ಬೆಳಗಾವಿ: ಕಳೆದ ಸೆಪ್ಟೆಂಬರ್ ೧೭ರಂದು ಇಲ್ಲಿನ ಕ್ಯಾಂಪ್ ಪ್ರದೇಶದ ಮನೆಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಸುಧೀರ್ ಕಾಂಬಳೆ(57) ಅವರ ಬರ್ಬರ ಹತ್ಯೆಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಆವತ್ತು ಮನೆಯ ಮೇಲಿನ ಮಹಡಿಯಲ್ಲಿ ಮಲಗಿದ್ದ ಕಾಂಬಳೆ ಅವರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಲಾಗಿತ್ತು. ಹೊಟ್ಟೆ, ಕತ್ತು, ಕೈ ಮತ್ತು ಮುಖಕ್ಕೆ ಕಡಿಯಲಾಗಿತ್ತು. ಇದೀಗ ಈ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಕಾಂಬಳೆಯ ಪತ್ನಿ ರೋಹಿಣಿ ಕಾಂಬಳೆ, ಪುತ್ರಿ ಸ್ನೇಹಾ ಕಾಂಬಳೆ, ಸ್ನೇಹಾಳ ಪ್ರಿಯಕರ ಅಕ್ಷಯ ವಿಠಕರ್ (25) ಅವರೇ ಈಗ ಬಂಧಿತರಾಗಿರುವ ಆರೋಪಿಗಳು.
ಆವತ್ತು ಕೊಲೆ ನಡೆದ ದಿನ ಪತ್ನಿ ರೋಹಿಣಿ ಮತ್ತು ಪುತ್ರಿ ಸ್ನೇಹಾ ಅಮಾಯಕರಂತೆ ನಟಿಸಿದ್ದರು. ಭಯದಿಂದ ತಲ್ಲಣಿಸಿದಂತೆ ಪೋಸ್ ಕೊಟ್ಟಿದ್ದರು. ಮನೆಯ ಮೇಲ್ಮಹಡಿಯಲ್ಲಿ ಕೊಲೆ ನಡೆದರೂ ತಮಗೆ ಗೊತ್ತೇ ಆಗಲಿಲ್ಲ ಎಂಬಂತೆ ವರ್ತಿಸಿದ್ದರು. ಆದರೆ, ಅವರ ವರ್ತನೆಯಲ್ಲಿನ ಒಂದು ಸಣ್ಣ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಅದುವೇ ಈಗ ಬಂಧನಕ್ಕೆ ಕಾರಣವಾಗಿತ್ತು. ಸುಧೀರ್ ಕಾಂಬಳೆ ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬ ಕಾರಣಕ್ಕೆ ಮಗಳು ತನ್ನ ಪ್ರಿಯಕರನಿಗೆ ಹೇಳಿ ಈ ಕೊಲೆ ಮಾಡಿಸಿದ್ದಾಳೆ ಎನ್ನುವುದು ಈಗ ಬೆಳಕಿಗೆ ಬಂದಿರುವ ಸತ್ಯ. ಇದರ ಜತೆಗೆ ಇನ್ನೂ ಹಲವು ಸಂಗತಿಗಳು ಇದರಲ್ಲಿ ಮಿಳಿತವಾಗಿವೆ.
ಯಾರು ಈ ಸುಧೀರ್ ಕಾಂಬಳೆ?
ಸುಧೀರ್ ಭಗವಾನ್ ದಾಸ್ ಕಾಂಬಳೆ ಈ ಹಿಂದೆ ದುಬೈನಲ್ಲಿ ಕೆಲಸಕ್ಕಿದ್ದರು. ಪತ್ನಿ ರೋಹಿಣಿ ಮತ್ತು ಇಬ್ಬರು ಮಕ್ಕಳು ಊರಿನಲ್ಲಿದ್ದರು. ಕೊರೊನಾ ಕಾರಣದಿಂದಾಗಿ ಒಂದೂವರೆ ವರ್ಷದ ಹಿಂದೆ ಕಾಂಬಳೆ ಊರಿಗೆ ಬಂದಿದ್ದರು. ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದ್ದರು.
ಈ ನಡುವೆ, ಕಾಂಬಳೆ ಪತ್ನಿಗೆ ತುಂಬಾ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿತ್ತು. ಕುಡಿತದ ಚಟವೂ ಸೇರಿತ್ತು ಎನ್ನಲಾಗಿದೆ. ಆದರೆ, ಅವರ ನಿಜವಾದ ಸಿಟ್ಟು ಇದ್ದಿದ್ದು ಪತ್ನಿ ಮತ್ತು ಮಗಳ ಮೇಲೆ ಎಂಬ ಮಾತೂ ಇದೆ. ಪತ್ನಿ ಮತ್ತು ಮಗಳು ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಸಂಶಯ ಅವರಿಗಿತ್ತು. ಹಾಗಾಗಿ ಅವರು ದುಬೈನಲ್ಲಿ ದುಡಿದ ಹಣವನ್ನು ಹೆಂಡತಿ ಮಕ್ಕಳಿಗೆ ಕೊಟ್ಟಿರಲಿಲ್ಲ ಎನ್ನಲಾಗಿದೆ. ಜತೆಗೆ ಪ್ರತಿ ದಿನವೂ ಈ ವಿಚಾರದಲ್ಲಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇತ್ತ ಮಗಳು ಸ್ನೇಹಾ ಪುಣೆಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿದ್ದಳು. ತಾಯಿ ರೋಹಿಣಿ ತಂದೆ ನೀಡುತ್ತಿರುವ ಕಿರುಕುಳದ ಬಗ್ಗೆ ಮಗಳಿಗೆ ಹೇಳಿದ್ದಳು ಎನ್ನಲಾಗಿದೆ. ಆಗ ಅವರಿಗೆ ಹೊಳೆದಿದ್ದೇ ಕೊಲೆಯ ಪ್ಲ್ಯಾನ್. ಸ್ನೇಹಾಳಿಗೆ ಪುಣೆಯ ಹೋಟೆಲ್ ನಲ್ಲಿ ಸ್ವಾಗತಕಾರನಾಗಿ ಕೆಲಸ ಮಾಡುತ್ತಿದ್ದ ಅಕ್ಷಯ್ ಜತೆ ಪ್ರೇಮವಿತ್ತು. ಪ್ರಾಯೋಗಿಕ ತರಬೇತಿ ವೇಳೆ ಅಕ್ಷಯ-ಸ್ನೇಹಾ ನಡುವೆ ಪರಿಚಯವಾಗಿ ಅದು ಪ್ರೀತಿಯಾಗಿತ್ತು. ರೋಹಿಣಿ ಅವರ ತವರೂರು ಪುಣೆಯಾಗಿದ್ದರಿಂದ ಆಕೆ ಅಲ್ಲಿ ಕಲಿಯುತ್ತಿದ್ದಳು. ಅಕ್ಷಯ್‌ನ ಮೂಲ ಊರು ಬೆಳಗಾವಿ. ಆತ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ. ಹಾಗಾಗಿ ನಂಟು ಬೆಸೆಯಲು ಸುಲಭವಾಗಿತ್ತು. ಅಕ್ಷಯ್ ಮದುವೆಯಾಗಿ ಒಂದು ಮಗುವಿದ್ದರೂ ಸ್ನೇಹಗಳನ್ನು ಸ್ನೇಹ ಮೀರಿ ಪ್ರೀತಿಸಲು ಶುರು ಮಾಡಿದ್ದ.
ದೃಶ್ಯಂ ಸಿನಿಮಾ ನೋಡಿ ಪ್ಲ್ಯಾನ್ ಮಾಡಿದ್ದರು
ಕಾಂಬಳೆಯನ್ನು ಹೇಗಾದರೂ ಮುಗಿಸಬೇಕು ಎಂದು ರೋಹಿಣಿ, ಸ್ನೇಹಾ ಮತ್ತು ಅಕ್ಷಯ್ ಪ್ಲ್ಯಾನ್ ಮಾಡಿದ್ದರು. ಯಾವುದೇ ಸಾಕ್ಷ್ಯವಿಲ್ಲದಂತೆ ಕೊಲೆ ಮಾಡುವುದು ಹೇಗೆಂದು ತಿಳಿಯಲು ಅವರು ದೃಶ್ಯಂ ಸಿನಿಮಾವನ್ನು ಹಲವು ಬಾರಿ ವೀಕ್ಷಿಸಿದ್ದರು. ಅಂತಿಮವಾಗಿ ಸೆ. ೧೬ರ ರಾತ್ರಿಯ ಮುಹೂರ್ತವನ್ನು ಫಿಕ್ಸ್ ಮಾಡಿದ್ದರು. ಈ ಕೊಲೆಗೆ ಮುನ್ನ ಅಂದರೆ ಸೆ. ೧೫ರಂದು ಅಕ್ಷಯ್ ಮನೆಗೆ ಬಂದು ಎಲ್ಲವನ್ನೂ ನೋಡಿಕೊಂಡು, ಯಾರು ಏನೆಲ್ಲ ಮಾಡಬೇಕು ಎನ್ನುವುದನ್ನೆಲ್ಲ ಪ್ಲ್ಯಾನ್ ಮಾಡಿಕೊಂಡು ಹೋಗಿದ್ದ.
ಸೆ. ೧೬ರ ರಾತ್ರಿ ನಡೆದಿದ್ದೇನು?
ಸೆ. ೧೬ರ ರಾತ್ರಿ ಸುಧೀರ್ ಕಾಂಬಳೆ ಊಟ ಮಾಡಿ ಮೇಲಿನ ಮಹಡಿಯಲ್ಲಿ ಮಲಗಿದ್ದರು. ಹೆಂಡತಿ ಮತ್ತು ಮಕ್ಕಳು ಕೆಳಗಿನ ಕೋಣೆಯಲ್ಲಿ ನಿದ್ರಿಸಿದ್ದರು. ಪ್ಲ್ಯಾನ್‌ನಂತೆಯೇ ಆವತ್ತು ಹಿಂಬದಿಯ ಬಾಗಿಲನ್ನು ಹಾಕಿರಲಿಲ್ಲ. ಅಲ್ಲಿಂದ ಒಳಪ್ರವೇಶಿಸಿದ ಅಕ್ಷಯ್ ವಿಠಕರ ಸುಧೀರ್ ಮಲಗಿದ್ದ ಕೋಣೆಗೆ ಹೋಗಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ್ದ. ರಾತ್ರಿಯೇ ಕೊಲೆ ನಡೆದಿದ್ದರೂ ತಮಗೆ ಗೊತ್ತೇ ಆಗಲಿಲ್ಲ ಎಂಬಂತೆ ರೋಹಿಣಿ ಮತ್ತು ಮಕ್ಕಳು ವರ್ತಿಸಿದ್ದರು. ಬೆಳಗ್ಗೆ ಐದು ಗಂಟೆಗೆ ಜೋರಾಗಿ ಅಳಲು ಶುರುಮಾಡಿದ್ದರು. ಆಗ ಹತ್ತಿರದ ಮನೆಯವರು ಬಂದು ನೋಡಿದಾಗ ಬರ್ಬರ ಕೊಲೆ ನಡೆದಿತ್ತು. ಕೊಲೆಗಾರ ಬೆಳಗಾವಿ ಬಿಟ್ಟು ಪುಣೆ ಕಡೆಗೆ ಓಡಿದ್ದ!
ಕೊಲೆಗಾರರು ಪತ್ತೆಯಾಗಿದ್ದು ಹೇಗೆ?
ನಿಜವೆಂದರೆ ಆವತ್ತು ಕೊಲೆ ನಡೆದ ಮರುದಿನ ರೋಹಿಣಿ ಮತ್ತು ಸ್ನೇಹಾ ಬೆದರಿ ಗುಬ್ಬಚ್ಚಿಗಳಂತೆ ನಿಂತಿದ್ದರು. ಅವರು ಭಯಗೊಂಡಿದ್ದರು ಎಂದು ಎಲ್ಲರೂ ತಿಳಿದಿದ್ದರು. ಆದರೆ, ಪೊಲೀಸರಿಗೆ ಈ ಅತಿಯಾದ ಭಯದ ಹಿಂದೆ ಏನೋ ಇದೆ ಅನಿಸಿತ್ತು. ಅದೇ ಸಂಶಯದ ಆಧಾರದ ಮೇಲೆ ತಾಯಿ, ಮಗಳನ್ನು ವಿಚಾರಣೆ ನಡೆಸಿದರು. ಅವರಿಬ್ಬರ ಹೇಳಿಕೆಗಳಲ್ಲಿನ ವ್ಯತ್ಯಾಸಗಳು ಅವರಿಗೆ ಸಣ್ಣ ಮಟ್ಟದ ಲೀಡ್ ಒದಗಿಸಿತು. ಯಾವಾಗ ಅಕ್ಷಯ್‌ನನ್ನು ವಿಚಾರಣೆ ಮಾಡಿದರೋ ಅಲ್ಲಿಗೆ ಕೊಲೆಗಾರರು ಫಿಕ್ಸ್ ಆಗಿ ಹೋದರು. ಅಂತೂ ಕೊಲೆ ನಡೆದ ಒಂದು ವಾರದ ಬಳಿಕ ಹಂತಕರು ಸಿಕ್ಕಿಬಿದ್ದಿದ್ದಾರೆ.
ಹಿಂದಿನ ಕೊಲೆಯಲ್ಲೂ ಹೆಂಡತಿ ಕೈವಾಡ!
ಬೆಳಗಾವಿಯಲ್ಲಿ ಇದೇ ವರ್ಷದ ಮಾರ್ಚ್ ೧೫ರಂದು ನಡೆದ ರಾಜು ದೊಡ್ಡಬಮ್ಮಣ್ಣವರ್ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆಯಲ್ಲೂ ಇದೇ ರೀತಿ ಹೆಂಡತಿಯೇ ಪ್ರಧಾನ ಪಾತ್ರಧಾರಿಯಾಗಿದ್ದಳು. ಆವತ್ತು ಕೂಡಾ ಇದೇ ರೀತಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು. ಆವತ್ತು ರಾಜು ಅವರ ಎರಡನೇ ಪತ್ನಿ ಕಿರಣಾ ಜಾಗದ ಪಾಲಿನ ವಿಚಾರದಲ್ಲಿ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ಮಧು ಕಲ್ಲಂತ್ರಿ ಎಂಬ ಸಮಾಜಸೇವಕನನ್ನು ಬಳಸಿಕೊಂಡು ಕೊಲೆ ಮಾಡಿಸಿದ್ದಳು. ಕೊಲೆಗೆ ೧೦ ಲಕ್ಷ ರೂ. ಸುಪಾರಿ ಕೊಟ್ಟಿದ್ದಳು.
ಇದನ್ನೂ ಓದಿ | Murder | ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಏಜೆಂಟ್‌ನ ಬರ್ಬರ ಹತ್ಯೆ