Site icon Vistara News

SC ST Reservation: ಬಿ.ಎಸ್.‌ ಯಡಿಯೂರಪ್ಪ ಮನೆಗೆ ಕಲ್ಲು; ಅಖಿಲ ಭಾರತ ವೀರಶೈವ ಮಹಾಸಭಾ ಪ್ರತಿಭಟನೆ

SC ST Reservation updates Stones pelted at BS Yediyurappa house Akhila Bharata Veerashaiva Mahasabha protests

ಶಿವಮೊಗ್ಗ: ಎಸ್‌ಸಿ-ಎಸ್‌ಟಿ ಮೀಸಲಾತಿಯಲ್ಲಿ (SC ST Reservation) ಒಳ ಮೀಸಲಾತಿ ನಿಗದಿಪಡಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ವಿರೋಧ ವಿರೋಧ ವ್ಯಕ್ತವಾಗಿದೆ. ಸೋಮವಾರ (ಮಾ. 27) ಶಿಕಾರಿಪುರದಲ್ಲಿ ಬಂಜಾರ ಸಮುದಾಯದವರು ನಡೆಸಿದ ಪ್ರತಿಭಟನೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು, ಚಪ್ಪಲಿ ತೂರಾಟ ನಡೆಸಲಾಗಿತ್ತು. ಪ್ರತಿಭಟನಾಕಾರರ ಈ ಕೃತ್ಯವನ್ನು ಖಂಡಿಸಿ ಸಾಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಪ್ರತಿಭಟನೆ ನಡೆಸಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಶಿಕಾರಿಪುರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿರುವುದು ಅತ್ಯಂತ ಖಂಡನೀಯ. ಶೀಘ್ರವೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಸಾಗರ ಘಟಕವು ಆಕ್ರೋಶ ವ್ಯಕ್ತಪಡಿಸಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಅವರು ರಾಜಕೀಯ ಜೀವನದಲ್ಲಿ ಎಲ್ಲರನ್ನೂ ಸಮಾನವಾಗಿ ನೋಡಿಕೊಂಡಿದ್ದಾರೆ. ಎಲ್ಲರಿಗೂ, ಎಲ್ಲ ಸಮುದಾಯ, ವರ್ಗಗಳಿಗೂ ಸಾಮಾಜಿಕ ನ್ಯಾಯ ನೀಡಿದ್ದಾರೆ. ಈಗ ಸರ್ಕಾರ ಕೈಗೊಂಡಿರುವ ಕ್ರಮಕ್ಕೂ ಅವರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಇಷ್ಟಾದರೂ ಅವರ ಮೇಲೆ ಆಕ್ರೋಶಗೊಳ್ಳುವುದು ಸರಿಯಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಹೇಳಿದೆ.

ಇದನ್ನೂ ಓದಿ: Havyaka Awards : ಪೆರುವೋಡಿ, ಲಕ್ಷ್ಮೀಶ ಸೋಂದಾ, ಜಿ.ಎಸ್‌. ಹೆಗಡೆ ಸಹಿತ 7 ಮಂದಿ ಸಾಧಕರಿಗೆ ಹವ್ಯಕ ವಾರ್ಷಿಕ ವಿಶೇಷ ಪ್ರಶಸ್ತಿ

ಅಲ್ಲದೆ, ಸೋಮವಾರ ಪ್ರತಿಭಟನೆ ವೇಳೆ ಬಿ.ಎಸ್.‌ ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ನಡೆಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಘಟನೆ ಹಿಂದಿರುವ ವ್ಯಕ್ತಿಗಳನ್ನು ಬಯಲಿಗೆ ತರಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಒತ್ತಾಯಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಮೂಲಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಸಿದ್ದರಾಮಯ್ಯ ಜತೆ ಆರೋಪಿ ಫೋಟೊ

ಸೋಮವಾರ (ಮಾ. 27) ಶಿಕಾರಿಪುರದಲ್ಲಿ ಬಂಜಾರ ಸಮುದಾಯದವರು ನಡೆಸಿದ ಪ್ರತಿಭಟನೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು, ಚಪ್ಪಲಿ ತೂರಾಟ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಯು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಜತೆಗೆ ತೆಗೆಸಿಕೊಂಡಿರುವ ಫೋಟೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral) ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಯಾರು ಯಾರೋ ಫೋಟೊ ತೆಗೆಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಬಿ.ಎಸ್.‌ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಗಳಲ್ಲಿ ಒಬ್ಬನಾಗಿರುವ ಪುನೀತ್ ನಾಯ್ಕ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದಾನೆ. ಈತ ಸಿದ್ದರಾಮಯ್ಯ ಅವರ ಜತೆ ತೆಗೆಸಿಕೊಂಡಿರುವ ಫೋಟೊವೊಂದು ಈಗ ವೈರಲ್‌ ಆಗಿದೆ.

ರಾಜಕೀಯಕ್ಕಾಗಿ ಏನೇನೋ ಹೇಳುತ್ತಿದ್ದಾರೆ

ಈ ಬಗ್ಗೆ ಎಚ್.ಡಿ. ಕೋಟೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಯಾರೋ ಬರ್ತಾರೆ, ಫೋಟೋ ತೆಗೆದುಕೊಳ್ಳುತ್ತಾರೆ. ಅವರು ಒಳ್ಳೆಯವರಾ, ಕೆಟ್ಟವರಾ ಅಂತ ನನಗೆ ಏನು ಗೊತ್ತು? ಎಂದು ಮುಗುಳು ನಕ್ಕು ಸುಮ್ಮನಾದರು. ಕಲ್ಲು ತೂರಾಟದ ಬಗ್ಗೆ ಯಡಿಯೂರಪ್ಪ ಏನು ಹೇಳಿದ್ದಾರೆ? ಇದಕ್ಕೂ ಕಾಂಗ್ರೆಸ್‌ನವರಿಗೂ ಸಂಬಂಧ ಇಲ್ಲ ಅಂದಿದ್ದಾರೆ. ಅಂದ ಮೇಲೂ ರಾಜಕೀಯಕ್ಕಾಗಿ ಏನೇನೋ ಹೇಳುತ್ತಿದ್ದಾರೆ ಎಂದರ್ಥ ಎಂದು ಹೇಳಿದ್ದಾರೆ.

ಇದನ್ನೂ ಓದಿ: SC ST Reservation: ಬಿಜೆಪಿಯವರಿಂದಲೇ ಮನೆ ಮೇಲೆ ದಾಳಿ: ಬಿ.ಎಸ್‌. ಯಡಿಯೂರಪ್ಪ ಪರವಾಗಿ ಕಾಂಗ್ರೆಸ್‌ ಬ್ಯಾಟಿಂಗ್‌

ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು

ಕಾಂಗ್ರೆಸ್‌ನವರು ಅಲ್ಲ ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ಯಡಿಯೂರಪ್ಪಗಿಂತ ಬೊಮ್ಮಾಯಿಗೆ ಹೆಚ್ಚು ಗೊತ್ತಾ? ಬೊಮ್ಮಾಯಿಗಿಂತ ಹೆಚ್ಚಿನ ಮಾಹಿತಿ ಯಡಿಯೂರಪ್ಪ ಅವರಿಗೆ ಹೋಗಿರುತ್ತಾ? ಮೀಸಲಾತಿಗೆ ಕಾಂಗ್ರೆಸ್ ವಿರೋಧ ಇರಲಿಲ್ಲ. ಆದರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಿತ್ತು. ಮೂರೂವರೆ ವರ್ಷ ಬಿಜೆಪಿ ಏನು ಮಾಡುತ್ತಿದ್ದು. ಒಳಮೀಸಲಾತಿಗೆ ಕಾಂಗ್ರೆಸ್ ಒಲವು ತೋರಿಸಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

Exit mobile version