ಮಂಡ್ಯ: ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Bengaluru Mysuru Expressway) ಅಪಘಾತ (Road accident) ಸರಣಿ ಮುಂದುವರಿದಿದ್ದು, ಬುಧವಾರ ನಡೆದ ಅಪಘಾತದಲ್ಲಿ ಒಬ್ಬ ಮಹಿಳೆ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ.
ಹೆದ್ದಾರಿಯಲ್ಲಿ ಬರುವ ಮಂಡ್ಯ ಜಿಲ್ಲೆ ಮದ್ದೂರು (Mandya News) ಬಳಿಯ ಕೋಡಿ ಹಳ್ಳಿ ಬೈಪಾಸ್ ನಲ್ಲಿ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಸ್ಕೂಟರ್ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಚನ್ನಪಟ್ಟಣ ಟೌನ್ ನ ಮಂಡಿಪೇಟೆ ವರಲಕ್ಷ್ಮಿ (60) ಎಂಬವರು ಮೃತಪಟ್ಟರೆ ಅವರ ಪುತ್ರ ಸುಧಾಕರ್ (40) ಮತ್ತು ಮೊಮ್ಮಗಳಾದ ಗೌತಮಿ (10) ಗಾಯಗೊಂಡಿದ್ದಾರೆ. ಇವರಿಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಅವರಿಗೆ ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸುಧಾಕರ್ ಅವರು ತಮ್ಮ ತಾಯಿ ಮತ್ತು ಮಗಳನ್ನು ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಮಂಡ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ತಮ್ಮ ಸಂಬಂಧಿಕರನ್ನು ನೋಡಲು ಹೋಗಿದ್ದರು. ಅಲ್ಲಿನ ಕೆಲಸ ಮುಗಿಸಿಕೊಂಡು ಚನ್ನಪಟ್ಟಣಕ್ಕೆ ವಾಪಸ್ಸು ತೆರಳುವಾಗ ಅಪಘಾತ ಸಂಭವಿಸಿದೆ.
ಪಂಚರ್ ಆಗಿ ರಸ್ತೆಯಲ್ಲಿ ನಿಂತಿದ್ದ ಕ್ಯಾಂಟರ್‌ನ್ನು ಗಮನಿಸದೆ ನೇರವಾಗಿ ಸ್ಕೂಟರ್ ಡಿಕ್ಕಿ ಹೊಡೆದಿದೆ ಇದರಿಂದ ರಸ್ತೆಗೆ ಎಸೆಯಲ್ಪಟ್ಟ ವರಲಕ್ಷ್ಮಿ ಅವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮದ್ದೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರದಲ್ಲಿ ಲಾರಿ-ಬಸ್ ಡಿಕ್ಕಿ: ಇಬ್ಬರು ಸಾವು
ವಿಜಯಪುರ: ಸರ್ಕಾರಿ ಬಸ್ ಮತ್ತು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಬಸ್‌ನಲ್ಲಿದ್ದ ಇಬ್ಬರು ಮೃತಪಟ್ಟು ಐವರಿಗೆ ಗಾಯಗಳಾಗಿವೆ.
ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಬಳಿ ವಿಜಯಪುರ-ಕಲಬುರಗಿ ಹೆದ್ದಾರಿ ಮೇಲೆ ಅವಘಡ ಸಂಭವಿಸಿದೆ.
ಅಥಣಿಯಿಂದ ವಿಜಯಪುರ ಮಾರ್ಗವಾಗಿ ಗಾಣಗಾಪುರಕ್ಕೆ ಹೊರಟಿದ್ದ ಬಸ್ ಮತ್ತು ಕಲಬುರಗಿಯಿಂದ ವಿಜಯಪುರದ ಕಡೆಗೆ ಹೊರಟಿದ್ದ ಲಾರಿ ನಡುವೆ ಡಿಕ್ಕಿ ನಡೆದಿದೆ.
ಲಾರಿ ಚಾಲಕನಿಗೆ ನಿಯಂತ್ರಣ ತಪ್ಪಿ ಆತ ತನ್ನ ವಾಹನವನ್ನು ಬಸ್‌ಗೆ ಡಿಕ್ಕಿ ಹೊಡೆಸಿದ್ದಾನೆ ಎಂದು ಹೇಳಲಾಗಿದೆ. ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ರಸ್ತೆಯಿಂದ ತಿರುಗಿ ಬೇರೆಡೆಗೆ ಸರಿದು ನಿಂತಿದೆ. ಒಂದು ಆಟೋ ರಿಕ್ಷಾ ಕೂಡಾ ಜಖಂಗೊಂಡಿದೆ.
ಇದನ್ನೂ ಓದಿ: Road Accident: 3 ವರ್ಷದ ಕಂದಮ್ಮನ ತಲೆ ಮೇಲೆ ಹರಿದ ಟಿಪ್ಪರ್; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ