ಕಲಬುರಗಿ/ಮೈಸೂರು: ವಾಡಿ ಎಸಿಸಿ ಸಿಮೆಂಟ್ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದಲ್ಲಿರುವ ಅದಾನಿ ಗ್ರೂಪ್ ಮಾಲೀಕತ್ವದ ಎಸಿಸಿ ಕಾರ್ಖಾನೆಯ ಆಡಳಿತ ಮಂಡಳಿಯವರ ಕಿರುಕುಳಕ್ಕೆ ಬೇಸತ್ತು ಡೆಪ್ಯೂಟಿ ಮ್ಯಾನೇಜರ್ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.
ರಮೇಶ ಪವಾರ (47) ಆತ್ಮಹತ್ಯೆ ಮಾಡಿಕೊಂಡ ಎಸಿಸಿ ಕಾರ್ಖಾನೆ ಡೆಪ್ಯೂಟಿ ಮ್ಯಾನೇಜರ್ ಆಗಿದ್ದಾರೆ. ಎಸಿಸಿ ಕಾಲೋನಿಯ ಮನೆಯ ಬಾಲ್ಕನಿಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಕಾರ್ಖಾನೆ ಹಿರಿಯ ಅಧಿಕಾರಿಗಳ ಮೇಲೆ ಆರೋಪ ಮಾಡಿರುವ ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ಈ ರಮೇಶ ಪವಾರ್ ಚಿತ್ತಾಪೂರದ ಮಾಜಿ ಶಾಸಕ ದಿ.ವಾಲ್ಮಿಕಿ ನಾಯಕ್ ಅವರ ಅಳಿಯರಾಗಿದ್ದಾರೆ.
ವಾಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: BMTC Accident : ಕಿಲ್ಲರ್ ಬಿಎಂಟಿಸಿ ಬಸ್ಗೆ 120 ಮಂದಿ ಬಲಿ!
ಮುಖಕ್ಕೆ ಪ್ಲಾಸ್ಟಿಕ್ ಕವರ್ ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ಮೈಸೂರು: ಮೈಸೂರಿನ ರೀಜನಲ್ ಇನ್ಸ್ಟಿಟ್ಯೂಟ್ ಕಾಲೇಜಿನ ಹಾಸ್ಟೆಲ್ನಲ್ಲಿ ವಿದ್ಯಾರ್ಥಿ ಮುಖಕ್ಕೆ ಪ್ಲಾಸ್ಟಿಕ್ ಕವರ್ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಕ್ಷಜ್ (18) ಮೃತ ದುರ್ದೈವಿ.
ಹೈದರಾಬಾದ್ ಮೂಲದ ಅಕ್ಷಜ್ ರೀಜನಲ್ ಇನ್ಸ್ಟಿಟ್ಯೂಟ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ. ಇತ್ತೀಚೆಗೆ ಮಾನಸಿಕ ಖಿನ್ನೆತೆಗೆ ಒಳಗಾಗಿದ್ದ ಎನ್ನಲಾಗಿದೆ. ಹಾಸ್ಟೆಲ್ನಲ್ಲಿ ಯಾರು ಇಲ್ಲದ ವೇಳೆ ಪ್ಲಾಸ್ಟಿಕ್ ಕವರ್ನಿಂದ ಮುಖವನ್ನು ಪೂರ್ತಿ ಮುಚ್ಚಿಕೊಂಡು ಉಸಿರುಗಟ್ಟಿಸಿಕೊಂಡು ಮೃತಪಟ್ಟಿದ್ದಾನೆ.
ಸಹಪಾಠಿಗಳು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: lawyer Murder: ಕಲಬುರಗಿಯಲ್ಲಿ ವಕೀಲನನ್ನು ಅಟ್ಟಾಡಿಸಿ ಕೊಂದರು! ಹತ್ಯೆಗೆ ಇದುವೇ ಕಾರಣ!
ಪ್ರೀತಿಸಿ ಕೈಬಿಟ್ಟಳು; ನೊಂದು ಬೆಂಕಿ ಹಚ್ಚಿಕೊಂಡ ಪ್ರೇಮಿ!
ಬೆಂಗಳೂರು: ಪ್ರೀತಿಸಿದ ಹುಡುಗಿ ಏಕಾಏಕಿ ಪ್ರೀತಿಯನ್ನು ನಿರಾಕರಿಸಿ (Love failure) ಬಿಟ್ಟು ಹೋಗಿದ್ದಕ್ಕೆ ಮನನೊಂದ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಕೆಂಗೇರಿಯ ಕೊಡಿಗೆ ಪಾಳ್ಯದಲ್ಲಿ ಈ ಘಟನೆ ನಡೆದಿದೆ.
ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ರಾಕೇಶ್ ಮೃತ ದುರ್ದೈವಿ. ರಾಕೇಶ್ ಐದಾರು ವರ್ಷದಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಇಬ್ಬರು ಪಾರ್ಕ್, ಸಿನಿಮಾ ಎಂದು ಊರು ಊರು ತಿರುಗಿದ್ದರು. ಆದರೆ ಇತ್ತೀಚೆಗೆ ರಾಕೇಶ್ನನ್ನು ಯುವತಿ ಅವಾಯ್ಡ್ ಮಾಡಲು ಶುರು ಮಾಡಿದ್ದಳು.
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವಳು ಏಕಾಏಕಿ ದೂರಾಗಿದ್ದಳು. ಮಸೇಜ್, ಫೋನ್ ಕಾಲ್ಗೂ ರೆಸ್ಪಾನ್ಸ್ ಮಾಡುತ್ತಿರಲಿಲ್ಲ. ಈ ನಡುವೆ ಬೇರೆ ಯುವಕನ ಜತೆ ಮದುವೆಗೆ ಸಿದ್ಧತೆಯನ್ನು ನಡೆಸಿದ್ದಳು. ಈ ವಿಷಯ ತಿಳಿದು ನಿನ್ನೆ ಬುಧವಾರ ರಾಕೇಶ್ ನೇರ ಯುವತಿ ಮನೆಯ ಬಳಿ ಹೋಗಿ ಪ್ರಶ್ನೆ ಮಾಡಿದ್ದ. ಈ ವೇಳೆ ರಾಕೇಶ್ ಹಾಗೂ ಯುವತಿ ನಡುವೆ ಗಲಾಟೆ ಆಗಿತ್ತು.
ಪ್ರೀತಿಸಿದವಳು ಮೋಸ ಮಾಡಿಬಿಟ್ಟಳೆಂದು ಮನನೊಂದಿದ್ದ ರಾಕೇಶ್, ಮನೆಗೆ ಬಂದವನೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಕೂಡಲೇ ಗಾಯಾಳು ರಾಕೇಶ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಬೆಂಕಿ ತೀವ್ರತೆಗೆ ದೇಹದ ಬಹುತೇಕ ಭಾಗ ಸುಟ್ಟು ಕರಕಲಾಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ಬುಧವಾರ ರಾತ್ರಿಯೇ ಮೃತಪಟ್ಟಿದ್ದಾನೆ. ರಾಕೇಶ್ ಕುಟುಂಬಸ್ಥರು ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ