Site icon Vistara News

Self Harming: ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ಪತಿ ಆತ್ಮಹತ್ಯೆ!

Self Harming Husband commits suicide for taking his wife home

ಗದಗ: ಭಾವಂದಿರು ಬಂದು ಥಳಿಸಿ ತನ್ನ ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋದರು ಎಂಬ ಕಾರಣಕ್ಕೆ ಪತಿ ಮಹಾಶಯನೊಬ್ಬ ನೊಂದು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಗದಗ ನಗರದ ಬಸವೇಶ್ವರ ನಗರದಲ್ಲಿ ನಡೆದಿದೆ.

ಈಶಪ್ಪ ಕಟ್ಟಿಮನಿ (40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನನ್ನ ಸಾವಿಗೆ ಭಾವಂದಿರೇ (ಪತ್ನಿಯ ಸಹೋದರರು) ಕಾರಣ ಎಂದು‌ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗದಗನ ಬಸವೇಶ್ವರ ನಗರದಲ್ಲಿ‌ನ ಸರ್ಕಾರಿ ಶಾಲೆ ನಂ. 6 ರಲ್ಲಿ ಶಿಕ್ಷಕನಾಗಿದ್ದ ಈಶಪ್ಪ ಕಳೆದ ರಾತ್ರಿ ಹೆಂಡತಿ ಜತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆಗೆ ಆಕೆಯ ಸಹೋದರರಾದ ಅನಿಲ್‌ ಪವಾರ ಮತ್ತು ಮಂಜುನಾಥ ಪವಾರ ಎಂಬುವವರು ಮನಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಸಹೋದರಿಯೊಂದಿಗೆ ಭಾವ ಜಗಳ ಮಾಡುತ್ತಿರುವುದನ್ನು ನೋಡಿಕೊಂಡು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದ ಸಿಟ್ಟಿಗೆದ್ದ ಅವರು ನಮ್ಮ ತಂಗಿ ಜತೆಗೆ ಯಾಕೆ ಜಗಳ ಮಾಡುತ್ತೀಯಾ ಎಂದು ಈಶಪ್ಪನಿಗೆ ಎರಡು ಬಾರಿಸಿದ್ದಾರೆ. ಅಲ್ಲದೆ, ಈ ವೇಳೆ ಸಾಕಷ್ಟು ಗಲಾಟೆಗಳು ಸಹ ನಡೆದಿವೆ ಎನ್ನಲಾಗಿದೆ.

ಕೊನೆಗೆ ಮಾತಿಗೆ ಮಾತು ಬೆಳೆದಿದ್ದರಿಂದ ಅನಿಲ್‌ ಮತ್ತು ಮಂಜುನಾಥ ಅವರು ಇನ್ನು ತಮ್ಮ ತಂಗಿ ಇಲ್ಲಿ ಇರುವುದು ಸರಿಯಲ್ಲ. ಆಕೆಯನ್ನು ತವರು ಮನೆಗೆ ಕರೆದೊಯ್ಯುವುದೇ ಸರಿ ಎಂದು ನಿರ್ಧರಿಸಿ ಅಲ್ಲಿಂದ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಇದರಿಂದ ಮನನೊಂದ ಈಶಪ್ಪ ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಈ ವೇಳೆ ಡೆತ್‌ ನೋಟ್‌ ಬರೆದಿಟ್ಟಿದ್ದು, ತನ್ನ ಸಾವಿಗೆ ಭಾವಂದಿರಾದ ಅನಿಲ್‌ ಮತ್ತು ಮಂಜುನಾಥ್‌ ಅವರೇ ಕಾರಣ ಎಂದು ದೂರಿದ್ದಾರೆ. ನನ್ನ ಸಾವಿಗೆ ಇವರಿಬ್ಬರೂ ಕಾರಣರಾಗಿದ್ದಾರೆ. ಇವರಿಗೆ ಶಿಕ್ಷೆ ಆಗಲೇಬೇಕು ಎಂದು ಉಲ್ಲೇಖಿಸಿದ್ದಾರೆ. ಗದಗ ನಗರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Naxal activities: ವೆಂಕಟಮ್ಮನಹಳ್ಳಿ ನಕ್ಸಲ್ ದಾಳಿ ಕೇಸ್‌; 19 ವರ್ಷಗಳಿಂದ ತಲೆಮರೆಸಿಕೊಂಡಿದ್ದವ ಅರೆಸ್ಟ್‌

ತುಮಕೂರು: ವೆಂಕಟಮ್ಮನಹಳ್ಳಿ ನಕ್ಸಲ್ ದಾಳಿ (Naxal activities) ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯ ಬಂಧನವಾಗಿದೆ. ಶಂಕರ ಅಲಿಯಾಸ್‌ ಕೊತ್ತಗೆರೆ ಶಂಕರ (38) ಬಂಧಿತ ಆರೋಪಿಯಾಗಿದ್ದಾನೆ.

2005ರಲ್ಲಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಪೊಲೀಸ್ ಕ್ಯಾಂಪ್ ಮೇಲೆ ನಕ್ಸಲಿಯರ ದಾಳಿ ನಡೆದಿತ್ತು. ಪೊಲೀಸ್ ಕ್ಯಾಂಪ್ ಮೇಲೆ ಸುಮಾರು 300ಕ್ಕೂ ಹೆಚ್ಚು ಮಾವೊಯಿಸ್ಟ್ ನಕ್ಸಲಿಯರು ದಾಳಿ ಮಾಡಿದ್ದರು. ದಾಳಿ ವೇಳೆ ಕರ್ತವ್ಯದಲ್ಲಿದ್ದ 7 ಮಂದಿ ಪೊಲೀಸರನ್ನು ಬಂದೂಕು ಹಾಗೂ ಬಾಂಬ್‌ಗಳಿಂದ ಕೊಲೆಗೈದಿದ್ದರು. ಘಟನೆಯಲ್ಲಿ 5 ಮಂದಿ ಪೊಲೀಸರಿಗೆ ಗಂಭೀರ ಗಾಯವಾಗಿತ್ತು.

ಅಲ್ಲದೇ ಕ್ಯಾಂಪ್ ಮುಂಭಾಗ ನಿಂತಿದ್ದ ಖಾಸಗಿ ಬಸ್ ಡ್ರೈವರ್‌ನ ಕೊಲೆಯಾಗಿತ್ತು. ಪೊಲೀಸ್ ಕ್ಯಾಂಪ್‌ನಲ್ಲಿದ್ದ ಬಂದೂಕುಗಳು ಹಾಗೂ ಗುಂಡುಗಳನ್ನು ದೋಚಿಕೊಂಡು ನಕ್ಸಲ್ ಟೀಂ ನಾಪತ್ತೆಯಾಗಿತ್ತು. ಈ ಸಂಬಂಧ ಪಾವಗಡ ತಾಲೂಕಿನ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಸದರಿ ಪ್ರಕರಣದಲ್ಲಿ 32 ಆರೋಪಿಗಳ ಮೇಲೆ ಪಾವಗಡ ಜೆಎಂಎಫ್‌ಸಿ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಪ್ರಕರಣ ಸಂಬಂಧ ಆರೋಪಿಗಳ ಹುಡುಕಾಟದಲ್ಲಿದ್ದ ಪೊಲೀಸರಿಗೆ ಆರೋಪಿ ಶಂಕರ ಸಿಕ್ಕಿ ಬಿದ್ದಿದ್ದಾನೆ. ಬೆಂಗಳೂರಿನ ಗೌರಿಪಾಳ್ಯದಲ್ಲಿ ವಾಸವಿದ್ದ ಆರೋಪಿ ಶಂಕರ ಬಿಬಿಎಂಪಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಖಚಿತ ಮಾಹಿತಿ ಆಧರಿಸಿ ತುಮಕೂರು ಎಸ್‌ಪಿ ಅಶೋಕ್ ಕೆ.ವಿ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಶಾಲೆ, ದೇವಸ್ಥಾನದ ಬಳಿಕ ರಾಜಧಾನಿಯ ಪ್ರತಿಷ್ಠಿತ ಹೋಟೆಲ್‌ಗೂ ಬಾಂಬ್‌ ಬೆದರಿಕೆ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic city) ಪ್ರತಿಷ್ಠಿತ ಹೋಟೆಲ್‌ಗೆ ಇಂದು ಬಾಂಬ್ ಬೆದರಿಕೆ ಮೇಲ್ (Bomb Hoax) ಬಂದಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್‌ (Hotel) ಆವರಣವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿದೆ. ಶಾಲೆ, ದೇವಸ್ಥಾನ ಬಳಿಕ ಇದೀಗ ಹೋಟೆಲ್‌ ಬಾಂಬ್‌ ಬೆದರಿಕೆಗೆ ತುತ್ತಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಬಳಿಯ ಒಟೇರಾ (Hotel Oterra) ಎಂಬ ಹೋಟೆಲ್‌ಗೆ ಬಾಂಬ್‌ ಬೆದರಿಕೆ ಮೇಲ್ ರವಾನೆಯಾಗಿದೆ. ತಡರಾತ್ರಿ 2 ಘಂಟೆಗೆ ಮೇಲ್ ಬಂದಿದ್ದು, ಇಂದು ಬೆಳಿಗ್ಗೆ ಹೋಟೆಲ್ ಸಿಬ್ಬಂದಿಗಳು ಮೇಲ್ ಚೆಕ್ ಮಾಡುವಾಗ ಕಂಡಿದೆ. ಆಗ ಗಾಬರಿಯಾಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಒಟೇರಾ ಹೋಟೆಲ್‌ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿದ್ದು, ಬಾಂಬ್ ಸ್ಕ್ವಾಡ್ ಕರೆಸಿ ತಪಾಸಣೆ ನಡೆಸಿದ್ದಾರೆ. ಸದ್ಯ ಯಾವುದೇ ಬಾಂಬ್‌ ಕಂಡುಬಂದಿಲ್ಲ. ಮುನ್ನೆಚ್ಚರಿಕೆಯಾಗಿ ತಪಾಸಣೆ ಮುಗಿಯುವವರೆಗೂ ಹೋಟೆಲ್‌ ಆವರಣವನ್ನು ಗ್ರಾಹಕರಿಗೆ ಬಂದ್‌ ಮಾಡಲಾಗಿದೆ.

ಶಾಲೆ, ದೇವಸ್ಥಾನಗಳಿಗೆ ಬೆದರಿಕೆ

ಇತ್ತೀಚೆಗೆ ನಾಗವಾರದ ಸೇಂಟ್ ಫಿಲೋಮಿನಾ ಆಸ್ಪತ್ರೆ‌ಯಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಇಲಾಖೆಯ ಸಿಟಿ ಎಸ್.ಬಿ.ಗೆ ಇ-ಮೇಲ್ ಬಂದಿದೆ. ಹೀಗಾಗಿ ತಕ್ಷಣ ಆಸ್ಪತ್ರೆಗೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಳೆದ ವರ್ಷ ಹಲವು ಪ್ರತಿಷ್ಠಿತ ಶಾಲೆಗಳಿಗೆ ಇದೇ ರೀತಿಯ ಬಾಂಬ್‌ ಬೆದರಿಕೆ ಇಮೇಲ್‌ ಬಂದಿತ್ತು. ಇದು ಕೂಡ ಹುಸಿಯಾಗಿತ್ತು. ಇತ್ತೀಚೆಗೆ ಹೊಸದಿಲ್ಲಿಯ ಹತ್ತಾರು ಶಾಲೆಗಳಿಗೆ ಬಾಂಬ್‌ ಬೆದರಿಕೆ ಇಮೇಲ್‌ ಬಂದಿದ್ದು, ಆ ಎಲ್ಲ ಶಾಲೆಗಳ ಮಕ್ಕಳಿಗೂ ರಜೆ ನೀಡಿ ಆವರಣ ತಲಾಶ್‌ ಮಾಡಲಾಗಿತ್ತು. ಇದು ಕೂಡ ಹುಸಿ ಎಂದು ಕಂಡುಬಂದಿತ್ತು. ಹೀಗೆ ಬೆದರಿಕೆ ಇಮೇಲ್‌ ಮಾಡಿದ ವ್ಯಕ್ತಿ ಅಪ್ರಾಪ್ತ ವಯಸ್ಕ ಎಂದು ಪೊಲೀಸರು ಮಾಹಿತಿ ನೀಡಿದ್ದರು. ನಂತರ ದೆಹಲಿಯ ವಿಮಾನ ನಿಲ್ದಾಣ (delhi airport) ಮತ್ತು ಹಲವಾರು ಆಸ್ಪತ್ರೆಗಳಿಗೆ (hospital) ಇ-ಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಸಂದೇಶಗಳು ಬಂದಿದ್ದವು.

ಇದನ್ನೂ ಓದಿ: Ration Card : ಸಾವಿನ ಎಡವಟ್ಟು ಸರಿಪಡಿಸಿದ ಆಹಾರ ಇಲಾಖೆ! ಮನೆ ಬಾಗಿಲಿಗೆ ಬಂತು ರೇಷನ್‌ ಕಾರ್ಡ್‌; ಇದು ವಿಸ್ತಾರ ನ್ಯೂಸ್‌ ಇಂಪ್ಯಾಕ್ಟ್‌

ಇದು ಕಿಡಿಗೇಡಿಗಳ ಕೃತ್ಯ ಎಂದು ಶಂಕಿಸಲಾಗಿದೆ. ಹೀಗೆ ಬೆದರಿಕೆ ಮೇಲ್‌ ಮಾಡುತ್ತಿರುವವರ ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದು, ದೇಶದ ಸರ್ವರ್‌ ಕನೆಕ್ಷನ್‌ ತಪ್ಪಿಸಿ ವಿಪಿಎನ್‌ ಮೂಲಕ ಕಾರ್ಯಾಚರಿಸಿ ವಿದೇಶಗಳ ಸರ್ವರ್‌ನಿಂದ ಬಂದಂತೆ ತೋರಿಸುವ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ. ಹೀಗಾಗಿ ಇದನ್ನು ಭೇದಿಸುವುದು ಪೊಲೀಸರಿಗೆ ಕಷ್ಟವಾಗುತ್ತಿದೆ.

ದೂರು ದಾಖಲು

ಇ-ಮೇಲ್‌ಗಳ ನಿಖರವಾದ ಮೂಲವನ್ನು ಪತ್ತೆ ಹಚ್ಚಲು ದೆಹಲಿ ಪೊಲೀಸರು ಇಂಟರ್‌ಪೋಲ್ ಮೂಲಕ ರಷ್ಯಾದ ಮೇಲಿಂಗ್ ಸೇವಾ ಕಂಪೆನಿ Mail.ru ಅನ್ನು ಸಂಪರ್ಕಿಸಿದರು. ಬಾಂಬ್ ಹುಸಿ ಇ-ಮೇಲ್‌ಗಳ ಉದ್ದೇಶವು ಸಾಮೂಹಿಕ ಭೀತಿಯನ್ನು ಸೃಷ್ಟಿಸುವುದು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದಾಗಿದೆ ಎಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಸುಳ್ಳು ಬಾಂಬ್ ಬೆದರಿಕೆಗಳ ಸಂದರ್ಭಗಳನ್ನು ಎದುರಿಸಲು ವಿವರವಾದ ಪ್ರೋಟೋಕಾಲ್ ಮತ್ತು ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸೀಜರ್ಸ್ (SOP) ಗಾಗಿ ಕೇಂದ್ರ ಗೃಹ ಸಚಿವಾಲಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ವಾರದ ಆರಂಭದಲ್ಲಿ, ಗೃಹ ಕಾರ್ಯದರ್ಶಿ ದೆಹಲಿ ಪೊಲೀಸರು ಮತ್ತು ಶಾಲೆಗಳಿಗೆ ತಪ್ಪು ಮಾಹಿತಿಯಿಂದಾಗಿ ಯಾವುದೇ ಅನಗತ್ಯ ಭಯವನ್ನು ಉಂಟಾಗದಂತೆ ತಡೆಯಲು ವ್ಯವಸ್ಥೆಗೊಳಿಸುವಂತೆ ಕೇಳಿಕೊಂಡಿದ್ದರು.
ಭದ್ರತೆ ಹೆಚ್ಚಳಕ್ಕೆ ಸೂಚನೆ

ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಭದ್ರತೆ, ಸಿಸಿಟಿವಿ ಕೆಮರಾ ಮತ್ತು ಇಮೇಲ್‌ಗಳ ನಿಯಮಿತ ಮೇಲ್ವಿಚಾರಣೆಯನ್ನು ಹೆಚ್ಚಿಸುವ ಅಗತ್ಯವನ್ನು ಸಚಿವಾಲಯ ಒತ್ತಿಹೇಳಿದೆ. ತಪ್ಪು ಮಾಹಿತಿಯು ಯಾವುದೇ ಅನಗತ್ಯ ಭೀತಿಯನ್ನು ಸೃಷ್ಟಿಸದಂತೆ ಪರಿಣಾಮಕಾರಿ ಪ್ರತಿಕ್ರಿಯೆ ಕಾರ್ಯವಿಧಾನಕ್ಕಾಗಿ ನಿಕಟ ಸಮನ್ವಯವನ್ನು ಹೊಂದಲು ದೆಹಲಿ ಪೊಲೀಸರು ಮತ್ತು ಶಾಲೆಗಳಿಗೆ ಗೃಹ ಕಾರ್ಯದರ್ಶಿ ತಿಳಿಸಿದ್ದಾರೆ.

Exit mobile version