ಬೆಂಗಳೂರು: ಕಂಚುಗಲ್ ಬಂಡೇಮಠ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ (Seer Suicide) ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾಗಿರುವ ಮೂವರು ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು, ವಿಡಿಯೊ ಮಾಡಲಾದ ಮೂಲ ಮೊಬೈಲ್ ಫೋನ್ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಸೋಮವಾರ (ಅ. ೩೧) ವಿಚಾರಣೆ ನಡೆಸಿದ್ದ ಮಾಗಡಿ ತಾಲೂಕು ನ್ಯಾಯಾಲಯವು ಬಂಧಿತ ಆರೋಪಿಗಳಾದ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ದೊಡ್ಡಬಳ್ಳಾಪುರ ಮೂಲದ ನೀಲಾಂಬಿಕೆ ಅಲಿಯಾಸ್ ಚಂದು (21), ತುಮಕೂರು ಮೂಲದ ನಿವೃತ್ತ ಶಿಕ್ಷಕ ಮಹದೇವಯ್ಯರನ್ನು ನವೆಂಬರ್ ೪ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತ್ತು.
ಈಗ ನೀಲಾಂಬಿಕೆ ಸೇರಿ ಉಳಿದ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಸ್ವಾಮೀಜಿ ಜತೆಗೆ ಮಾಡಿಕೊಳ್ಳಲಾದ ವಿಡಿಯೊವನ್ನು ರೆಕಾರ್ಡ್ ಮಾಡಿಕೊಂಡಿರುವ ಫೋನ್ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಆ ಫೋನ್ ದೊರಕಿದರೆ ಪ್ರಕರಣವು ಮತ್ತಷ್ಟು ಗಟ್ಟಿಗೊಳ್ಳಲಿರುವ ಹಿನ್ನೆಲೆಯಲ್ಲಿ ಅದಕ್ಕಾಗಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಇದನ್ನೂ ಓದಿ | Seer suicide | ಬಂಡೆ ಸ್ವಾಮೀಜಿ ಆತ್ಮಹತ್ಯೆಯ ಹಿಂದೆ ಕೇಳಿಬರುತ್ತಿದೆ ಇನ್ನಷ್ಟು ಪ್ರಭಾವಿಗಳ ಹೆಸರು
ಬಾಯಿಬಿಡದ ಆರೋಪಿಗಳು
ಪೊಲೀಸರು ಎಷ್ಟೇ ವಿಚಾರಣೆ ನಡೆಸಿದರೂ ವಿಡಿಯೊ ಮಾಡಿದ ಮೂಲ ಫೋನ್ ಬಗ್ಗೆ ಆರೋಪಿಗಳು ಬಾಯಿಬಿಡುತ್ತಿಲ್ಲ. ಈ ವಿಡಿಯೊ ಕಾಲ್ ಹಾಲಿ ಆರೋಪಿಗಳ ಬಳಿ ಇರುವ ಮೊಬೈಲ್‌ನಲ್ಲಿ ನಡೆದಿಲ್ಲ ಎನ್ನಲಾಗಿದ್ದು, ಇದಕ್ಕೆ ಯಾವ ಫೋನ್ ಅನ್ನು ಬಳಸಲಾಗಿದೆ ಎಂಬ ಬಗ್ಗೆ ಶೋಧ ಹಾಗೂ ವಿಚಾರಣೆಯನ್ನು ಕೈಗೊಳ್ಳಲಾಗಿದೆ.
ಸಿಡಿಆರ್ ಪರಿಶೀಲನೆ
ವಿಡಿಯೊ ರೆಕಾರ್ಡ್ ಮಾಡಿದ ಫೋನ್ ಬಗ್ಗೆ ಆರೋಪಿಗಳು ಮಾಹಿತಿ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಅವರೆಲ್ಲರ 6 ತಿಂಗಳ ಕಾಲ್ ಡಿಟೇಲ್ಸ್ (CDR) ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಆದರೆ, ಇದುವರಿಗೆ ನಡೆದ ತನಿಖೆಯಲ್ಲಿ ಏಪ್ರಿಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಲಾಗಿದೆ ಎಂಬ ವಿಷಯ ಗೊತ್ತಾಗಿದೆ. ನಂತರ ಯಾರ ಸಂಪರ್ಕ ಮಾಡಲಾಗಿದೆ? ಯಾರಿಗೆ ಮೊಬೈಲ್ ಹಸ್ತಾಂತರವಾಗಿದೆ? ಮೊಬೈಲ್ ಅನ್ನು ಎಲ್ಲಿ ಬಚ್ಚಿಡಲಾಗಿದೆ? ಅಥವಾ ಆ ಮೊಬೈಲ್ ಅನ್ನು ನಾಶ ಮಾಡಲಾಗಿದೆಯೇ? ಎಂಬಿತ್ಯಾದಿ ಅಂಶಗಳ ಬಗ್ಗೆ ತನಿಖೆ ಮುಂದುವರಿದಿದೆ.
ಈ ಸಂಬಂಧ ಮೂವರು ಆರೋಪಿಗಳ ಒಟ್ಟು 5 ನಂಬರ್‌ಗಳ ಕಾಲ್ ಲಿಸ್ಟ್ ಪರಿಶೀಲನೆ ನಡೆಸಲಾಗುತ್ತಿದೆ. ಈ ವೇಳೆ ಅನುಮಾನ ಬಂದ ಕೆಲವು ವ್ಯಕ್ತಿಗಳ ವಿಚಾರಣೆಯನ್ನೂ ಮಾಡಲಾಗಿದೆ. ಮತ್ತೂ ಕೆಲವರ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ. ಇದುವರೆಗೆ ಒಟ್ಟು ೨೦ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಹೀಗಾಗಿ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ (ತಾಂತ್ರಿಕ ಸಾಕ್ಷ್ಯ) ಮೇಲೆ ಕೇಂದ್ರೀಕರಿಸಿದ್ದಾರೆ.
ಎಫ್‌ಎಸ್‌ಎಲ್‌ಗೆ ಫೋನ್?
ಇನ್ನು ಈ ಮೂವರು ಆರೋಪಿಗಳು ಬಹಳ ವ್ಯವಸ್ಥಿತವಾಗಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಆರು ತಿಂಗಳ ಕಾಲ ನಡೆಸಿರುವ ಎಲ್ಲ ಸಂದೇಶ (ಚಾಟ್) ವನ್ನು ಡಿಲೀಟ್ ಮಾಡಿಕೊಂಡಿದ್ದಾರೆ. ತನಿಖೆ ವೇಳೆ ಈ ವಿಷಯ ಬಹಿರಂಗವಾಗಿದ್ದು, ಮೂವರ ಮೊಬೈಲ್ ಫೋನ್‌ಗಳನ್ನು ಎಫ್ಎಸ್ಎಲ್‌ಗೆ ರವಾನೆ ಮಾಡಲು ಸಿದ್ಧತೆ ನಡೆದಿದೆ. ಕೋರ್ಟ್ ಅನುಮತಿ ಬಳಿಕ ಬೆಂಗಳೂರು ಎಫ್ಎಸ್ಎಲ್‌ಗೆ ರವಾನೆ ಸಾಧ್ಯತೆ ಇದೆ. ಮೂವರು ಆರೋಪಿಗಳ 6 ತಿಂಗಳ ಚಾಟ್ ಹಿಸ್ಟರಿ ರಿಟ್ರೀವ್ ಮಾಡಲು ಅನುಮತಿ ಕೋರಿ ಕೋರ್ಟ್‌ಗೆ ಪೊಲೀಸರು ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Seer Suicide | ಬಂಡೆ ಸ್ವಾಮೀಜಿ ಆತ್ಮಹತ್ಯೆ ಕೇಸ್; ನ.4ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಮೂವರು ಆರೋಪಿಗಳು