ಬೆಂಗಳೂರು: “ಲಿಂಗಾಯತ ಸಿಎಂ ಭ್ರಷ್ಟಾಚಾರ ಎಸಗಿ, ರಾಜ್ಯವನ್ನು ಹಾಳು ಮಾಡಿದ್ದಾರೆ” ಎಂದು ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ಮುಖಂಡರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಲಿಂಗಾಯತ ವಿರೋಧಿಗಳು ಎಂದೇ ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ, ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿದ್ದರಾಮಯ್ಯ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದೆ. ಲಿಂಗಾಯತ ಯುವ ವೇದಿಕೆಯ ಕಾನೂನು ಘಟಕದಿಂದ ದೂರು ಸಲ್ಲಿಸಲಾಗಿದೆ.
ಲಿಂಗಾಯತ ಸಿಎಂ ಕುರಿತು ಸಿದ್ದರಾಮಯ್ಯ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಲಿಂಗಾಯತ ಯುವ ವೇದಿಕೆ ಮುಖಂಡ ಬಸವರಾಜ್ ದೂರು ದಾಖಲಿಸಿದ್ದಾರೆ. “ಸಿದ್ದರಾಮಯ್ಯ ಅವರು ಕೇವಲ ವ್ಯಕ್ತಿಯನ್ನು ನಿಂದನೆ ಮಾಡಿಲ್ಲ. ಅವರು ಇಡೀ ಲಿಂಗಾಯತ ಸಮುದಾಯವನ್ನು ನಿಂದಿಸಿದ್ದಾರೆ. ಲಿಂಗಾಯತ ಸಿಎಂರಿಂದ ಭ್ರಷ್ಟಾಚಾರ ಎಂದು ಹೇಳಿಕೆ ನೀಡಿರುವುದು ಸಮಂಜಸವಲ್ಲ. ನಾವು ಯಾವುದೇ ಪಕ್ಷದ ಪರವಾಗಿ ದೂರು ನೀಡಲು ಬಂದಿಲ್ಲ. ಲಿಂಗಾಯತ ಸಮುದಾಯದ ಪರವಾಗಿ ದೂರು ನೀಡಲಾಗಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಚುನಾವಣೆ ಆಯೋಗಕ್ಕೆ ಮನವಿ ಮಾಡಲಾಗಿದೆ” ಎಂದು ಬಸವರಾಜ್ ಮಾಹಿತಿ ನೀಡಿದರು.
ಹೇಳಿಕೆ ತಿರುಚಲಾಗಿದೆ ಎಂದ ಸಿದ್ದರಾಮಯ್ಯ
ಕೂಡಲಸಂಗಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಲಿಂಗಾಯತ ಮುಖ್ಯಮಂತ್ರಿ ಭ್ರಷ್ಟ ಎಂಬ ಹೇಳಿಕೆ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಾನು ವಿವಾದಾತ್ಮಕವಾಗಿ ಮಾತನಾಡಿದ್ದೇನೆ ಅಂತ ಯಾರು ಹೇಳಿದ್ದಾರೆ? ನಾನು ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟೇ ಇಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದರು.
ಲಿಂಗಾಯತರನ್ನು ಎಲೆಕ್ಷನ್ ಕಾರ್ಡ್ ಮಾಡಿಕೊಂಡಿದ್ದಾರೆಂದು ಅವರೇ ಕೇಳಿದರು. ನಾನದಕ್ಕೆ ಉತ್ತರ ಕೊಟ್ಟೆ. ಲಿಂಗಾಯತ ಸಮುದಾಯದವರು ಬಹಳ ಒಳ್ಳೆ ಮುಖ್ಯಮಂತ್ರಿ ಆಗಿದ್ದರು. ನಿಜಲಿಂಗಪ್ಪ ಅವರು ಸಹ ಒಳ್ಳೇ ಸಿಎಂ ಆಗಿದ್ದರು. ಅವರು ಎಐಸಿಸಿ ಅಧ್ಯಕ್ಷರಾಗಿದ್ದರು. ವೀರೇಂದ್ರ ಪಾಟೀಲ್ ಅವರು ದಕ್ಷ ಸಿಎಂ ಆಗಿದ್ದರು. ನಾನು ಹೇಳಿದ್ದು ಬಸವರಾಜ್ ಬೊಮ್ಮಾಯಿ ಬಂದ ಮೇಲೆ ಕರಪ್ಟ್ ಆಗಿಬಿಟ್ಟಿದ್ದಾರೆ ಎಂದಷ್ಟೇ ಹೇಳಿದ್ದೇನೆ. ಲಿಂಗಾಯತರ ಜಾತಿ ಅಂತ ಹೇಳಿಲ್ಲ. ಅದಕ್ಕೆ ಎಲ್ಲವನ್ನೂ ಸೇರಿಸಿ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.