ಶಿವಮೊಗ್ಗ: ಪರಿಶಿಷ್ಟ ಜಾತಿಗೆ ಮೀಸಲಾದ ಶೇ. 17 ಮೀಸಲಾತಿಯಲ್ಲಿ ಒಳಮೀಸಲು (SC ST Reservation) ಕಲ್ಪಿಸಿರುವುದರಿಂದ ತಮಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಡುತ್ತಿರುವ ಬಂಜಾರ ಸಮುದಾಯದವರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ತವರು ಕ್ಷೇತ್ರವಾದ ಶಿಕಾರಿಪುರದಲ್ಲೇ ದೊಡ್ಡ ಮಟ್ಟದ ಆಕ್ರೋಶ ಕಂಡುಬರುತ್ತಿದೆ.
ಚುನಾವಣೆ ಬಹಿಷ್ಕಾರ ಬೆದರಿಕೆ
ಮೀಸಲಾತಿ ಕಡಿತಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಂಜಾರರು ಮುಂಬರುವ ವಿಧಾನಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಪ್ರತಿನಿಧಿಸುತ್ತಿರುವ ಕುಸ್ಕೂರು ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ಕೇಳಿಬಂದಿದೆ.
ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಕಳುಹಿಸಿಕೊಟ್ಟಿರುವ ಒಳಮೀಸಲನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಬಂಜಾರರು, ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿ ಘೋಷಣೆ ಕೂಗಿದ್ದಾರೆ.
ಪಿಂಡ ಬಿಡಲು ಮುಂದಾದ ಯುವಕ
ಈ ನಡುವೆ ಯುವಕನೊಬ್ಬ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಅವರ ಭಾವಚಿತ್ರವನ್ನು ಸುಟ್ಟು ಬಳಿಕ ಪಿಂಡ ಬಿಡಲು ಮುಂದಾದ ಘಟನೆಯೂ ನಡೆದಿದೆ.
ಬಂಜಾರ ಕನ್ವೆನ್ಷನ್ ಹಾಲ್ ಮುಂಭಾಗ ಘಟನೆ ನಡೆದಿದ್ದು, ಪಿಂಡ ಬಿಡಲು ಬಾಳೆ ಎಲೆ, ಅನ್ನ, ಸಾಂಬಾರ್ ಎಲ್ಲವನ್ನೂ ತಂದಿದ್ದ. ವಿನಯ್ ರಾಜಾವತ್ ಎಂಬ ಈ ಯುವಕ ಪಿಂಡ ಬಿಡಲು ಸಿದ್ಧತೆ ನಡೆಸುತ್ತಿದ್ದಂತೆಯೇ ಬಂಜಾರ ಭವನದ ಮುಂದೆ ಆಗುವ ಹೈಡ್ರಾಮಾವನ್ನು ಪೊಲೀಸರು ತಡೆದರು.
ಯಾವುದೇ ಕಾರಣಕ್ಕೂ ಪಿಂಡ ಬಿಡಬಾರದೆಂದು ಪೊಲೀಸರು ತಾಕೀತು ಮಾಡಿದರು. ಆದರೆ, ಯುವಕ ಒಪ್ಪಲಿಲ್ಲ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಯುವಕನ ಮನವೊಲಿಕೆ ಬಳಿಕ, ಡಿ.ವೈ.ಎಸ್.ಪಿ. ಬಾಲರಾಜ್ ಅವರ ಸಂಧಾನದಿಂದಾಗಿ ಯುವಕ ಪ್ರತಿಭಟನೆಯನ್ನು ಹಿಂಪಡೆದಿದ್ದಾನೆ. ಪಿಂಡ ಬಿಡಲು ತಂದಿದ್ದ ಸಾಮಗ್ರಿಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ ಯುವಕ ಅಲ್ಲಿಂದ ತೆರಳಿದ್ದಾನೆ.
ಇದನ್ನೂ ಓದಿ : SC ST Reservation: ಮಾರ್ಚ್ 30ರಂದು ಶಿವಮೊಗ್ಗದಲ್ಲಿ ಬಂಜಾರ ಸಮುದಾಯದ ಬೃಹತ್ ಪ್ರತಿಭಟನೆ; ಶಿಕಾರಿಪುರ ಚಲೋಗೆ ನಿರ್ಧಾರ