ರಾಮನಗರ: ಕಂಚುಗಲ್ ಬಂಡೆಮಠ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ (Seer Suicide) ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾಗಿರುವ ಪ್ರಕರಣದ ನಾಲ್ಕು ಜನ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯವು ಆದೇಶಿಸಿದೆ.
ನೀಲಾಂಬಿಕೆ, ರೇಣುಕಾರಾಧ್ಯ, ವಕೀಲ ಮಹದೇವಯ್ಯ ಬಿ.ಸಿ ಸುರೇಶ್ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಗುಲ್ಜಾರ್ ಲಾಲ್ ಡಿ ಮಹಾವರ್ಕರ್ ಅವರು, ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.
ಏನಿದು ಪ್ರಕರಣ?
ಅಕ್ಟೋಬರ್ ೨೪ರಂದು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಬಸವಲಿಂಗ ಶ್ರೀಗಳು ಮೂರು ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದರು. ಇದರಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಒಬ್ಬಳು ಯುವತಿ ಕಾರಣ ಎಂಬುದು ಗೊತ್ತಾಗಿದೆ. ಪ್ರಭಾವಿ ನಾಯಕನಾಗಿರುವ ವೀರಶೈವ ಲಿಂಗಾಯತ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್ ಸಚ್ಚಿದಾನಂದ ಮೂರ್ತಿ ಹೆಸರನ್ನು ಬಸವಲಿಂಗ ಶ್ರೀಗಳು ಉಲ್ಲೇಖಿಸಿದ್ದರು.
ʻʻ500, 1000 ಸಹಾಯ ಕೇಳುವ ನೆಪದಲ್ಲಿ ಪರಿಚಯವಾದ ಮಹಿಳೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತ ನನ್ನ ವಿಡಿಯೊ ಮಾಡಿಕೊಂಡಿದ್ದಾಳೆ. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ನನಗೆ ಬೆದರಿಸಿ ಈ ಬಿ.ಎಸ್ ಸಚ್ಚಿದಾನಂದ ಮೂರ್ತಿ ಮೂಲಕ ಹರಿಬಿಡುವ ಪ್ರಯತ್ನ ನಡೆಸಿದರು. ಸಚ್ಚಿದಾನಂದ ಮೂರ್ತಿ ಕೂಡ ಪೂರ್ವಪರ ಯೋಚಿಸದೆ ಮಠದ ಭಕ್ತರಿಗೆ ಈ ವಿಡಿಯೊ ತೋರಿಸಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರುʼʼ ಎಂದು ಶ್ರೀಗಳು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದರು. ಇದು ತನಿಖೆಗೆ ಮತ್ತಷ್ಟು ಸಾಕ್ಷಿ ದೊರೆಯಲು ಕಾರಣವಾಗಿದ್ದು, ಪ್ರಕರಣ ಸಂಬಂಧ ಒಬ್ಬೊಬ್ಬರೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ | ಸಿಎಂ ಬೊಮ್ಮಾಯಿ ಭೇಟಿಯಾಗುತ್ತಿರುವ ಆರ್‌ಎಸ್‌ಎಸ್ ಮುಖಂಡರು, ಶಾಸಕರು, ಸಚಿವರು