Site icon Vistara News

‌SCST Reservation | ದಲಿತ ಮೀಸಲಾತಿ ಹೆಚ್ಚಿಸುವ ಮಸೂದೆಗೆ ವಿಧಾನಸಭೆ ಒಪ್ಪಿಗೆ: ಬಿಜೆಪಿಯೇ ಮೀಸಲಾತಿ ಪರ ಎಂದ ಸರ್ಕಾರ

scst-reservation-enhancement bill passed in legislative assembly

ವಿಧಾನಸಭೆ (ಬೆಳಗಾವಿ): ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಮೀಸಲಾತಿ (SCST Reservation) ಪ್ರಮಾಣವನ್ನು ಹೆಚ್ಚಳ ಮಾಡುವ ಸುಗ್ರೀವಾಜ್ಞೆಯನ್ನು ಕಾಯ್ದೆಯಾಗಿ ಪರಿವರ್ತಿಸುವ ಪ್ರಸ್ತಾವನೆಗೆ ವಿಧಾನಸಭೆ ಸರ್ವಾನುಮತದ ಅಂಗೀಕಾರ ನೀಡಿದೆ.

ಎಸ್‌ಸಿ ಸಮುದಾಯಕ್ಕೆ ಈ ಹಿಂದೆ ಇದ್ದ ಶೇ. 15 ಮೀಸಲಾತಿಯನ್ನು ಶೇ. 17 ಕ್ಕೆ ಹಾಗೂ ಎಸ್‌ಟಿ ಸಮುದಾಯಕ್ಕೆ ಈ ಹಿಂದೆ ಇದ್ದ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದ್ದ ಸರ್ಕಾರ, ಈ ಹಿಂದೆಯೇ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದೆ. ಇದೀಗ ಸುಗ್ರೀವಾಜ್ಞೆಯನ್ನು ಕಾಯ್ದೆಯನ್ನಾಗಿ ಪರಿವರ್ತಿಸುವ ಮಸೂದೆಗೆ ಒಪ್ಪಿಗೆ ದೊರಕಿದೆ.

ಮಸೂದೆಯನ್ನು ಮಂಡಿಸಿದ ನಂತರ ಈ ಕುರಿತು ಸರ್ಕಾರ ಹಾಗೂ ಪ್ರತಿಪಕ್ಷಗಳ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ನಾನು ಎಸ್‌ಸಿಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಅನುದಾದನ ಖರ್ಚು ಮಾಡಬೇಕು ಎಂದು ಎಸ್ಸ್‌ಸಿಎಸ್‌ಪಿ-ಟಿಎಸ್‌ಪಿ ಬೆಳಗಾವಿ ಅಧಿವೇಶನದಲ್ಲಿ ಕಾನೂನು ಜಾರಿಗೆ ತಂದಿದ್ದೆ. ಈ ಕಾನೂನು ತಂದ ನಂತರ ನಮ್ಮ ಸರ್ಕಾರದ ಕೊನೆಯ ಬಜೆಟ್‌ ನಲ್ಲಿ 30,000 ಕೋಟಿ ರೂ. ಆಗಿತ್ತು. ಈಗ ಈ ಯೋಜನೆಗೆ ನೀಡಿರುವ ಅನುದಾನ 28 ಸಾವಿರ ಕೋಟಿ ರೂ. ಇದೆ. ಬಜೆಟ್‌ ಗಾತ್ರ ಹೆಚ್ಚಾದಂತೆ ಈ ಯೋಜನೆಗೆ ನೀಡುವ ಅನುದಾನವೂ ಹೆಚ್ಚಾಗಬೇಕಿತ್ತು.

ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿಲ್ಲ. ಬಿಜೆಪಿ ಯಾವಾಗಲಾದರೂ ಮೀಸಲಾತಿ ಬೇಕು ಎಂದು ಹೋರಾಟ ಮಾಡಿದೆ? ಮಂಡಲ್‌ ಕಮಿಷನ್‌ ವರದಿಯನ್ನು ವಿರೋಧ ಮಾಡಿದವರು ಯಾರು? ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿಯನ್ನು ತಂದು ಹಿಂದುಳಿದವರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಮೀಸಲಾತಿ ನೀಡಿದಾಗ ಅದನ್ನು ವಿರೋಧ ಮಾಡಿದವರು ಯಾರು? ಬಿಜೆಪಿಯ ಉಪಾಧ್ಯಕ್ಷರು, ರಾಜ್ಯಸಭಾ ಸದಸ್ಯರು ಆಗಿದ್ದ ರಾಮಾಜೋಯಿಸ್‌ ಅವರು. ಸುಪ್ರೀಂಕೋರ್ಟ್‌ ನಲ್ಲಿ ಅವರು ಮನವಿ ಮಾಡಿದ ಹೊರತಾಗಿಯೂ ಕೋರ್ಟ್‌ ಅವರ ಮನವಿಯನ್ನು ತಿರಸ್ಕಾರ ಮಾಡಿತು, ಸ್ವತಂ ರಾಮಾಜೋಯಿಸ್‌ ಅವರೇ ಕೋರ್ಟ್‌ ನಲ್ಲಿ ವಾದ ಮಾಡಿದ್ದರು. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದವರು ಅರ್ಜುನ್‌ ಸಿಂಗ್‌ ಅವರು, ಆಗಲೂ ವಿರೋಧ ಮಾಡಿದವರು ಯಾರು ಎಂಬುದು ನಮಗೆಲ್ಲ ಗೊತ್ತಿದೆ.

ನಮ್ಮ ಡಬ್ಬಲ್‌ ಇಂಜಿನ್‌ ಸರ್ಕಾರ ಎಂದು ಹೇಳುತ್ತೀರ, ನಾವು ನಿಮ್ಮೊಂದಿಗೆ ದೆಹಲಿಗೆ ಬರುತ್ತೇವೆ, ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಂವಿಧಾನದ 9ನೇ ಶೆಡ್ಯೂಲ್‌ ಗೆ ಸೇರಿಸುವಂತೆ ಒತ್ತಾಯ ಮಾಡೋಣ. ಮೀಸಲಾತಿ ಹೆಚ್ಚಳಕ್ಕೆ ಕಾಂಗ್ರೆಸ್‌ ಪಕ್ಷದ ಪೂರ್ಣ ಬೆಂಬಲ ಇದೆ. ನೀವು ಸರ್ವಪಕ್ಷ ಸಭೆ ಕರೆದು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗುವುದಾದರೆ ನಾವು ಸಿದ್ಧರಿದ್ದೇವೆ. ಮೀಸಲಾತಿ ಹೆಚ್ಚಳ ಆಗಬೇಕು ಎಂಬುದು ನಮ್ಮ ಕಳಕಳಿ. ನಾವು ಮೀಸಲಾತಿ ಪರವಾಗಿದ್ದೇವೆ ಎಂಬುದನ್ನು ಮತ್ತೊಮ್ಮೆ ಹೇಳಲು ಬಯಸುತ್ತೇನೆ ಎಂದರು.

ಸಿದ್ದರಾಮಯ್ಯ ಮಾತಿನ ನಡುವೆ ಮಾತನಾಡಿದ ಬಿಜೆಪಿಯ ಸಿ.ಟಿ. ರವಿ, ಕಾಂಗ್ರೆಸ್‌ನ ಕೆಲವರು ಗೊಬೆಲ್ಸ್‌ ಥಿಯರಿ ಹೇಳುತ್ತಾರೆ. ಅದನ್ನು ಹೇಳಿ ಹೇಳಿ ಸೋಲುತ್ತಾ ಇದ್ದಾರೆ. ಆದರೂ ಹೇಳಿದ್ದನ್ನೇ ಹೇಳುತ್ತಾರೆ. ಅತಿಹೆಚ್ಚು ಮೀಸಲಾತಿ ಕೊಟ್ಟಿದ್ದು ವಾಜಪೇಯಿ ಸರ್ಕಾರ. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾರು? ಅಂಬೇಡ್ಕರ್ ಅವರನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿದ್ದು ಯಾರು? ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಬಿಜೆಪಿಯವರು ಮನುಸ್ಮೃತಿ ಬೆಂಬಲಿಸಿದರು, ಸಂವಿಧಾನವನ್ನು ವಿರೋಧಿಸಿದರು ಎಂಬ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ದಾಖಲೆ ತೋರಿಸಿ ಇಲ್ಲವೇ ಪಕ್ಷಕ್ಕೆ ರಾಜೀನಾಮೆ ಕೊಡಿ. ಕಾಂಗ್ರೆಸ್‌ನವರು ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು ಎನ್ನುವುದಕ್ಕೆ ನಾನು ದಾಖಲೆ ನೀಡುತ್ತೇನೆ. ಆರ್‌ಎಸ್‌ಎಸ್‌ ಬಗ್ಗೆ ಪ್ರಿಯಾಂಕ್‌ ಅವರು ಮಾಡಿರುವ ಆರೋಪಕ್ಕೆ ದಾಖಲೆ ನೀಡಲಿ. ಅವರು ದಾಖಲೆ ನೀಡಿದರೆ ನಾನು ನನ್ನ ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು.

ಈ ನಡುವೆ ಮಾತನಾಡಿದ ಕಾಂಗ್ರೆಸ್‌ನ ರಮೇಶ್‌ ಕುಮಾರ್‌, ಹಿಂದು ಕೋಡ್ ಬಿಲ್ ರಚನೆ ಮಾಡುವಾಗ ವಿರೋಧ ಮಾಡಿದ್ದು ಯಾರು? ಸಂಸತ್ ಮುಂದೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಂಚಿಕೊಂಡಿದ್ದು ಯಾರು? 12 ಮತ್ತು 13 ವರ್ಷಗಳಿಗೆ ಮನುಸ್ಮೃತಿ ಮತ್ತು ಸಂವಿಧಾನ ಓದಿಬಿಟ್ಟಿದ್ದರ? ಯಾರ ಇವರ ಹಿಂದೆ ಇದ್ದರು ಎನ್ನುವುದನ್ನು ಬೆಳಕು ಚೆಲ್ಲಿ ರವಿ ಎಂದು ಟೀಕಿಸಿದರು.

ಮೀಸಲಾತಿಯು ಕೇವಲ ಸರ್ಕಾರಿ ಹುದ್ದೆಗಳಿಗೆ ಸೀಮಿತವಾಗದೇ ಖಾಸಗಿ ಕ್ಷೇತ್ರದ ಉದ್ಯೋಗಗಳು ಮತ್ತು ಸರ್ಕಾರಿ ಹೊರಗುತ್ತಿಗೆ ಹುದ್ದೆಗಳಿಗೂ ಅನ್ವಯವಾಗಬೇಕು ಎಂದು ಕೆಲವು ಸದಸ್ಯರು ಒತ್ತಾಯಿಸಿದರು.

ಸರ್ಕಾರದ ಪರವಾಗಿ ಉತ್ತರ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ಮೀಸಲಾತಿ ವಿಚಾರವಾಗಿ ಯಾರದ್ದೂ ತಕರಾರು ಇಲ್ಲ ಅಂತ ಎನ್ನಿಸುತ್ತದೆ. ಚುನಾವಣಾ ಸಮಯ ಆಗಿರುವುದರಿಂದ ಅನುಷ್ಠಾನ ಮಾಡುವುದು ಕಷ್ಟ ಎಂದು ಆಪಾದನೆ ಕೂಡ ಇದೆ. ಈ ಬಗ್ಗೆ ಸರ್ವ ಪಕ್ಷ ಸಭೆ ಕೂಡ ಕರೆಯಲಾಗಿತ್ತು. ಆಗ ಸಿದ್ದರಾಮಯ್ಯ ಅವರು, ಕಾಯಬೇಡಿ, ಏನಾದರೂ ಮಾಡಿ ಎಂದು ಹೇಳಿದ್ದರು. 9ನೇ ಶೆಡ್ಯೂಲ್ಡ್ ಗೆ ಸೇರಿಸಿ ಎಂದರು.

ಸುಪ್ರೀಂ ಕೋರ್ಟ್ ತೀರ್ಪಿನ ಅರಿವಿದ್ದೇ ಇದನ್ನು ನಾವು ಜಾರಿಗೆ ತಂದಿದ್ದೇವೆ. ನಾವು ಇವತ್ತು ನಾಗಮೋಹನ್ ದಾಸ್ ವರದಿ ಶಿಫಾರಸ್ಸಿಗೆ ಕೈ ಹಾಕಿದ್ದೇವೆ. ನಾಯಕ ಸಮಾಜದ ಮಕ್ಕಳ ಕೋರ್ಟ್ ಮುಂದೆ ಹೋದಾಗ ನಮಗೆ ರಿಸರ್ವೇಷನ್ ಕೊಟ್ಟಿಲ್ಲ ಅನ್ಯಾಯ ಆಗುತ್ತಾಎ ಇದೆ ಎಂದು ಹೇಳಿಕೊಂಡರು. ಕೋರ್ಟ್ ನಮಗೆ ಡೈರಕ್ಷನ್ ಕೂಡ ಕೊಟ್ಟಿತ್ತು. ಸರ್ಕಾರ ಇದನ್ನು ಸರಿ ಮಾಡಿ, ಹೆಚ್ಚು ಮಾಡಿ ಎಂದು ಹೇಳಿತ್ತು. ಚುನಾವಣಾ ಸಮಯದಲ್ಲಿ ನಾವು ಕಮಿಟ್ಮೆಂಟ್ ಮಾಡಿದ್ದು ನಿಜ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುತ್ತೇವೆ ಎಂದು ಹೇಳಿದ್ದೆವು. ಮೀಸಲಾತಿ ನೀಡುವುದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದರು. ಇವರು ಅಧಿಕಾರದಲ್ಲಿ ಇದ್ದಾಗ ಪೆನ್ನಿಗೆ ಇಂಕ್‌ ಇರಲಿಲ್ಲವೇನೊ ಎಂದು ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದರು.

ನಾವು ಹೇಳಿದ್ದನ್ನು ಕಾರ್ಯ ಸಾಧನೆ ಮಾಡಿ ಕೊಟ್ಟಿದ್ದೇವೆ. ಇದು ನಮಗೆ ಹರ್ಷ ತಂದ ವಿಚಾರ. ನಮ್ಮ ಪ್ರಯತ್ನಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು ಮತ್ತೂ ಸಂತಸದ ವಿಚಾರ. ಮುಂದೆ ಆಗುವ ನೇಮಕಾತಿಯಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಾಗಲಿದೆ. ನಾವು ಹಂಚಿಕೆಯಲ್ಲಿ ಯಾವುದನ್ನೂ ಕಡಿಮೆ ಮಾಡಿಲ್ಲ ಎಂದರು.

ಚುನಾವಣಾ ಗಿಮಿಕ್‌ ಆಗಿ ಮೀಸಲಾತಿ ಹೆಚ್ಚಳ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಸಿದ್ದರಾಮಯ್ಯನವರಿಗೂ 4 ವರ್ಷದ ಮೊದಲು ಈ ಗಿಮಿಕ್ ಮಾಡುವ ಅವಕಾಶವಿತ್ತು. ಆಗ ಸಿದ್ದರಾಮಯ್ಯ ಈ ಪ್ರಯತ್ನ ಮಾಡಲಿಲ್ಲ. ಮಾಡುವ ಕೆಲಸಕ್ಕೆ ಬೆಂಬಲ ಕೊಡುವ ಪ್ರಯತ್ನವಿರಬೇಕು. ನಾವು ಮಾಡಿದ್ದೇವೆ ಎನ್ನುವುದನ್ನು ಗಿಮಿಕ್ ಎನ್ನಬಾರದು. ಕೋರ್ಟ್‌ನಲ್ಲಿ ಸಮಸ್ಯೆ ಎದುರಾಗುವ ಸಂಭವ ಬರುವುದಿಲ್ಲ ಎಂದು ನಂಬಿದ್ದೇವೆ. ಕೇಂದ್ರದ ಜೊತೆಗೆ ಕೂಡ ಮಾತನಾಡಿ 9ನೇ‌ ಶೆಡ್ಯೂಲ್‌ಗೆ ಸೇರಿಸುವ ಕೆಲಸ ಮಾಡುತ್ತೇವೆ ಎಂದರು.

ಇದನ್ನೂ ಓದಿ | Vokkaliga Reservation | ಒಕ್ಕಲಿಗ ಮೀಸಲಾತಿ ಕುರಿತು ಶೀಘ್ರ ವರದಿ ಲಭಿಸಲಿದೆ: ಸಿಎಂ ಬೊಮ್ಮಾಯಿ

Exit mobile version