ತುಮಕೂರು: ಮಕ್ಕಳಲ್ಲಿ ದುಷ್ಚಟಗಳ ವಿರುದ್ಧ ಜಾಗೃತಿ ಮೂಡಿಸಬೇಕಾದ ಶಿಕ್ಷಕಿಯೇ ಕ್ಲಾಸಿನಲ್ಲೇ ಕುಳಿತು ಮದ್ಯ ಸೇವನೆ ಮಾಡಿದರೆ ಪರಿಸ್ಥಿತಿ ಹೇಗಿದ್ದೀತು?
ತುಮಕೂರು ತಾಲೂಕಿನ ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಥಹುದೇ ವಿಲಕ್ಷಣ ಘಟನೆ ನಡೆದಿದೆ. ಇಲ್ಲಿನ ಟೀಚರ್ ಗಂಗಲಕ್ಷ್ಮಮ್ಮ ಅವರು ಕುಡಿದೇ ಶಾಲೆಗೆ ಬರುವುದಲ್ಲದೆ, ಕ್ಲಾಸಿನಲ್ಲಿ ಕುಳಿತೂ ಕಿಕ್ಕೇರಿಸಿಕೊಳ್ಳುತ್ತಾರೆ, ಎಣ್ಣೆ ಮತ್ತಲ್ಲೇ ಪಾಠ ಮಾಡುತ್ತಾರೆ, ವಿದ್ಯಾರ್ಥಿಗಳು, ಸಹೋದ್ಯೋಗಿಗಳ ಜತೆಗೂ ಸದಾ ಅವರಿಗೆ ಕಿರಿಕ್ಕು!
ಇಂಥಹುದೊಂದು ಗಂಭೀರ ಆರೋಪ ತುಂಬ ಸಮಯದಿಂದ ಕೇಳಿಬರುತ್ತಿತ್ತು. ಕುಡಿದ ಮತ್ತಿನಲ್ಲೇ ಪಾಠ ಮಾಡುತ್ತಾರೆ, ಮಕ್ಕಳಿಗೆ ಹೊಡೆಯುತ್ತಾರೆ, ಶಾಲೆಯಲ್ಲಿ ಸಹೋದ್ಯೋಗಿಗಳೊಂದಿಗೆ ಪ್ರತಿದಿನ ಜಗಳ ಮಾಡುತ್ತಾರೆ ಎಂಬ ಆರೋಪ ಮಾಡಲಾಗಿತ್ತು. ಇವರ ಕಾಟ ತಾಳಲಾಗದೆ ಶಿಕ್ಷಕರು ಬೇರೆ ಕಡೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಗಂಗ ಲಕ್ಷ್ಮಮ್ಮ ಕಳೆದ 25 ವರ್ಷಗಳಿಂದ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಗುರುವಾರ ನಡೆಯಿತು ಹೈಡ್ರಾಮಾ!
ಇಷ್ಟೆಲ್ಲ ಆರೋಪಗಳನ್ನು ಎದುರಿಸುತ್ತಿರುವ ಗಂಗಲಕ್ಷ್ಮಮ್ಮ ಅವರು ನಿಜಕ್ಕೂ ಹೀಗಿದ್ದಾರಾ ಎಂದು ಪರಿಶೀಲಿಸಲು ಸ್ವತಃ ಬಿಇಒ ಹನುಮಾ ನಾಯ್ಕ ಅವರೇ ಸ್ಥಳಕ್ಕೆ ಭೇಟಿ ನಿಡಿದರು. ಈ ವೇಳೆ ಹೈಡ್ರಾಮಾವೇ ನಡೆದು ಹೋಯಿತು.
ಬಿಇಒ ಅವರು ಏಕಾಏಕಿಯಾಗಿ ಕ್ಲಾಸಿಗೆ ಎಂಟ್ರಿ ಪಡೆದುಕೊಂಡರು. ಗಂಗಾ ಲಕ್ಷ್ಮಮ್ಮ ತಬ್ಬಿಬ್ಬಾದರೂ ಸುಧಾರಿಸಿಕೊಂಡರು. ಶಿಕ್ಷಕಿ ಟೇಬಲ್ ಡ್ರಾಯರ್‌ನಲ್ಲೇ ಮದ್ಯ ಇಟ್ಟುಕೊಳ್ಳುತ್ತಾರೆ ಎಂಬ ಆರೋಪವಿತ್ತು. ಹೀಗಾಗಿ, ಡ್ರಾಯರ್ ಓಪನ್ ಮಾಡಿ ಎಂದು ಸೂಚಿಸಿದರು. ಆದರೆ ಡ್ರಾವರ್ ಓಪನ್ ಮಾಡಲು ಪ್ರತಿರೋಧ ಒಡ್ಡಿದರು ಗಂಗ ಲಕ್ಷ್ಮಮ್ಮ. ಕೊನೆಗೆ ಪೊಲೀಸರನ್ನು ಕರೆಸಿ ಡ್ರಾಯರ್‌ನ್ನು ಒಡೆಯಲಾಯಿತು. ಆಗ ಒಳಗೆ ಸಿಕ್ಕಿದ್ದು ಒಂದು ಫುಲ್ ಬಾಟಲ್ ಮತ್ತು ಎರಡು ಖಾಲಿ ಬಾಟಲ್! ಅದೂ ಅವರ ಮ್ಯಾನ್ಶನ್ ಹೌಸ್ ಬ್ರಾಂಡ್. ಪೊಲೀಸರು ಮದ್ಯದ ಬಾಟಲ್ ಸೀಝ್ ಮಾಡಿದರು.
ಪೊಲೀಸರು ಮದ್ಯದ ಬಾಟಲಿ ಪತ್ತೆ ಮಾಡುತ್ತಿದ್ದಂತೆಯೇ ಶಿಕ್ಷಕಿ ಆತ್ಮಹತ್ಯೆಯ ಡ್ರಾಮಾ ಮಾಡಿದರು. ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡರು. ಕೊನೆಗೆ ಅವರನ್ನು ಹೊರಗೆ ತರಲಾಯಿತು. ಇದೀಗ ಅವರನ್ನು ಸೇವೆಯಿಂದ ಅಮಾನತು ಮಾಡಲಾಯಿತು.
ಇದನ್ನೂ ಓದಿ| Punishment | ಚಡ್ಡಿಯಲ್ಲಿ ಮೂತ್ರ ಮಾಡುತ್ತಿದ್ದ 3 ವರ್ಷದ ಬಾಲಕ; ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಶಿಕ್ಷಕಿ!