ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಯಲ್ಲಿ (Congress Guarantee Scheme) ಒಂದಾಗಿರುವ ಶಕ್ತಿ ಯೋಜನೆಯಿಂದ (Shakti Scheme) ಶಾಲಾ ಮಕ್ಕಳಿಗೆ ತೀವ್ರ ಸಂಕಷ್ಟವಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದರು.
ಶಾಲಾ ಮಕ್ಕಳು ಪ್ರಯಾಸದಿಂದ ಬಸ್ ಹತ್ತಿತ್ತಿರುವ ವಿಡಿಯೊ ಒಂದನ್ನು ಟ್ಯಾಗ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶಕ್ತಿ ಯೋಜನೆಯ ಅಡ್ಡ ಪರಿಣಾಮಗಳ ಬಗ್ಗೆ ಕಿಡಿಕಾರಿದ್ದಾರೆ.
ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ರೂಪಿಸಿ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೂ ಎರವಾಗಿವೆ. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ ಎಂದು ಹೊರಟ ಆ ಪಕ್ಷದ ಸರಕಾರ, ಅವರು ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ. ಇದು ಕರ್ನಾಟಕದ ಮಾದರಿ!! ಎಂದು ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಶಕ್ತಿ ಯೋಜನೆಯ ಪರಿಣಾಮ ನಿತ್ಯವೂ ಶಾಲೆಗೆ ಹೋಗಬೇಕಾಗಿರುವ ಮಕ್ಕಳಿಗೆ ಬಸ್ಸುಗಳಲ್ಲಿ ಪ್ರಯಾಣಕ್ಕೆ ಸ್ಥಳಾವಕಾಶ ಸಿಗುತ್ತಿಲ್ಲ. ಶಿಕ್ಷಕರು, ಕಾರ್ಮಿಕರಿಗೂ ಇದೇ ದುಸ್ಥಿತಿ. ಆಟೋ, ಲಗೇಜ್ ಆಟೋ, ಗೂಡ್ಸ್ ವಾಹನಗಳನ್ನು ಹತ್ತಿ ಅಪಾಯಕಾರಿ ರಸ್ತೆಗಳಲ್ಲಿ ಮಕ್ಕಳು ಶಾಲೆಗೆ ಹೋಗಬೇಕು, ಮನೆಗೆ ವಾಪಸ್ ಬರಬೇಕು ಎಂದು ಮಕ್ಕಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಲಾಭಕ್ಕಾಗಿ @INCKarnataka ರೂಪಿಸಿ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೂ ಎರವಾಗಿವೆ. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ ಎಂದು ಹೊರಟ ಆ ಪಕ್ಷದ ಸರಕಾರ, ಅವರು ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ. ಇದು ಕರ್ನಾಟಕದ ಮಾದರಿ!! 1/4#ಶಾಲಾ_ಮಕ್ಕಳಲ್ಲಿ_ಹಿತರಕ್ಷಿಸಿ pic.twitter.com/zSS4xTAy2p
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 3, 2024
ಪರೀಕ್ಷೆ ವೇಳೆ ಮಕ್ಕಳಿಗೆ ಸಂಕಷ್ಟ
ಒಂದೆಡೆ ಬಸ್ಸುಗಳ ಕೊರತೆ, ಇನ್ನೊಂದೆಡೆ ಮಹಿಳೆಯರು ಪ್ರವಾಸಿ ತಾಣಗಳಿಗೆ ಮುಗಿಬಿದ್ದ ಪರಿಣಾಮ ಮಕ್ಕಳು ರಾತ್ರಿಯಾದರೂ ಮನೆ ತಲುಪುತ್ತಿಲ್ಲ ಎನ್ನುವ ಪತ್ರಿಕಾ ವರದಿ ಆಘಾತಕಾರಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿ, ಮಕ್ಕಳ ಪಾಡು ಕೇಳುವವರಿಲ್ಲವಾಗಿದೆ. ಪರೀಕ್ಷೆ ಸಮಯದಲ್ಲಿ ಅವರ ಸಂಕಷ್ಟ ಹೇಳತೀರದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Agriculture Startup: ಕೃಷಿ ನವೋದ್ಯಮ; 50 ಲಕ್ಷ ರೂ. ಸಾಲದಲ್ಲಿ 25 ಲಕ್ಷ ರೂ. ಫ್ರೀ!
ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ಬಿಡಿ
ಶಕ್ತಿ ಯೋಜನೆ ಬಗ್ಗೆ ನನ್ನ ತಕರಾರು ಇಲ್ಲ. ಆದರೆ, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ತುರ್ತುಕ್ರಮ ವಹಿಸಿ, ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ನನ್ನ ಆಗ್ರಹವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.