ಬೆಳಗಾವಿ: ಬೆಳಗಾವಿಯ ಜಾಧವ್ ನಗರದ ಬಳಿ ಆಗಸ್ಟ್ ೫ರಂದು ಕಾರ್ಮಿಕರೊಬ್ಬರ ಮೇಲೆ ದಾಳಿ ಮಾಡಿದ ಬಳಿಕ ನಾಪತ್ತೆಯಾಗಿದ್ದ ಚಿರತೆಯನ್ನು ಹುಡುಕುವ ಕೆಲಸ ಇನ್ನೂ ಫಲ ನೀಡಿಲ್ಲ. ನಿಜಕ್ಕೂ ಈ ಚಿರತೆ ಇನ್ನೂ ಅದೇ ಭಾಗದಲ್ಲಿ ಅಡಗಿಕೊಂಡಿದೆಯಾ ಅಥವಾ ಎಲ್ಲಾದರೂ ಪರಾರಿಯಾಗಿದೆಯಾ ಎನ್ನುವ ಸಂಶಯಗಳ ನಡುವೆಯೇ ಇದೀಗ ೧೦ ದಿನಗಳ ಬಳಿಕ ಇಲ್ಲಿ ಶಾಲೆ, ಕಾಲೇಜುಗಳನ್ನು ಮಂಗಳವಾರದಿಂದ ಮತ್ತೆ ಆರಂಭವಾಗಿದೆ.
ಜಾಧವ್ ನಗರದ ಗಾಲ್ಫ್ ಮೈದಾನದಲ್ಲಿ ಈ ಚಿರತೆ ಅಡಗಿಕೊಂಡಿದೆ ಎಂದು ಕಳೆದ ೧೦-೧೧ ದಿನಗಳಿಂದ ಹುಡುಕಾಟ ನಡೆಯುತ್ತಲೇ ಇದೆ. ಗಾಲ್ಫ್ ಮೈದಾನ ಇರುವ 250 ಎಕರೆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. 22 ಟ್ರ್ಯಾಪ್ ಕ್ಯಾಮೆರಾ, 8 ಬೋನುಗಳನ್ನು ಇರಿಸಿ ಶೋಧ ಕಾರ್ಯಾಚರಣೆ ನಡೆದಿತ್ತು. ೫೦ ಮಂದಿ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ಆದರೂ ಚಿರತೆ ಇನ್ನೂ ಕಣ್ಣಿಗೆ ಬಿದ್ದಿಲ್ಲ.
ಆವತ್ತು ಗೋಡೆ ಹಾರಿ ಬಂದು ಕಾರ್ಮಿಕನ ಮೇಲೆ ದಾಳಿ ಮಾಡಿದ ಚಿರತೆ ಆತನ ಕುತ್ತಿಗೆಗೆ ಬಾರಿ ಹಾಕಿತ್ತು. ಮಿರಾಜಕರ್ ಎಂಬ ಕಾರ್ಮಿಕ ದಾಳಿಯಿಂದ ಬಚಾವಾಗಿದ್ದ. ಆದರೆ, ದಾಳಿಯ ಸುದ್ದಿ ಕೇಳಿ ಆತನ ತಾಯಿ ಹೃದಯಾಘಾತದಿಂದ ಮರಣಿಸಿದ್ದರು. ಇದಾದ ಬಳಿಕ ಜಾಧವ ನಗರವೇ ಬಂದ್ ಆಗಿತ್ತು. ಯಾರೂ ಮನೆಯಿಂದ ಹೊರಬರದಂತೆ ಸೂಚಿಸಲಾಗಿತ್ತು. ಅಗತ್ಯ ವಸ್ತುಗಳಿಗೆ ಇಲಾಖೆಯ ವಾಹನಗಳ ಮೂಲಕವೇ ಹೋಗಿಬರುವ ವ್ಯವಸ್ಥೆ ಮಾಡಲಾಗಿತ್ತು. ಕೆಲವರಷ್ಟೇ ವಾಹನಗಳಲ್ಲಿ ಓಡಾಡುತ್ತಿದ್ದರು.
ಆದರೆ, ಇಷ್ಟು ದಿನವಾದರೂ ಚಿರತೆ ಸಿಗದೆ ಇರುವುದರಿಂದ ಸಾಮಾನ್ಯ ಜನಜೀವನಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ. ಹೀಗಾಗಿ ೧೦-೧೧ ದಿನಗಳಿಂದ ಮುಚ್ಚಿದ್ದ ಶಾಲೆಗಳನ್ನು ಮಂಗಳವಾರದಿಂದ ತೆರೆಯಲು ನಿರ್ಧರಿಸಲಾಗಿದೆ. ಆದರೆ, ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಶಾಲೆ ಆರಂಭಕ್ಕೆ ಷರತ್ತುಗಳು
ಈ ಶಾಲೆಗಳು ಚಿರತೆ ಇನ್ನೂ ಅಡಗಿಕೊಂಡಿರಬಹುದು ಎಂದು ಹೇಳಲಾಗುತ್ತಿರುವ ಗಾಲ್ಫ್ ಮೈದಾನದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿವೆ. ಮಕ್ಕಳ ಹಿತರಕ್ಷಣೆ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಆದರೆ, ಚಿರತೆ ಸಿಗುವವರೆಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.
– ಶಾಲಾ ಆವರಣ, ತರಗತಿಗಳನ್ನು ಸಂಪೂರ್ಣ ಸುರಕ್ಷಿತವಾಗಿ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.
– ನಿಗದಿತ ಅವಧಿಯಲ್ಲಿ ಶಾಲೆಗಳ ಮುಖ್ಯದ್ವಾರದ ಗೇಟ್ ಬಂದ್‌ಗೆ ಸೂಚನೆ
– ವಿದ್ಯಾರ್ಥಿಗಳನ್ನು ಒಬ್ಬೊಬ್ಬರಾಗಿ ಕ್ಲಾಸಿನಿಂದ ಹೊರಗೆ ಬಿಡಬಾರದು.
– ತರಗತಿಯ ಬಾಗಿಲು ಕಿಟಕಿ ಭದ್ರಪಡಿಸಬೇಕು
– ಶಾಲಾ ಅವಧಿ ಮುಗಿದ ಬಳಿಕ ಪಾಲಕರ ಸುಪರ್ದಿಗೆ ಒಪ್ಪಿಸಿ ಸುರಕ್ಷಿತವಾಗಿ ಮನೆಗೆ ತೆರಳಿದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.
– ಏನಾದರೂ ಅಪಾಯಕಾರಿ ಮುನ್ಸೂಚನೆ ಕಂಡುಬಂದರೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.
ಕಾರ್ಯಾಚರಣೆ ಮುಂದುವರಿಕೆ
ಇದರ ನಡುವೆಯೇ ಚಿರತೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ. ಕಳೆದ ಹತ್ತು ದಿನದ ಅವಧಿಯಲ್ಲಿ ಗಾಲ್ಫ್ ಮೈದಾನದ ಬಳಿಯ ಒಂದು ಕ್ಯಾಮೆರಾದಲ್ಲಿ ಕಾಣ ಸಿಕ್ಕಿರುವ ಈ ಚಿರತೆ ಇನ್ನೂ ಇರಬಹುದು ಎನ್ನುವ ಸಂಶಯದ ಆಧಾರದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Belagavi | ಚಿರತೆ ಪ್ರತ್ಯಕ್ಷ ಪ್ರಕರಣ : ಶಾಲೆಗಳಿಗೆ ರಜೆ ಮುಂದುವರಿಕೆ, ಮುಂದುವರಿದ ಶೋಧ