Site icon Vistara News

ರೈಲ್ವೇ ಸ್ಟೇಷನ್‌ ಶವ ಪತ್ತೆ ರಹಸ್ಯ ಬಯಲು; ಮಹಿಳೆಯನ್ನು ಕೊಂದು ಡ್ರಮ್‌ನಲ್ಲಿ ಹಾಕಿಟ್ಟು ಪರಾರಿಯಾದ ಇಬ್ಬರ ಅರೆಸ್ಟ್‌

Railway station

#image_title

ಬೆಂಗಳೂರು: ರೈಲು ನಿಲ್ದಾಣಗಳಲ್ಲಿ ಡ್ರಮ್‌ನಲ್ಲಿ ಮಹಿಳೆಯರ ಶವಗಳನ್ನು ಅಡಗಿಸಿಟ್ಟು ಪರಾರಿಯಾಗುವ ವಿದ್ಯಮಾನ ರಾಜಧಾನಿಯನ್ನು ಬೆಚ್ಚಿಬೀಳಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಬಂಗಾರಪೇಟೆ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ, ಈ ವರ್ಷದ ಜನವರಿ 4ರಂದು ಯಶವಂತಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮತ್ತು ಮಾರ್ಚ್‌ 13ರಂದು ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್‌ನಲ್ಲಿ (Railway station) ಡ್ರಮ್‌ನಲ್ಲಿ ಮಹಿಳೆಯ ಶವವನ್ನು ಇಟ್ಟು ಹೋಗಿದ್ದರು ದುಷ್ಕರ್ಮಿಗಳು. ಇದೀಗ ಮೂರನೇ ಪ್ರಕರಣದ ಹಿನ್ನೆಲೆ ಬಯಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಮಾರ್ಚ್‌ 13ರಂದು ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿಕ ಅನಾಥವಾಗಿ ಪತ್ತೆಯಾದ ಡ್ರಮ್‌ನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಮಹಿಳೆಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು ಶವವನ್ನು ಡ್ರಮ್‌ನಲ್ಲಿ ಇಟ್ಟು ಹೋಗಿದ್ದರು ದುಷ್ಕರ್ಮಿಗಳು. ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದಾಗ ಇಬ್ಬರು ದುಷ್ಕರ್ಮಿಗಳು ಒಂದು ಆಟೋದಲ್ಲಿ ಬಂದು ಡ್ರಮ್‌ ಇಟ್ಟು ಹೋಗಿದ್ದು ಪತ್ತೆಯಾಗಿತ್ತು.

ಮೂರೇ ತಿಂಗಳ ಅವಧಿಯಲ್ಲಿ ಮೂರನೇ ಪ್ರಕರಣ ನಡೆದುದನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೇ ಎಸ್‌ಪಿ ಸೌಮ್ಯಲತ ಅವರೇ ಖುದ್ದು ಪ್ರಕರಣ ಸಂಬಂಧ ತನಿಖೆಗೆ ಇಳಿದು ಈಗ ಒಂದು ತಾತ್ವಿಕ ಅಂತ್ಯಕ್ಕೆ ತಂದಿದ್ದಾರೆ.

ಕೊಲೆ ಮಾಡಿದವರು ಬಿಹಾರ ಮೂಲದ ಕಾರ್ಮಿಕರು

ನಗರದ ಕಲಾಸಿಪಾಳ್ಯದಲ್ಲಿ ವಾಸವಾಗಿದ್ದ ಬಿಹಾರ ಮೂಲದ ಐವರು ಆರೋಪಿಗಳು ಈ ಕೊಲೆಯನ್ನು ಮಾಡಿದ್ದು ಎನ್ನುವುದು ಗೊತ್ತಾಗಿದೆ. ಅವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ.
ಕೊಲೆಯಾದ ಮಹಿಳೆಯ ಬಗ್ಗೆಯೂ ಮಾಹಿತಿ ದೊರಕಿದ್ದು, ಅದೇ ಪರಿಸರದವರು ಎಂದು ಹೇಳಲಾಗಿದೆ. ಅಕ್ರಮ ಸಂಬಂಧವೇ ಕೊಲೆಗೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಇದರ ವಿಸ್ತೃತ ತನಿಖೆ ನಡೆಯುತ್ತಿದೆ.

ಹಿಂದಿನ ಪ್ರಕರಣಗಳಿಗೂ ಸಂಬಂಧವಿದೆಯಾ?

ರೈಲ್ವೇ ಸ್ಟೇಷನ್‌ನಲ್ಲಿ ಬೆನ್ನು ಬೆನ್ನಿಗೆ ಮೂರು ಶವಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಒಂದಕ್ಕೊಂದು ಸಂಬಂಧವಿರಬಹುದು, ಇದೊಂದು ಸರಣಿ ಕೊಲೆ ಎಂದು ಶಂಕಿಸಲಾಗಿತ್ತು. ಆದರೆ, ಈಗ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಮೂರನೇ ಪ್ರಕರಣಕ್ಕೂ ಹಿಂದಿನ ಪ್ರಕರಣಗಳಿಗೂ ಸಂಬಂಧವಿಲ್ಲ. ಆದರೆ, ಅವುಗಳ ಪ್ರಭಾವವಿದೆ!

ಅಂದರೆ, ಈ ಹಿಂದಿನ ಎರಡು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗದೆ ಇರುವುದರಿಂದ ಈ ರೀತಿ ಮಾಡಿದರೆ ತಪ್ಪಿಸಿಕೊಳ್ಳಬಹುದು ಎಂಬ ಧೈರ್ಯದಿಂದ ಆರೋಪಿಗಳು ಡ್ರಮ್‌ ಮತ್ತು ರೈಲ್ವೆ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕಲಾಸಿಪಾಳ್ಯದಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗಳು ಈ ಕೊಲೆಯನ್ನು ಮುಚ್ಚಿ ಹಾಕುವುದು ಹೇಗೆ ಎಂಬ ಬಗ್ಗೆ ಪ್ಲ್ಯಾನ್‌ ಮಾಡುತ್ತಿದ್ದರು. ಆಗ ಕೆಲವೊಂದು ವೆಬ್‌ ಸೈಟ್‌ಗಳನ್ನು ಸರ್ಚ್‌ ಮಾಡಿದ್ದರು. ಆಗ ಬೆಂಗಳೂರಿನ ಎರಡು ರೈಲು ನಿಲ್ದಾಣಗಳಲ್ಲಿ ಡ್ರಮ್‌ನಲ್ಲಿ ಶವ ಇಟ್ಟು ಹೋಗಿದ್ದ ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಗಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡ ಹಂತಕರು ಅದೇ ರೀತಿ ಮಾಡಲು ಪ್ಲ್ಯಾನ್‌ ಮಾಡಿದರು. ನಾವು ಕೂಡ ಹತ್ಯೆ ಮಾಡಿ ಡ್ರಮ್ನಲ್ಲಿ ಬಾಡಿ ಇಟ್ಟು ಬಂದ್ರೆ ಗೊತ್ತಾಗುವುದಿಲ್ಲವೆಂದು ಸ್ಕೆಚ್ ಹಾಕಿ ಡ್ರಮ್‌ ಖರೀದಿಸಿ, ಶವವನ್ನು ಅದರಲ್ಲಿ ತುಂಬಿ ಆಟೋ ಮಾಡಿಕೊಂಡು ಬೈಯಪ್ಪನಹಳ್ಳಿಯ ರೈಲ್ವೇ ನಿಲ್ದಾಣಕ್ಕೆ ತಂದರು. ಅಲ್ಲಿ ಯಾರಿಗು ಅನುಮಾನ ಬಾರದಂತೆ ರೈಲ್ವೆ ನಿಲ್ದಾಣದಲ್ಲಿ ಇಟ್ಟು ಪರಾರಿಯಾದರು.

ಹಾಗಿದ್ದರೆ ಹಂತಕರು ಇವರೇ ಎಂದು ಪತ್ತೆಯಾಗಿದ್ದು ಹೇಗೆ? ಸುಳಿವು ಕೊಟ್ಟ ಡ್ರಮ್‌

ಇವರೇ ಹೆಣವನ್ನು ಇಟ್ಟು ಹೋದರು ಎನ್ನುವುದನ್ನು ಎಸ್‌ಪಿ ಸೌಮ್ಯಲತಾ ಮತ್ತು ಟೀಮ್‌ ಪತ್ತೆ ಹಚ್ಚಿದ ಕಥೆ ಇಂಟ್ರೆಸ್ಟಿಂಗ್‌. ಸಾಮಾನ್ಯವಾಗಿ ಈಗ ಎಲ್ಲ ಕಡೆ ಸಿಸಿ ಟಿವಿ ಇರುತ್ತದೆ. ಇದರ ಆಧಾರದಲ್ಲಿ ಹಂತಕರನ್ನು ಪತ್ತೆ ಹಚ್ಚಬಹುದು ಎಂದು ಭಾವಿಸಲಾಗುತ್ತದೆ. ಇಲ್ಲೂ ಹಾಗೆಯೇ ಸಿಸಿಟಿವಿಯನ್ನು ನೋಡಿದಾಗ ಕೆಲವೊಂದು ಮಾಹಿತಿಗಳು ದೊರೆತವು. ಆರೋಪಿಗಳು ರಿಕ್ಷಾದಲ್ಲಿ ಬಂದು ಡ್ರಮ್‌ನಲ್ಲಿದ್ದ ಶವವನ್ನು ಇಟ್ಟುಹೋದ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿತ್ತು. ಆದರೆ, ರಿಕ್ಷಾದ ನಂಬರ್‌ ಎಷ್ಟು? ಹಂತಕರು ಯಾರು ಎನ್ನುವ ಚಹರೆ ಎಲ್ಲೂ ದಾಖಲಾಗಿರಲಿಲ್ಲ. ಹೀಗಾಗಿ ಇಷ್ಟರಿಂದಲೇ ಹಂತಕರನ್ನು ಪತ್ತೆ ಹಚ್ಚುವುದು ಸಾಧ್ಯವಾಗಲಿಲ್ಲ.

ಆಗ ಪೊಲೀಸರ ಕಣ್ಣಿಗೆ ಬಿದ್ದದ್ದು ಶವವನ್ನು ತರಲಾಗಿದ್ದ ಡ್ರಮ್‌. ಡ್ರಮ್‌ನ್ನು ಗಮನಿಸಿದಾಗ ಅದರಲ್ಲಿ ಕಲಾಸಿಪಾಳ್ಯದ ಅಂಗಡಿಯೊಂದರ ವಿಳಾಸ ತಿಳಿಯಿತು. ಹೊಸ ಡ್ರಮ್‌ ಖರೀದಿಸಿದ್ದ ಹಂತಕರು ಅದರಲ್ಲಿದ್ದ ಅಂಗಡಿಯ ಸ್ಟಿಕ್ಕರನ್ನು ಗಮನಿಸಿರಲಿಲ್ಲ ಅನಿಸುತ್ತದೆ.

ಹೀಗೆ ಡ್ರಮ್‌ನಲ್ಲಿದ್ದ ವಿಳಾಸವನ್ನು ಗಮನಿಸಿದ ಪೊಲೀಸರು ಡ್ರಮ್‌ ಮಾರಾಟ ಮಾಡಿದ ಕಲಾಸಿಪಾಳ್ಯದ ಅಂಗಡಿಯನ್ನು ಪತ್ತೆ ಹಚ್ಚಿದರು. ಅಲ್ಲಿ ಹೋಗಿ ಅಂಗಡಿಯವರ ಜತೆ ಮಾತನಾಡಿದರು. ಜತೆಗೆ ಅಲ್ಲಿನ ಸಿಸಿ ಟಿವಿ ಮಾಹಿತಿಗಳನ್ನು ಕಲೆ ಹಾಕಿದರು. ಅದೇ ಮಾಹಿತಿಯನ್ನು ಆಧರಿಸಿ ಪರಿಸರದಲ್ಲಿ ಮಾಹಿತಿ ಸಂಗ್ರಹಿಸಿ ಹಂತಕರಿದ್ದ ಮನೆಯ ಬಾಗಿಲು ತಟ್ಟಿದರು. ಇದರೊಂದಿಗೆ ಇಬ್ಬರು ಹಂತಕರು ಬಲೆಗೆ ಬಿದ್ದಿದ್ದಾರೆ. ಮೂವರನ್ನು ಪತ್ತೆ ಹಚ್ಚಬೇಕಾಗಿದೆ. ಮಹಿಳೆ ಯಾರು ಎನ್ನುವುದು ಕೂಡಾ ತಿಳಿದುಬಂದಿದೆ. ಅದು ಇನ್ನಷ್ಟೇ ಪೊಲೀಸರಿಂದ ಬಯಲಾಗಬೇಕಾಗಿದೆ.

ಇದನ್ನೂ ಓದಿ : Dead Body Found: ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಡ್ರಮ್‌ನಲ್ಲಿ ಮಹಿಳೆ ಶವ ಪತ್ತೆ

Exit mobile version