ಬೆಂಗಳೂರು: ರಾಜ್ಯದಲ್ಲಿ ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳು ಭಾರಿ ಸುದ್ದಿಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಶಿಕ್ಷಣ ಇಲಾಖೆಯಲ್ಲೂ ಅಕ್ರಮ ನಡೆದಿರುವುದು ಬಯಲಾಗಿದೆ. ರಾಜ್ಯ ಶಿಕ್ಷಣ ಇಲಾಖೆ ಅಧೀನದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (DSERT) ಇ-ತ್ಯಾಜ್ಯ ವಿಲೇವಾರಿ ಟೆಂಡರ್‌ನಲ್ಲಿ ಸುಮಾರು 1.62 ಕೋಟಿ ರೂ. ಅಕ್ರಮ ನಡೆದಿರುವುದು ಸಾಬೀತಾದ ಕಾರಣ ಡಿಎಸ್‌ಇಆರ್‌ಟಿ ನಿರ್ದೇಶಕಿ ವಿ. ಸುಮಂಗಲಾ (V Sumangala) ಅವರನ್ನು ರಾಜ್ಯ ಸರ್ಕಾರ (Karnataka Government) ಅಮಾನತುಗೊಳಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ವಿ. ಸುಮಂಗಲಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇ-ವೇಸ್ಟ್ ವಿಲೇವಾರಿಗೆ ಸಂಬಂಧಿಸಿದಂತೆ ಅನರ್ಹ ಕಂಪನಿಗೆ ಟೆಂಡರ್ ನೀಡಲಾಗಿದೆ. ಕಂಪನಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಅರ್ಹತೆ ಇಲ್ಲದ ಕಂಪನಿಗೆ ಟೆಂಡರ್ ನೀಡಿದ ಪರಿಣಾಮ ಸರ್ಕಾರಕ್ಕೆ 1.62 ಕೋಟಿ ರೂ. ನಷ್ಟವಾಗಿದೆ. ಇದೇ ಕಾರಣಕ್ಕಾಗಿ ಕರ್ತವ್ಯ ಲೋಪ, ಅಧಿಕಾರದ ದುರ್ಬಳಕೆ ಸೇರಿ ಹಲವು ಆರೋಪಗಳಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ಡಿಎಸ್‌ಇಆರ್‌ಟಿ ಸೇರಿ ಹಲವು ಕಚೇರಿಗಳಲ್ಲಿ ನಿರುಪಯುಕ್ತವಾಗಿರುವ, ಹಾಳಾದ, ವಿದ್ಯುನ್ಮಾನ ಉಪಕರಣಗಳ (ಇ-ವೇಸ್ಟ್ ಅಥವಾ ಇ-ತ್ಯಾಜ್ಯ) ವಿಲೇವಾರಿ ಮಾಡಲು ಟೆಂಡರ್ ಕರೆಯಲಾಗಿತ್ತು. ಟೆಂಡರ್ ಕರೆದು, ಕಾರ್ಯಾದೇಶ ನೀಡಲಾಗಿರುವ ಇ-ಪ್ರಗತಿ ರಿಸೈಕ್ಲಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಬಿಡ್‌ನಲ್ಲಿ ಅರ್ಹತೆ ಇರಲಿಲ್ಲ. ಟೆಂಡರ್ ನೀಡುವ ವೇಳೆ ಕಂಪನಿಯು ಹಲವು ವಾಸ್ತವಿಕ ಸಂಗತಿಗಳನ್ನು ಮುಚ್ಚಿಟ್ಟಿದೆ. ಇಷ್ಟಾದರೂ ಅದೇ ಕಂಪನಿಗೆ ಟೆಂಡರ್ ನೀಡಲಾಗಿದೆ ಎಂಬುದು ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ.
ಕಂಪನಿಗೆ ಬಿಡ್‌ನಲ್ಲಿ ಎಲ್ 1 ಎಂದು ಘೋಷಿಸಿ, ಟೆಂಡರ್ ನೀಡುವ ಬದಲು ಕಂಪನಿ ಒದಗಿಸುವ ದಾಖಲೆಗಳನ್ನು ಪರಿಶೀಲನೆ ನಡೆಸಬೇಕಿತ್ತು. ಲೋಪಗಳು ಇದ್ದರೆ ಟೆಂಡರ್ ನೀಡಬಾರದಿತ್ತು. ಆದರೆ, ಕಂಪನಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದಲೇ ಟೆಂಡರ್ ಮಂಜೂರು ಮಾಡಲಾಗಿದೆ ಎಂಬುದು ಬಹಿರಂಗವಾಗಿದೆ. ಇದರಿಂದಾಗಿ, ವಿ. ಸುಮಂಗಲಾ ಅವರನ್ನು ಅಮಾನತುಗೊಳಿಸುವ ಜತೆಗೆ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ತೊರೆಯುವಂತಿಲ್ಲ ಎಂದು ಕೂಡ ಆದೇಶಿಸಲಾಗಿದೆ.
ಇದನ್ನೂ ಓದಿ: Karnataka Assembly Session: ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣದ ಚರ್ಚೆಗೆ ಪ್ರತಿಪಕ್ಷಗಳ ಬಿಗಿ ಪಟ್ಟು