Site icon Vistara News

Say CM | ಕಡತವನ್ನೇ ರಕ್ಷಿಸಲಾಗದವರು ರಾಜ್ಯ ರಕ್ಷಿಸಲು ಸಾಧ್ಯವೇ?; Say Cm ಎಂದು ಟ್ವೀಟ್‌ ಮಾಡಿದ ಕಾಂಗ್ರೆಸ್‌

cm bommai

ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯ ಕಡತ ವಾಪಸ್ ಬಂದಿಲ್ಲ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿರುವ ರಾಕೇಶ್ ಸಿಂಗ್ ಸಿಎಂ ಕಚೇರಿಗೆ ಪತ್ರ ಬರೆದಿದ್ದರು. ಈಗ ಇದೇ ವಿಚಾರವನ್ನು ಕಾಂಗ್ರೆಸ್‌ ಪಕ್ಷ ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದೆ. ಕಡತವನ್ನೇ ರಕ್ಷಣೆ ಮಾಡಿಕೊಳ್ಳಲು ಆಗದವರು ಇನ್ನು ರಾಜ್ಯವನ್ನು ಹೇಗೆ ರಕ್ಷಿಸುತ್ತೀರಿ? ಎಂದು ಪ್ರಶ್ನೆ ಮಾಡುವ ಮೂಲಕ ಸೇ ಸಿಎಂ (Say CM) ಅಭಿಯಾನದ ಭಾಗವಾಗಿ ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮೂಲಕ ಕುಟುಕಿದೆ.

ಟ್ವೀಟ್ ಮಾಡಿ ವ್ಯಂಗ್ಯ ಮಾಡಿರುವ ರಾಜ್ಯ ಕಾಂಗ್ರೆಸ್, ಸಿಎಂ ಕಚೇರಿಯಲ್ಲಿರುವ ಲಂಚ, ಮಂಚದ ಪರಿಣಾಮ ಮಹತ್ವದ ಕಡತಗಳೇ ನಾಪತ್ತೆಯಾಗುವ ಸ್ಥಿತಿ ಬಂದೊದಗಿದೆ. ಸಿಎಂ ಕಾರ್ಯದರ್ಶಿಯ ಹನಿಟ್ರ್ಯಾಪ್ ಪ್ರಕರಣವನ್ನು ಬಿಜೆಪಿ ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದರ ಹಿಂದೆ ಅತಿ ದೊಡ್ಡ ಹಗರಣ ಇರುವುದು ನಿಶ್ಚಿತ. ಬಸವರಾಜ ಬೊಮ್ಮಾಯಿ ಅವರೇ, ಹನಿಟ್ರ್ಯಾಪ್‌ನಿಂದಾಗಿ ಇನ್ನೂ ಯಾವ ಅನಾಹುತಗಳು ಜರುಗಿವೆ? ಎಂದು ಪ್ರಶ್ನೆ ಮಾಡಿದೆ.

ಸಿಎಂ ಆಪ್ತ ಕಾರ್ಯದರ್ಶಿಯ ಹನಿಟ್ರ್ಯಾಪ್ ವಿಚಾರಕ್ಕೂ, ಕಡತ ಕಾಣೆಯಾಗಿರುವುದಕ್ಕೂ ಸಂಬಂಧವಿದೆಯೇ? ಸಿಎಂ ಕಚೇರಿಯು ಬಸವರಾಜ ಬೊಮ್ಮಾಯಿ ಅವರ ಹಿಡಿತದಲ್ಲಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮುಂದುವರಿದು, ಬಿಬಿಎಂಪಿಗೆ ಸಂಬಂಧಿಸಿದ ಮಹತ್ವದ ಕಡತವನ್ನೇ ರಕ್ಷಿಸಲಾಗದವರು ರಾಜ್ಯವನ್ನು ರಕ್ಷಿಸಲು ಸಾಧ್ಯವೇ? ಎಂದು ಟ್ವೀಟ್‌ ಮಾಡಿದ್ದು, Say Cm ಎಂದು ಹ್ಯಾಷ್‌ ಟ್ಯಾಗ್‌ ಮಾಡಿದ್ದಾರೆ.

ಸಿಎಂ ಕಚೇರಿಯಲ್ಲಿ ಮಹತ್ವದ ಕಡತಗಳು ನಾಪತ್ತೆಯಾಗಿರುವುದಕ್ಕೆ ಯಾವ ಕಾರಣ ಹುಡುಕುತ್ತಿದ್ದೀರಿ ಬೊಮ್ಮಾಯಿ ಅವರೇ, ಇಲಿ ಕಚ್ಚಿಕೊಂಡು ಹೋಯಿತೇ? ಹೆಗ್ಗಣ ಹೊತ್ತುಕೊಂಡು ಹೋಯಿತೇ? ಗಾಳಿಯಲ್ಲಿ ಹಾರಿ ಹೋಯಿತೇ? ಅಥವಾ ಉತ್ತರ ಪ್ರದೇಶದಲ್ಲಿ 500 ಕೆಜಿ ಗಾಂಜಾವನ್ನು ಇಲಿಗಳು ತಿಂದವಂತೆ! ನಿಮ್ಮದು “ಯುಪಿ ಮಾಡೆಲ್” ಅಲ್ಲವೇ, ನೀವೂ ಅದೇ ಕಾರಣ ಕೊಡುವಿರಾ? ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಪ್ರಶ್ನೆ ಮಾಡಿದೆ.

ಏನಿದು ಕಡತ ನಾಪತ್ತೆ ಪ್ರಕರಣ?
ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸಿಎಂ ಕಚೇರಿಗೆ ಟಿಪ್ಪಣಿ ಪತ್ರ ಬರೆದಿದ್ದು, ಕಳೆದ ವರ್ಷ ಡಿಸೆಂಬರ್‌ 7ರಂದು ಕಳುಹಿಸಿದ್ದ ಕಡತವೊಂದು ವಾಪಸ್‌ ಬಂದಿಲ್ಲ. ಬಿಬಿಎಂಪಿ ಜಾಹೀರಾತು ನಿಯಮ 2019 ಫೈಲ್ ವಾಪಸ್ ಬಂದಿಲ್ಲ, ಈಗ ಲೆಕ್ಕ ಪತ್ರ ಸಮಿತಿ ಆ ಕಡತ ಕೇಳುತ್ತಿದ್ದು. ಒಂದು ಕಡತ ಯಥಾಸ್ಥಿತಿ ವಾಪಸ್ ನೀಡಿ ಅಥವಾ ಆದೇಶ ಮಾಡಿ ಕಳುಹಿಸಿ ಎಂದು ಪತ್ರ ಬರೆದು ಮನವಿ ಮಾಡಿದ್ದರು.

ಕಡತ ಯಾಕಿಷ್ಟು ಮುಖ್ಯ?
ರಾಜಧಾನಿ ಬೆಂಗಳೂರಿಗೆ ಸಂಬಂಧಿಸಿದ ಯಾವುದೇ ನಿರ್ಧಾರ, ನಿಯಮ, ಅಭಿವೃದ್ಧಿ ಕಾಮಗಾರಿ ಯಾವುದಿದ್ದರೂ ಅದು ಸಿಎಂ ಕಚೇರಿಯಿಂದ ಅನುಮೋದನೆ ಪಡೆದುಕೊಂಡು ಬರಬೇಕು. ಹೀಗೆ ಅನುಮೋದನೆಗೆ ಸಿಎಂ ಕಚೇರಿಗೆ ಹೋಗಿದ್ದ ಕಡತವೊಂದು 11 ತಿಂಗಳಾದರೂ ವಾಪಸ್ (File Missing) ಬಂದಿಲ್ಲ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಜಾಹೀರಾತು ನಿಯಮ ಜಾರಿಗೆ ಬರಬೇಕಾ? ಬಂದರೆ ನಿಯಮ ಹೇಗಿರಬೇಕು? ದರ ಎಷ್ಟಿರಬೇಕು? ಎಲ್ಲೆಲ್ಲಿ ಜಾಹೀರಾತಿಗೆ ಅವಕಾಶ ನೀಡಬೇಕು ಎಂದು ಜಾಹೀರಾತು ರೂಲ್ 2019ರಲ್ಲಿ ಬರೆಯಲಾಗಿತ್ತು. ಅನುಮೋದನೆ ನೀಡಬೇಕಾಗಿದ್ದ ಕಾರಣ 2021ರ ಡಿಸೆಂಬರ್ 7ರಂದು ನಗರಾಭಿವೃದ್ಧಿ ಇಲಾಖೆ ಸಿಎಂ ಕಚೇರಿಗೆ ಕಡತ ಕಳುಹಿಸಿತ್ತು. ಆದರೆ ಅದೇ ಈಗ ನಾಪತ್ತೆಯಾಗಿದೆ.

ಇದನ್ನೂ ಓದಿ | File Missing | ಸಿಎಂ ಕಚೇರಿಗೆ ಹೋದ ಕಡತ ನಾಪತ್ತೆ! ನಗರಾಭಿವೃದ್ಧಿ ಇಲಾಖೆಯ ಫೈಲ್‌ ನಿಜಕ್ಕೂ ಎಲ್ಲಿ ಹೋಯ್ತು?

Exit mobile version