ಬೆಂಗಳೂರು: ಬೇಕಾಬಿಟ್ಟಿ ಹೆಚ್ಚುವರಿ ಹಾಗೂ ಕಡಿಮೆ ಸಮಯಗಳ ತರಗತಿ ನಡೆಸುವುದಕ್ಕೆ ಶಿಕ್ಷಣ ಇಲಾಖೆ ಬ್ರೇಕ್ ಹಾಕಿದೆ. ಖಾಸಗಿ ಶಾಲೆಗಳು ಇಲಾಖೆ ಸೂಚಿಸಿದ ವೇಳಾಪಟ್ಟಿಗೆ ಅನುಗುಣವಾಗಿ ತರಗತಿಗಳನ್ನು ನಡೆಸುವುದು ಕಡ್ಡಾಯ ಎಂದು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಶಿಕ್ಷಣ ಇಲಾಖೆ ಹೊರಡಿಸುವ ಆದೇಶದಂತೆ ನಡೆಸುವುದು ಕಡ್ಡಾಯ. ಆದರೆ ಕೆಲವೊಂದು ಖಾಸಗಿ ಶಾಲೆಗಳು ಇದನ್ನು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಇಲಾಖೆಯ ಕೆಳಹಂತದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ್ದಾರೆ.
ಸಿಲೆಬಸ್ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಕಾಯ್ದೆ ವಿರುದ್ಧವಾಗಿ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ತರಗತಿಗಳನ್ನು ಕೈಗೊಳ್ಳುತ್ತಿದ್ದವು. ಇದರ ಹೊರತಾಗಿ ಶಿಕ್ಷಕರ ಕೊರತೆ ಎಂಬ ನೆಪವೊಡ್ಡಿ ಕಡಿಮೆ ಅವಧಿಯೂ ತರಗತಿಗಳನ್ನು ನಡೆಸುತ್ತಿದ್ದವು. ಹೆಚ್ಚುವರಿಯಾಗಿ ಟ್ಯೂಷನ್ ತರಗತಿಯೆಂದು ಹೆಚ್ಚುವರಿ ಹಣಕ್ಕೂ ಪೋಷಕರಲ್ಲಿ ಬೇಡಿಕೆ ಇಡುತ್ತಿದ್ದವು. ಇದೀಗ ಹೆಚ್ಚುವರಿ ಅಥವಾ ಕಡಿಮೆ ಅವಧಿ ತರಗತಿ ನಡೆಸುವುದಕ್ಕೆ ಶಿಕ್ಷಣ ಇಲಾಖೆಯಿಂದಲೇ ಬ್ರೇಕ್ ಬಿದ್ದಿದೆ.
ಇದನ್ನೂ ಓದಿ | Hijab Row | ಸಮವಸ್ತ್ರ ಕುರಿತು ನಿಯಮ ರೂಪಿಸುವ ಹಕ್ಕು ಶಿಕ್ಷಣ ಸಂಸ್ಥೆಗಳಿಗಿದೆ ಎಂದ ಸುಪ್ರೀಂ ಕೋರ್ಟ್
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಯವರೆಗೆ ಪ್ರತಿ ದಿನ 5.30 ಗಂಟೆ ತರಗತಿ ನಡೆಸುವುದು ಕಡ್ಡಾಯ. ಬೆಳಗ್ಗೆ 8:30ಕ್ಕೆ ಶಾಲೆ ಆರಂಭಗೊಳಿಸಿ 10 ನಿಮಿಷ ಪ್ರಾರ್ಥನೆಗೆ ಮೀಸಲು ಹಾಗೂ ಮಧ್ಯಾಹ್ನ 30ರಿಂದ 40 ನಿಮಿಷಗಳ ಕಾಲ ಊಟದ ವಿರಾಮ ನೀಡಬೇಕು. ಇದರ ಹೊರತಾಗಿ ತರಗತಿಗಳು 5.30 ತಾಸು ಮಾತ್ರ ನಡೆಸಬೇಕು. ಇದು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮದ ಅನ್ವಯ ಪಾಲಿಸಬೇಕು. ಇದರ ಹೊರತಾಗಿ ಹೆಚ್ಚುವರಿ ಅಥವಾ ಕಡಿಮೆ ಅವಧಿ ತರಗತಿ ನಡೆಸುವುದು ಶಿಕ್ಷಣ ಇಲಾಖೆ ಕಾಯ್ದೆ ಪ್ರಕಾರ ಕಾನೂನು ಬಾಹಿರ. ಇದನ್ನು ಆಯಾ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾನಿಟರ್ ಮಾಡಬೇಕು. ಇಲ್ಲದಿದ್ದರೆ ಅಂಥ ಬಿಇಓ ಬಿಆರ್‌ಸಿ, ಬಿಆರ್‌ಪಿ, ಸಿಆರ್‌ಪಿ, ಜಿಲ್ಲಾ ಶಿಕ್ಷಣ ಸಂಯೋಜಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ವಾರ್ನ್ ಮಾಡಿದೆ.
ಈ ಬಗ್ಗೆ ಇತ್ತೀಚೆಗೆ ಕೆಲ ಪೋಷಕರು ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿ ಖಾಸಗಿ ಶಾಲೆಗಳ ನಡೆ ಬಗ್ಗೆ ದೂರು ನೀಡಿದ್ದರು. ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ | Maths problem! | ಗಣಿತ ಲೆಕ್ಕ ಬಿಡಿಸುವ ಗಲಾಟೆ: ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬಡಿದಾಡಿಕೊಂಡ ಅಧಿಕಾರಿಗಳು