ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸರ್ಕಾರ ಮೀಸಲಾತಿ (SC-ST Reservation) ವಂಚನೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಗಿದೆ. ಕೆಪಿಸಿಸಿ ಕಚೇರಿಯಿಂದ ರಾಜಭವನದ ಕಡೆ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಧರ್ಮಸೇನಾ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ಭಾಗಿಯಾಗಿದ್ದರು. ಈ ವೇಳೆ ಕ್ವೀನ್ಸ್ ರಸ್ತೆಯಲ್ಲಿ ಪೊಲೀಸರು ಮತ್ತು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ನಾಯಕರು, ರಸ್ತೆಯಲ್ಲಿಯೇ ಕುಳಿತರು. ಈ ಸಂಬಂಧ ಕಾಂಗ್ರೆಸ್ ನಾಯಕರಿಂದ ರಾಜ್ಯಪಾಲರಿಗೆ ದೂರು ನೀಡಲಾಯಿತು.
ಇದನ್ನೂ ಓದಿ: Amit Shah visit : ಮಾದಕ ದ್ರವ್ಯದ ವಿರುದ್ಧ ತಂತ್ರಜ್ಞಾನ ಸಮರ: ಗೃಹ ಸಚಿವ ಅಮಿತ್ ಶಾ ಮಂಡಿಸಿದರು ತ್ರಿಸೂತ್ರ
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಎಸ್‌ಸಿ, ಎಸ್‌ಟಿ ಮೀಸಲಾತಿ ಸಂಬಂಧ 9ನೇ ಪರಿಚ್ಛೇದಕ್ಕೆ ಸೇರಿಸಲು ಇಷ್ಟು ದಿನ ಏನು ಮಾಡುತ್ತಿದ್ದರು? ಮೀಸಲಾತಿ ಹೆಚ್ಚಳಕ್ಕೆ ಆದೇಶ ಯಾವಾಗ ಆಯಿತು? ಆದೇಶ ಆಗಿ ಬಹಳ ದಿನ ಆಯ್ತು, ನಂತರದಲ್ಲಿ ಕ್ಯಾಬಿನೆಟ್‌ನಲ್ಲೂ ನಿರ್ಧಾರ ಆಯಿತು ಎಂದು ಕಿಡಿಕಾರಿದರು.
ನಾವು ಪ್ರತಿಭಟನೆಗೆ ಕರೆ ಕೊಟ್ಟ ಬಳಿಕ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಶೇಕಡಾ 50ರಷ್ಟು ಇರುವ ಮೀಸಲಾತಿ ಏರಿಕೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರ ಉತ್ತರ ಕೊಟ್ಟಿದೆ. ಅಂದರೆ ಇದರ ಅರ್ಥ ಏನು? ರಾಜ್ಯ ಸರ್ಕಾರದ ಮೀಸಲಾತಿ ಹೆಚ್ಚಳ ಮಾಡಿದರೂ ಕೇಂದ್ರ ಒಪ್ಪಲ್ಲ ಎಂದಲ್ಲವೇ? ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಶೇಕಡಾ 50ರಷ್ಟು ಮೀರಬಾರದು ಎಂದಿದೆ. ಅದು ಮೀರಬೇಕಾದರೆ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು. ಕೇವಲ ಮತಕ್ಕಾಗಿ ಹಾಗೂ ಜನರನ್ನು ದಾರಿ ತಪ್ಪಿಸಲು ಮೋಸ ಮಾಡುತ್ತಿದ್ದಾರೆ. ಸಿದ್ದು-ಡಿಕೆಶಿ ಹಾಗೂ ಪೊಲೀಸ್ ನಡುವೆ ಮಾತಿನ ಚಕಮಕಿ ನಡೆದಿದೆ.
ಸರ್ಕಾರ ವಜಾಕ್ಕೆ ಆಗ್ರಹ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ನಿನ್ನೆ ರಾತ್ರಿ ಒಂದು ಪತ್ರವನ್ನು ಕಳುಹಿಸಿ, ನಮಗೆ ವಾಟ್ಸಪ್ ಮಾಡಿದ್ದಾರೆ. ಕೇವಲ ಚುನಾವಣೆ ವೋಟ್ ಬ್ಯಾಂಕ್‌ಗಾಗಿ ಈ ರೀತಿ ಸರ್ಕಾರ ಮಾಡಿದೆ. ಇದನ್ನು ಖಂಡಿಸಿ ಪ್ರತಿಭಟನೆ ಮಾಡಲು ನಮಗೆ ಬಿಟ್ಟಿಲ್ಲ. ಸರ್ಕಾರ ಪೊಲೀಸರ ಮೂಲಕ, ಎಲ್ಲರನ್ನೂ ವಶಕ್ಕೆ ಪಡೆದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೋಸ ಮಾಡಿದ ಈ ಸರ್ಕಾರವನ್ನ ಕೂಡಲೇ ವಜಾ ಮಾಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: Adani stocks : ಇತರ ಕಂಪನಿಗಳ ಷೇರುಗಳಲ್ಲಿ ತನ್ನ ಹೂಡಿಕೆಗೆ ಮಿತಿ ವಿಧಿಸಲು ಎಲ್‌ಐಸಿ ನಿರ್ಧಾರ
ಪರಮೇಶ್ವರ್ ಆಕ್ರೋಶ
ಡಾ.ಜಿ ಪರಮೇಶ್ವರ ಮಾತನಾಡಿ, ಮೀಸಲಾತಿ ಹೆಚ್ಚಳ ಎಂದು ಬಿಜೆಪಿ ಮೋಸ ಮಾಡುತ್ತಿದೆ. ನ್ಯಾ. ನಾಗಮೋಹನ್ ದಾಸ್ ಕಮಿಟಿ ರಚನೆಯನ್ನು ನಾವು ಮಾಡಿದ್ದು. ಅವರು ಶಿಫಾರಸುಗಳನ್ನು ಎರಡು ಸದನದಲ್ಲಿ ಮಂಡಿಸಿ, ರಾಜ್ಯಪಾಲರಿಂದ ಸಹಿ ಮಾಡಿಸಿ, ಹಾಗೇ ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟುಕೊಂಡಿದ್ದರು. ನಿಜವಾದ ಬದ್ಧತೆ ಇದಿದ್ದರೆ ಗುರುವಾರ ಪ್ರಸ್ತಾವನೆ ಸಲ್ಲಿಸುವುದಲ್ಲ. ತೀರ್ಮಾನವಾದ ರಾತ್ರಿಯೇ ಸಲ್ಲಿಸಬೇಕಿತ್ತು ಎಂದು ಹೇಳಿದರು.