳು ಇದರಲ್ಲಿಲ್ಲ. ಮೋದಿ ಹಾಗೂ ಅಮಿತ್ ಶಾ ಅವರಿಗೆ ಅಜೆಂಡಾ ಇರಬಹುದು. ಆದರೆ ರಾಜ್ಯದ ಸಂಸದರಿಗೆ ಏನಾಗಿದೆ? ರಾಜ್ಯದ ಜನರ ಪಾಲಿಗೆ ನಂದಿನಿ ಯಾವ ಸ್ಥಾನದಲ್ಲಿದ್ದಾಳೆ ಎಂಬುದನ್ನು ಪ್ರತಿಯೊಬ್ಬ ಕನ್ನಡಿಗರು 2024ರಲ್ಲಿ ಬಿಜೆಪಿಯವರಿಗೆ ಉತ್ತರ ನೀಡುತ್ತಾರೆ. ಮುಂದಿನ ತಿಂಗಳು ಕರ್ನಾಟಕದ ಹೆಮ್ಮೆಯನ್ನು ಸಂರಕ್ಷಣೆ ಮಾಡಲಾಗುವುದು’ ಎಂದು ತಿಳಿಸಿದರು.

ಇದನ್ನೂ ಓದಿ” Save Nandini: ಗೋಹತ್ಯೆ ಬೆಂಬಲಿಸಿದವರು ನಂದಿನಿ ಉಳಿಸಲು ಮುಂದಾಗಿದ್ದಾರೆ: ಕಾಂಗ್ರೆಸ್‌ ವಿರುದ್ಧ ಎನ್‌. ರವಿಕುಮಾರ್‌ ಟೀಕೆ

Exit mobile version