ಕಾರವಾರ: ಶಾಲೆಗೆ ಹೋಗಲು ಬೇಸತ್ತು 11 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Self Harming) ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಹನುಮಾನ್ ಗಲ್ಲಿಯಲ್ಲಿ ನಡೆದಿದೆ.
ಬೆಳಗಾವಿಯ ಲೋಂಡಾದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ವರ್ಷ 5ನೇ ತರಗತಿಗೆ ವಿದ್ಯಾರ್ಥಿ ಹೋಗಬೇಕಿದ್ದ. ಇನ್ನೆರಡು ದಿನಗಳಲ್ಲಿ ಶಾಲೆ ಆರಂಭವಾಗಲಿತ್ತು. ಆದರೆ, ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದಿದ್ದ ವಿದ್ಯಾರ್ಥಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಯಿ ಗೋವಾದಲ್ಲಿ ಕೆಲಸಕ್ಕೆ ಹೋಗಿದ್ದು, ತಂದೆ ಮಲಗಿದ್ದ ವೇಳೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Missing Case: ಚಿಕ್ಕಬಳ್ಳಾಪುರದಲ್ಲಿ ಯುವತಿಯರ ನಾಪತ್ತೆ ಕೇಸ್‌ಗಳು ಹೆಚ್ಚಳ; ಒಂದೇ ವಾರದಲ್ಲಿ ಇಬ್ಬರು ಮಿಸ್ಸಿಂಗ್!
ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರದ ಮೇಘಾಂಜಲಿ ಕಲ್ಯಾಣ ಮಂಟಪ ಸಮೀಪದ ಕನಕದಾಸ ವೃತ್ತದಲ್ಲಿ ನಡೆದಿದೆ. ಉಮೇಶ್( 51) ಮೃತ ದುರ್ದೈವಿ.
ತಂದೆ-ಮಗ ಬೈಕ್‌ನಲ್ಲಿ ಅರಳುಮಲ್ಲಿಗೆ ಕಡೆಯಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದರು. ಈ ವೇಳೆ ಕ್ಯಾಂಟರ್ ಡಿಕ್ಕಿಯಾಗಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದ ಹಿನ್ನೆಲೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಕೊನೆಯುಸಿರೆದಿದ್ದಾರೆ. ಅದೃಷ್ಟವಶಾತ್ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ
ನಾಪತ್ತೆಯಾಗಿದ್ದ ಯುವ ಶವವಾಗಿ ಪತ್ತೆ
ತುಮಕೂರು: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಬಳಿಯಿರುವ ಲಕ್ಷ್ಮೀಪುರದಲ್ಲಿ ನಡೆದಿದೆ. ಪ್ರದೀಪ್ (30) ಮೃತ ದುರ್ದೈವಿ.
ಲಕ್ಷ್ಮೀಪುರ ಬಳಿಯಿರುವ ಉಲ್ಲಾಳಬೆಟ್ಟದ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಹುಲಿಯೂರುದುರ್ಗ ಬಳಿಯ ಮೂದನಹಳ್ಳಿ ಗ್ರಾಮದ ಪ್ರದೀಪ್ ಟ್ರ್ಯಾಕ್ಟರ್ ಚಾಲಕನಾಗಿದ್ದ. ಕುಡಿತದ ದಾಸನಾಗಿದ್ದರಿಂದ ಆಗಾಗ ಪತ್ನಿ ಹಾಗೂ ತಾಯಿ ಜೊತೆ ಗಲಾಟೆ ಮಾಡುತ್ತಿದ್ದ. ಈತನ ಕಿರುಕುಳಕ್ಕೆ ಬೇಸತ್ತು ಒಂದು ತಿಂಗಳ ಹಿಂದೆ ಪತ್ನಿ ಹಾಗೂ ತಾಯಿ ಮನೆ ಬಿಟ್ಟು ತವರು ಮನೆಗೆ ಹೋಗಿದ್ದರು. ಹೀಗಾಗಿ ಪ್ರದೀಪ್ ಮನೆಯಲ್ಲಿ ಒಬ್ಬನೇ ಇದ್ದ.
ಕಳೆದ ಮೂರು ದಿನಗಳ ಹಿಂದೆ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದ ಪ್ರದೀಪ್, ಬುಧವಾರ ಸಂಜೆ ಉಲ್ಲಾಳಬೆಟ್ಟದ ಅರಣ್ಯ ಪ್ರದೇಶದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಮೃತದೇಹ ನೋಡಿ ಹುಲಿಯೂರುದುರ್ಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Bitcoin Scam: ಬಿಟ್ ಕಾಯಿನ್ ಪ್ರಕರಣದಲ್ಲಿ ಮತ್ತೊಬ್ಬ ಇನ್‌ಸ್ಪೆಕ್ಟರ್‌ನನ್ನು ಬಂಧಿಸಿದ ಎಸ್ಐಟಿ
ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಪತ್ತೆಯಾದ ಜಾಗದಲ್ಲಿ ಮದ್ಯದ ಬಾಟಲ್ ಹಾಗೂ ಚಾಕು ಪತ್ತೆಯಾಗಿದೆ. ಪ್ರದೀಪ್ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.