ಬೆಂಗಳೂರು: ಮಂಗಳೂರು ಬಾಂಬ್ ಸ್ಫೋಟದ ರೂವಾರಿ ತೀರ್ಥಹಳ್ಳಿಯ ಸೊಪ್ಪಿನ ಗದ್ದೆಯ ಮೊಹಮ್ಮದ್ ಶಾರಿಕ್ ಕುಕ್ಕರ್ ಬಾಂಬ್‌ನ್ನು ಹಿಡಿದು ಫೋಟೊ ತೆಗೆಸಿಕೊಂಡಿದ್ದೇಕೆ ಎಂಬ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಹೊರಬೀಳುತ್ತಿವೆ.
ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ಉಗ್ರ ಚಟುವಟಿಕೆಗಳ ಮೇಲೆ ಆಸಕ್ತಿ ಹೊಂದಿದ್ದ ಆತ ಬಳಿಕ ನಿಜವಾದ ಅರ್ಥದಲ್ಲಿ ಅದಕ್ಕೆ ಧುಮುಕಿದ್ದ. ಮಂಗಳೂರಿನ ಗೋಡೆ ಬರಹ ಪ್ರಕರಣ, ಮಾಜ್ ಮುನೀರ್ ಮತ್ತು ಮೊಹ್ಸಿನ್‌ನನ್ನು ಸೇರಿಸಿಕೊಂಡು ನಡೆಸಿದ ಟ್ರಯಲ್ ಬ್ಲಾಸ್ಟ್‌ಗಳು, ಕೊಯಮತ್ತೂರಿಗೆ ಭೇಟಿ ನೀಡಿದ್ದು ಎಲ್ಲವೂ ಆತನ ಉಗ್ರ ಹಾದಿಯ ಅಧ್ಯಾಯಗಳೇ. ಅದರ ಜತೆಗೆ ಅವನದೇ ಊರಿನವನಾದ ಅಬ್ದುಲ್ ಮತೀನ್ ಖಾನ್ ಎಂಬ ಉಗ್ರನ ಜತೆಗಿನ ಸಂಪರ್ಕ ಆತನನ್ನು ಇನ್ನಷ್ಟು ಉಗ್ರ ಹಾದಿಯಲ್ಲಿ ಬೆಳೆಸಿತ್ತು.
ಈ ರೀತಿ ಧರ್ಮಾಂಧತೆಯನ್ನು ಬೆಳೆಸಿಕೊಂಡ ಶಾರಿಕ್‌ಗೆ ಸಿರಿಯಾ ಅಥವಾ ಇತರ ರಾಷ್ಟ್ರಕ್ಕೆ ತೆರಳಿ ಐಸಿಸ್ ಸೇರುವ ಬಯಕೆ ಇತ್ತು ಎನ್ನಲಾಗಿದೆ. ಸ್ವಂತದ್ದೊಂದು ಐಡೆಂಟಿಟಿ ಇಲ್ಲದಿದ್ದಲ್ಲಿ ಐಸಿಸ್ ನವರು ಪ್ರಾಮುಖ್ಯತೆ ಕೊಡುವುದಿಲ್ಲ. ಹೀಗಾಗಿ ಅವರೆಲ್ಲರಿಗೂ ನಿನ್ನ ಹೆಸರು ಗೊತ್ತಾಗುವ ರೀತಿಯಲ್ಲಿ ದೊಡ್ಡಮಟ್ಟದಲ್ಲಿ ಏನಾದ್ರೂ ಕೃತ್ಯ ಎಸಗುವಂತೆ ಸೂಚನೆ ನೀಡಲಾಗಿತ್ತು ಎಂದು ಹೇಳಲಾಗಿದೆ.
ಇದೇ ಕಾರಣಕ್ಕೆ ಆತ ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದ ಮತ್ತು ಬಾಂಬ್ ಸ್ಫೋಟ ಎಸಗುವ ಮುನ್ನ ಜಿಹಾದ್ ಸಂಬಂಧ ವಿಡಿಯೋ ಮಾಡಿ ಅದನ್ನು ತನ್ನ ಹ್ಯಾಂಡ್ಲರ್ ಗಳಿಗೆ ಕಳುಹಿಸಿದ್ದ ಎನ್ನಲಾಗಿದೆ. ಅದೇ ರೀತಿಯಲ್ಲಿ ಕೈಯಲ್ಲಿ ಕುಕ್ಕರ್ ಬಾಂಬ್ ಹಿಡಿದುಕೊಂಡು ತೆಗೆಸಿಕೊಂಡ ಫೋಟೊ ಸಹ ಹ್ಯಾಂಡ್ಲರ್ ಗೆ ಕಳುಹಿಸಿದ್ದ ಎನ್ನಲಾಗಿದೆ.
ನವೆಂಬರ್ ೧೯ರಂದು ನಡೆದ ಸ್ಫೋಟದ ವೇಳೆ ಆಸ್ಪತ್ರೆಗೆ ದಾಖಲಾಗಿದ್ದ ಶಾರಿಕ್‌ನ ಮೊಬೈಲ್ ಗ್ಯಾಲರಿ ಪರಿಶೀಲನೆ ವೇಳೆ ಈ ಫೋಟೊ ಕಂಡುಬಂದಿತ್ತು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕದ್ರಿ ದೇವಸ್ಥಾನ ಟಾರ್ಗೆಟ್: ಹೊಣೆ ಹೊತ್ತುಕೊಂಡ ಇಸ್ಲಾಮಿಕ್ ಉಗ್ರ ಸಂಘಟನೆ