Site icon Vistara News

SCST Reservation | ಬಿಜೆಪಿ ಪ್ರಯತ್ನಕ್ಕೆ ಪರ್ಯಾಯ; ಜನವರಿ 8 ರಂದು ಕಾಂಗ್ರೆಸ್‌ನಿಂದ SCST ಐಕ್ಯತಾ ಸಮಾವೇಶ

ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ಎಸ್‌ಸಿಎಸ್‌ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಆ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ನಡೆಗೆ ಪ್ರತಿ ಂತ್ರವಾಗಿ ರಾಜ್ಯ ಕಾಂಗ್ರೆಸ್‌ ಆಯೋಜಿಸುತ್ತಿರುವ ‘SCST ಐಕ್ಯತಾ ಸಮಾವೇಶ’ ದ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಸಮಾವೇಶವನ್ನು ಜನವರಿ 8ರಂದು ಚಿತ್ರದುರ್ಗದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವನ್ನು ಪ್ರಕಟಿಸಿದರು. ದಲಿತ ಸಮುದಾಯದ ಮುಖಂಡರಾದ ಕೇಂದ್ರದ ಮಾಜಿ ಸಚಿವರಾದ ಕೆ.ಎಚ್ ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಚ್.ಸಿ ಮಹದೇವಪ್ಪ, ಎಚ್. ಆಂಜನೇಯ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಸೇರಿ ಹಲವು ಮುಖಂಡರು ಉಪಸ್ಥಿತಿಯಲ್ಲಿ ದಿನಾಂಕವನ್ನು ಪ್ರಕಟಿಸಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯದ ನಂತರ ಸಮಾಜದಲ್ಲಿ ಶೋಷಿತ ವರ್ಗಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಅಂದಿನಿಂದ ಇಲ್ಲಿಯವರೆಗೂ ಈ ಸಮುದಾಯಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಲೇ ಬಂದಿವೆ. ಕಾಂಗ್ರೆಸ್ ಪಕ್ಷ ಕೂಡ ಅವರ ಕ್ಷೇಮಾಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಅನೇಕ ಕಾನೂನು ತರುವ ಮೂಲಕ ಭಾರತದಲ್ಲಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಅವುಗಳನ್ನು ಜಾರಿಗೆ ತರಲು ಎಲ್ಲ ಪ್ರಯತ್ನ ಮಾಡಿದೆ.

SCST ಐಕ್ಯತಾ ಸಮಾವೇಶ

ಕರ್ನಾಟಕದಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ, ಬಡತನ ರೇಖೆಯಿಂದ ಹೊರಗೆ ಮುಖ್ಯವಾಹಿನಿಗೆ ತರಲು ಕಾನೂನಾತ್ಮಕವಾಗಿ ಕೆಲಸ ಮಾಡಿಕೊಂಡು ಬಂದಿದೆ. ಇಂದು ಬೇರೆ ಬೇರೆ ಪಕ್ಷಗಳು ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿವೆ ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಪರಮೇಶ್ವರ್‌, ಯಾವ ಪಕ್ಷಗಳೂ ಅವರ ಯೋಗಕ್ಷೇಮಕ್ಕೆ ಪ್ರಯತ್ನಿಸಲಿಲ್ಲ. ಪಕ್ಷದ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಪೋಟೋಗಳನ್ನು ಹಾಕಿಕೊಳ್ಳದವರು ಇಂದು ದಲಿತರ ಮನೆಗಳಲ್ಲಿ ಮಲಗಲು, ಬೇರೆ ಹೊಟೇಲ್‌ನಿಂದ ಊಟ ತರಿಸಿ ತಿಂದು ಬರುತ್ತಿದ್ದಾರೆ ಎಂದರು.

ಈ ಸಮುದಾಯಗಳನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿವೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರುಗಳು, ನಿಮ್ಮ ಜತೆ ಇದ್ದೇವೆ ಎಂದು ನಮ್ಮ ಜನರಿಗೆ ತಿಳಿಸಲು ಮುಂದಾಗಿದ್ದೇವೆ. ನಿಮ್ಮ ಕ್ಷೇಮ ಕಾಪಾಡಲು ನಾವು ಇದ್ದೇವೆ ಎಂದು ಮರುಭರವಸೆ ನೀಡಲು ಸಮಾವೇಶ ಮಾಡಲು ನಾವೆಲ್ಲ ಪೂರ್ವಭಾವಿ ಸಭೆ ಮಾಡಿ ನಿರ್ಧರಿಸಿದ್ದೇವೆ.

ಪೂರ್ವಭಾವಿ ಸಭೆಯಲ್ಲಿ ಎಲ್ಲ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳ ನಾಯಕರು ಸೇರಿ ಈ ಸಮಾವೇಶವನ್ನು ಮಾಡಿ ಎಲ್ಲ ಸಮುದಾಯಗಳು ಒಟ್ಟಾಗಿ ಸೇರಬೇಕು ನಿರ್ಧರಿಸಿದ್ದೇವೆ. ಪರಿಶಿಷ್ಟ ಜಾತಿಯಲ್ಲಿ 101 ಹಾಗೂ ಪರಿಶಿಷ್ಟ ಪಂಗಡದಲ್ಲಿ 52 ಸಮುದಾಯಗಳಿದ್ದು, ಈ ಎಲ್ಲ ಸಮುದಾಯಗಳನ್ನು ಒಂದು ವೇದಿಕೆ ಮೇಲೆ ತರಬೇಕು. ಎಲ್ಲರಿಗೂ ಸಮಸ್ಯೆ ಒಂದೇ ಆಗಿದ್ದು, ನಮ್ಮಲ್ಲಿ ವ್ಯತ್ಯಾಸ ಇರಬಾರದು. ನಮ್ಮನ್ನು ಒಡೆದು ಆಳುವ ಪ್ರಯತ್ನ ನಡೆಯುತ್ತಿವೆ. ನಮ್ಮ ರಾಜ್ಯದಲ್ಲಿ ಎರಡೂ ಸಮುದಾಯ ಸೇರಿ 24.1% ಜನರಿದ್ದು, ಸುಮಾರು 1.5 ಕೋಟಿ ಜನ ಇದ್ದಾರೆ.

ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಲಿದ್ದು, ಅವರ ಜತೆಗೆ ಎಐಸಿಸಿ ಪ್ರಧಾನಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮೇಲ್ಮನೆ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ಅವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಲ್ಲಿ ಯಾರಾದರೂ ಒಬ್ಬರು ಭಾಗವಹಿಸಬೇಕು ಎಂದು ನಾವು ಮನವಿ ಮಾಡುತ್ತೇವೆ ಎಂದು ಹೇಳಿದರು.

ಈಗ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ವಿಚಾರವಾಗಿ ಪ್ರಯತ್ನ ಪಡೆಯುತ್ತಿದೆ. ಪರಿಶಿಷ್ಟ ಜಾತಿಯವರಿಗೆ 15% ರಿಂದ 17% ಹಾಗೂ ಪರಿಶಿಷ್ಟ ಪಂಗಡದವರಿಗೆ 3%ರಿಂದ 7% ಮೀಸಲಾತಿ ಹೆಚ್ಚಳ ನಾವು ಮಾಡಿದ್ದೇವೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಮೂಲತಃ ಇದಕ್ಕೆ ಅಡಿಗಲ್ಲು ಹಾಕಿದ್ದು ಕಾಂಗ್ರೆಸ್ ಪಕ್ಷ. ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಎಸ್ ಟಿ ಸಮುದಾಯದ ಸ್ವಾಮೀಜಿ ಹಾಗೂ ಶಾಸಕರು ಹೋರಾಟ ಆರಂಭಿಸಿದಾಗ, ನಮ್ಮ ಸರ್ಕಾರ ಭರವಸೆ ನೀಡಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಈ ಸಮಿತಿ ವರದಿ ಅಷ್ಠಾನ ಮಾಡುವ ಸಮಯಕ್ಕೆ ಸರ್ಕಾರ ಬಿದ್ದು ಹೋಯಿತು. ಅಂದು ನಮ್ಮ ಸರ್ಕಾರ ಮುಂದುವರಿದಿದ್ದರೆ ನಾವೇ ಇದನ್ನು ಜಾರಿ ಮಾಡುತ್ತಿದ್ದೆವು ಎಮದು ಹೇಳಿದರು.

ಕೆ.ಎಚ್. ಮುನಿಯಪ್ಪ ಮಾತನಾಡಿ, ನಾವು ಪರಿಶಿಷ್ಟ ಜಾತಿಯಲ್ಲಿ 101, ಪಂಗಡದಲ್ಲಿ 52 ಸಮುದಾಯಗಳಿದ್ದು, ನಮ್ಮನ್ನು ಒಡೆದು ಆಳುವ ವ್ಯವಸ್ಥೆಯನ್ನು ಬಿಜೆಪಿ ರೂಪಿಸುತ್ತಿದೆ. ಹೀಗಾಗಿ ನಾವು ಒಂದಾಗಬೇಕು. ಗಾಂಧೀಜಿ ಅವರ ಸಿದ್ಧಾಂತ, ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಾನತೆ ನೀಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಇದನ್ನು ಎಲ್ಲ ಸಮುದಾಯಗಳಿಗೆ ಅರಿವು ಮೂಡಿಸಬೇಕು ಎಂದರು.

ಸತೀಶ್ ಜಾರಕಿಹೋಳಿ ಮಾತನಾಡಿ, ನಾವು ಎಲ್ಲ ಸಮುದಾಯ ಒಂದಾಗಬೇಕು ಹಾಗೂ ಒಂದು ವೇದಿಕೆಯಲ್ಲಿ ಸಮಸ್ಯೆ ಬಗ್ಗೆ ಧ್ವನಿ ಎತ್ತಬೇಕು ಎಂದು ತೀರ್ಮಾನಿಸಲಾಗಿದೆ. ಈ ಸಮಾವೇಶಕ್ಕೆ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಐತಿಹಾಸಿಕ ಸಮಾವೇಶ ಜಾಗಕ್ಕೆ ಹೋಗಿ ನಾವು ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.

ದಲಿತರಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇಲ್ಲವೆ ಎಂಬ ಪ್ರಶ್ನೆಗೆ, ‘ನಾವೆಲ್ಲರೂ ಅರ್ಹರಿದ್ದು, ಸಮಯ ಬಂದಾಗ ನಾವು ಅದನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ನಾವು ಕಾಂಗ್ರೆಸ್ ಪಕ್ಷದ ನಿಯಮಗಳಿಗೆ ಬದ್ಧರಾಗಿದ್ದು, ಕಾಂಗ್ರೆಸ್ ನಮಗೆ ರಕ್ಷಣೆ ನೀಡಿದೆ. ಸಮಾಜದ ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ಶ್ರಮಿಸಿದೆ. ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಮುಖ್ಯಮಂತ್ರಿ ಆಯ್ಕೆ ವಿಚಾರ ಹೈಕಮಾಂಡ್ ಗೆ ಬಿಡೋಣ. ಇಲ್ಲಿ ವೈಯಕ್ತಿಕ ಪ್ರಶ್ನೆ ಉದ್ಭವಿಸುವುದಿಲ್ಲ. ನಮ್ಮ ಪ್ರಶ್ನೆ ನಮ್ಮ ಒಗ್ಗಟ್ಟು ಪ್ರದರ್ಶಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ಬಡವರಿಗೆ ಅಧಿಕಾರ ಕೊಟ್ಟು ಅವರನ್ನು ಸಧೃಡಗೊಳಿಸಲು ನಾವು ಕಾಂಗ್ರೆಸ್ ಪಕ್ಷ ನಮ್ಮ ಜನರಿಗೆ ನೀಡುವ ಮರುಭರವಸೆ ಇದಾಗಿದೆ. ಇದನ್ನು ಗಮನಿಸಿದ ನಂತರ ಹೈಕಮಾಂಡ್.’ ಎಂದು ತಿಳಿಸಿದರು.

Exit mobile version