ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನ ಸೌಧಕ್ಕೆ ವ್ಯಕ್ತಿಯೊಬ್ಬ ಚಾಕು ಹಿಡಿದುಕೊಂಡು ಬಂದ ಆತಂಕಕಾರಿ ಘಟನೆ ನಡೆದಿದೆ. ವಿಧಾನ ಸೌಧ ಪೊಲೀಸರು ಬಾಬು ಎಂಬ ಹೆಸರಿನ ಈ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮಾರ್ಚ್ 26ರಂದು ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂದಿದ್ದ ವೇಳೆ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಮಾರ್ಚ್ 26ರಂದು ಬಾಬು ವಿಧಾನ ಸೌಧದ ಒಳಗೆ ಪ್ರವೇಶಿಸಲು ಮುಂದಾದಾಗ ಮೆಟಲ್ ಡಿಟೆಕ್ಟರ್ ತಪಾಸಣೆ ಮೇಲೆ ಆತ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಆತನ ಕೈಯಲ್ಲಿ ಚೂಪಾದ ಬಟನ್ ಚಾಕು ಪತ್ತೆಯಾಗಿದೆ. ಭದ್ರತಾ ಸಿಬ್ಬಂದಿಗಳು ಆರೋಪಿಯನ್ನು ವಿಧಾನಸೌಧ ಪೊಲೀಸರ ವಶಕ್ಕೆ ನೀಡಿದರು. ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಹಿನ್ನಲೆ, ಯಾರ ಭೇಟಿಗೆ ಬಂದಿದ್ದ ಎಂಬ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಿತ್ ಶಾ ಕಾರ್ಯಕ್ರಮದ ವೇಳೆ ಘಟನೆ
ಮಾರ್ಚ್ 26ರಂದು ವಿಧಾನ ಸೌಧದ ಮುಂಭಾಗದಲ್ಲಿ ಬಸವಣ್ಣ ಮತ್ತು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮ ಆಯೋಜನೆಯಾಗಿದ್ದು ಅದಕ್ಕೆ ಅಮಿತ್ ಶಾ ಆಗಮಿಸಿದ್ದರು.
ಅಮಿತ್ ಶಾ, ಸಿಎಂ, ಬಿಎಸ್ ವೈ, ಸೇರಿದಂತೆ ಹಲವು ನಾಯಕರು, ರಾಜ್ಯದ ಎಲ್ಲಾ ಸ್ವಾಮಿಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ ಮೆಟಲ್ ಡಿಟೆಕ್ಟರ್‌ನಲ್ಲಿ ತಪಾಸಣೆ ಮಾಡುವಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಾಬುವಿನ ಕೈಯಲ್ಲಿ ಚಾಕು ಇರುವುದು ಪತ್ತೆಯಾಗಿತ್ತು. ಒಂದು ಲಕ್ಷ ಹಣದ ಜೊತೆಗೆ ಒಂದು ಬಟನ್ ಚಾಕು ಇಟ್ಟುಕೊಂಡಿದ್ದ ಬಾಬುವನ್ನು ಕೂಡಲೇ ಬಂಧಿಸಲಾಗಿತ್ತು. ಈತ ಕಾರ್ಯಕ್ರಮಕ್ಕೆ ಭಾಗಿಯಾಗಲು ಬಂದಿದ್ದ ಜನರಿಗೆ ನೀಡಲು ಹಣ ತಂದಿರುವ ಶಂಕೆ ಇದೆಯಾದರೂ ಚಾಕು ಯಾಕೆ ತಂದಿದ್ದ ಎನ್ನುವುದು ನಿಗೂಢವಾಗಿದೆ.
ಇದನ್ನೂ ಓದಿ : Illegal cash found | ವಿಧಾನಸೌಧದಲ್ಲಿ 10 ಲಕ್ಷ ಪತ್ತೆ ಕೇಸ್, ಪೊಲೀಸರ ವಿರುದ್ಧ ಅಕ್ರಮ ಆರೋಪ, ವಕೀಲರ ಟ್ವೀಟ್