ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ (Karnataka Budget 2023) ಮಂಡಿಸುವ ವೇಳೆ ಅನಾಮಧೇಯ ವ್ಯಕ್ತಿಯೊಬ್ಬ ಸುಮಾರು 15 ನಿಮಿಷಗಳ ಕಾಲ ಸದನದಲ್ಲಿ ಆರಾಮವಾಗಿ ಕುಳಿತು ಎದ್ದುಹೋದ ಘಟನೆಯೊಂದು ನಡೆದಿದ್ದು, ಭದ್ರತಾ ವೈಫಲ್ಯದ (Security Lapse) ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಈ ವ್ಯಕ್ತಿ ಶಾಸಕರು ಕುಳಿತುಕೊಳ್ಳುವ ಕುರ್ಚಿಯಲ್ಲೇ ಕುಳಿತಿದ್ದು, ಕೊನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈ ಕುಲುಕಿ ಹೋಗಿದ್ದಾನೆ!
ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾಗ ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ಜಿ. ನಾಯಕ (Devadurga MLA Karemma G Nayak) ಅವರಿಗೆ ಮೀಸಲಾಗಿರುವ ಆಸನದಲ್ಲಿ ಸುಮಾರು 15 ನಿಮಿಷಗಳ ಕಾಲ ಕುಳಿತಿದ್ದರು. ಕರೆಮ್ಮ ಅವರು ಬಂದ ಬಳಿಕ ಯಾವುದೇ ಆತಂಕವಿಲ್ಲದೆ ಎದ್ದು ಹೋಗಿದ್ದಾನೆ!
ಯಾರಿವನು ಎಂದು ಗುಸುಗುಸು ನಡೆದಿತ್ತು
ಗುರುಮಿಠಕಲ್ ಕ್ಷೇತ್ರದ ಶಾಸಕ ಶರಣ ಗೌಡ ಕಂದಕೂರು (Sharana Gowda Kandakooru) ಅವರು ಈ ಅಪರಿಚಿತ ವ್ಯಕ್ತಿಯನ್ನು ಗಮನಿಸಿದ್ದರು. ಅವರು ಸಂಶಯ ಬಂದು ಪಕ್ಕದಲ್ಲಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರ ಬಳಿ ಯಾರು ಈ ವ್ಯಕ್ತಿ ಎಂದು ಕೇಳಿದ್ದರು. ಅವರು ಗೊತ್ತಿಲ್ಲ ಎಂದು ಹೇಳಿದ್ದರು.
ಆಗ ಶರಣಗೌಡ ಕಂದಕೂರು ಅವರು ಅದೇ ವ್ಯಕ್ತಿಯನ್ನು ಪ್ರಶ್ನೆ ಮಾಡಿದ್ದಾರೆ. ಆಗ ಆ ವ್ಯಕ್ತಿ ನಾನು ಮೊಳಕಾಲ್ಮೂರು ಶಾಸಕ ಎಂದು ಹೇಳಿದ್ದರಂತೆ! ಹೀಗೆ ಸುಮಾರು 15 ನಿಮಿಷ ಒಳಗೇ ಇದ್ದ ಈ ವ್ಯಕ್ತಿ ಕರೆಮ್ಮ ಅವರು ಬಂದಾಗ ಎದ್ದು ಹೋಗಿದ್ದಾನೆ!
ಇಷ್ಟೇ ಅಲ್ಲ, ಈ ವ್ಯಕ್ತಿ ಶಾಸಕರ ಸೀಟಿನಲ್ಲಿ ಕುಳಿದುಕೊಂಡಿದ್ದಲ್ಲದೆ, ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿ ತೆರಳಿ ಕೈಕುಲುಕಿದ್ದರು. ಶಿವಕುಮಾರ್ ಅವರು ಸುಮ್ಮನೆ ಕೈಕುಲುಕಿ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದರು.
ಇದಾದ ಬಳಿಕ ಆ ವ್ಯಕ್ತಿ ಹೊರಗಡೆ ಹೋಗಿದ್ದಾರೆ. ಇದರ ನಡುವೆ, ಶಾಸಕ ಕಂದಕೂರು ಅವರು ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಬಳಿಕ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ನಡುವೆ ಆ ವ್ಯಕ್ತಿಯನ್ನು ಗುರುತಿಸಿ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿಯೂ ಇದೆ. ಆದರೆ, ಅದು ಸ್ಪಷ್ಟವಿಲ್ಲ.
ಭಾರಿ ಪ್ರಮಾಣದ ಭದ್ರತಾ ಲೋಪ
ನಿಜವೆಂದರೆ, ಸದನದ ಒಳಗೆ ಶಾಸಕರಲ್ಲದ ಯಾರಿಗೂ ಪ್ರವೇಶಕ್ಕೆ ಅವಕಾಶವಿಲ್ಲ. ಭಾರಿ ಭದ್ರತಾ ತಪಾಸಣೆಯ ಬಳಿಕವೇ ಶಾಸಕರನ್ನೂ ಒಳಗೆ ಬಿಡಲಾಗುತ್ತದೆ. ಹೀಗಿರುವಾಗ ಶಾಸಕನಲ್ಲದ ಒಬ್ಬ ವ್ಯಕ್ತಿ ಹೇಗೆ ಪ್ರವೇಶ ಪಡೆದ. ಅದೂ ಅಲ್ಲದೆ ಅಷ್ಟೂ ರಾಜಾರೋಷವಾಗಿ ಶಾಸಕರ ಕುರ್ಚಿಯಲ್ಲಿ ಕುಳಿತ ಎಂಬುದು ಪ್ರಶ್ನೆಯಾಗಿದೆ. ಒಬ್ಬ ಅನಾಮಿಕ ವ್ಯಕ್ತಿ ಹೀಗೆ ಬಂದು ಶಾಸಕರ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಕೂಡಾ ಅಪಮಾನ ಎಂಬ ಮಾತು ಶಾಸಕರ ವಲಯದಲ್ಲಿ ಕೇಳಿಬಂದಿದೆ.