ಶಿವಮೊಗ್ಗ: ಇಲ್ಲಿನ ಭದ್ರಾವತಿ ಜನ್ನಾಪುರದಲ್ಲಿ ಸಾಲಭಾದೆ ತಾಳಲಾರದೆ ದಂಪತಿ ನೇಣಿಗೆ (Self Harming) ಶರಣಾಗಿದ್ದಾರೆ. ಮಧು(27), ಮೋನಿಕಾ(21) ಮೃತ ದಂಪತಿ ಆಗಿದ್ದಾರೆ.
ಗಾರೆ ಕೆಲಸ ಮಾಡಿಕೊಂಡಿದ್ದ ಮಧು, ಮೈತುಂಬಾ ಸಾಲ ಮಾಡಿಕೊಂಡಿದ್ದರು. ಇದನ್ನೂ ತೀರಿಸಲು ಆಗದೆ ಮತ್ತೊಂದು ಕಡೆ ಸಾಲಗಾರರ ಕಾಟಕ್ಕೆ ಬೇಸತ್ತಿದ್ದರು. ಸರಿಯಾದ ದುಡಿಮೆಯು ಇಲ್ಲದೆ ಹೊಟ್ಟೆ ಬಟ್ಟೆಗೂ ಸಂಕಷ್ಟ ಎದುರಾಗಿತ್ತು ಎನ್ನಲಾಗಿದೆ. ಈ ಕಾರಣದಿಂದ ಮನನೊಂದಿದ್ದ ಮಧು, ಮೋನಿಕಾ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ತುಂಬ ಸಮಯ ಮನೆಯಿಂದ ಹೊರಗೆ ಬರದೆ ಇದ್ದಾಗ ಅಕ್ಕ ಪಕ್ಕದ ಮನೆಯವರು ಅನುಮಾನಗೊಂಡು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಭದ್ರಾವತಿ ಗ್ರಾಮೀಣ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಠಾಣೆಯಲ್ಲಿ ನೇಣು ಬಿಗಿದುಕೊಂಡ ಕಾನ್ಸ್‌ಟೇಬಲ್!
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ (Police Constable) ಆತ್ಮಹತ್ಯೆ (self harming) ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದ ಮಲ್ಲಿಕಾರ್ಜುನ್ ರುದ್ರಾಪುರ ಎಂಬುವವರು ಮೃತರು.
ಕಾನ್ಸ್‌ಟೇಬಲ್ ಮಲ್ಲಿಕಾರ್ಜುನ್ ಬೆಂಡಿಗೇರಿ ಪೊಲೀಸ್ ಠಾಣೆಯ ಹಿಂಬದಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದಷ್ಟೇ ಬೆಂಡಿಗೇರಿ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಲ್ಲಿಕಾರ್ಜುನ್ ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: Kidnap Case : ಪೋಷಕರಿಂದಲೇ ನವವಿವಾಹಿತೆ ಅಪಹರಣ! ಮತ್ತೆ ಮನೆ ಸೇರುತ್ತಾಳಾ ಮಡದಿ?
ಸಾಗರದಲ್ಲಿ ವಿಷ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಸಾಗರ: ವಿದ್ಯಾರ್ಥಿನಿಯೊಬ್ಬಳು ವಿಷ (Poison) ಸೇವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಸಾಗರದಲ್ಲಿ ಜರುಗಿದೆ. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಓದುತ್ತಿದ್ದ ಭವ್ಯಾ (19) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೊರಬ ತಾಲೂಕಿನ ಆನವಟ್ಟಿ ಸಮೀಪದ ಹುರಳಿಕೊಪ್ಪ ಗ್ರಾಮದ ಪ್ರದೀಪ್ ಎಂಬಾತನ ವಿರುದ್ಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪ್ರದೀಪನಿಗೆ ಭವ್ಯಾಳ ಪರಿಚಯವಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಪದೇ ಪದೇ ಫೋನ್ ಮಾಡಿ ಪ್ರೀತಿಸುವಂತೆ ಪ್ರದೀಪ್ ಪೀಡಿಸುತ್ತಿದ್ದ ಎಂದು ಭವ್ಯಾ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಳು ಎನ್ನಲಾಗಿದೆ. ಪ್ರದೀಪನ ಹಿಂಸೆ ತಾಳಲಾರದೆ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಹೋದರ ಕೃಷ್ಣಮೂರ್ತಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ