Site icon Vistara News

Self Harming : 14 ವರ್ಷದ ಮಗ ನೇಣಿಗೆ ಶರಣಾದ 13ನೇ ದಿನಕ್ಕೆ ತಂದೆ ಕೂಡಾ ಆತ್ಮಹತ್ಯೆ

14 year old boy dead

ಮಂಗಳೂರು: ಈ ಮನೆಯ ಕಣ್ಣೀರಿಗೆ ಎಣೆಯೇ ಇಲ್ಲವೇನೋ. ಮನೆಯ ಪುಟ್ಟ ಬಾಲಕ ಸಣ್ಣ ಕಾರಣಕ್ಕೆ ಬೇಸರ ಮಾಡಿಕೊಂಡು ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ (Self Harming). ಇದರ ಹೊಡೆತವನ್ನು ಸಹಿಸಿಕೊಳ್ಳುವುದೇ ಕುಟುಂಬಕ್ಕೆ ಅಸಾಧ್ಯವಾಗಿದೆ. ಅಂಥ ಹೊತ್ತಿನಲ್ಲಿ ಈಗ ಆ ಹುಡುಗನ ತಂದೆಯೂ ಮಗನ ರೀತಿಯಲ್ಲೇ (Man ends life after sons suicide) ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಅದೂ ಮಗ ಆತ್ಮಹತ್ಯೆ ಮಾಡಿಕೊಂಡ ಹದಿಮೂರನೇ ದಿನಕ್ಕೆ!

ಇದು ದಕ್ಷಿಣ ಕನ್ನಡ ಜಿಲ್ಲೆ (Dakshina kannada News) ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಪೆರ್ಲದಲ್ಲಿ ನಡೆದ ಕರುಣಾಜನಕ ಕಥೆ. ಇಲ್ಲಿನ ಯೊಗೀಶ್ ಪೂಜಾರಿ (41) ಆತ್ಮಹತ್ಯೆ ಮಾಡಿಕೊಂಡವರು. ಅವರ ಮಗ ಯಕ್ಷಿತ್‌ (14) ಜನವರಿ ನಾಲ್ಕರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಮಗ ಹೇಗೆ ‌ ಆತ್ಮಹತ್ಯೆ ಮಾಡಿಕೊಂಡನೋ ಅದೇ ರೀತಿಯಲ್ಲಿ ಅಪ್ಪನೂ ನೇಣು ಬಿಗಿದುಕೊಂಡು ಇಹ ಲೋಕದ ಯಾತ್ರೆ ಮುಗಿಸಿದ್ದಾರೆ. ಅಂದ ಹಾಗೆ ಮಗ ಮೃತಪಟ್ಟು ಅದರ ಉತ್ತರ ಕ್ರಿಯಾದಿಗಳು ಭಾನುವಾರವಷ್ಟೇ ಅಂತ್ಯಗೊಂಡಿತ್ತು. ಕಣ್ಣೀರಿನಲ್ಲೇ ಮಗನ ಎಲ್ಲ ಕ್ರಿಯೆಗಳಲ್ಲಿ ಭಾಗವಹಿಸಿದ್ದ ಯೋಗೀಶ್‌ ಪೂಜಾರಿ ಈಗ ತಾನೇ ಸಾವಿಗೆ ಶರಣಾಗಿ ಕುಟುಂಬಕ್ಕೆ ಡಬಲ್‌ ಆಘಾತ ನೀಡಿದ್ದಾರೆ.

ಯೋಗಿಶ್ ಪೂಜಾರಿ ಮತ್ತು ರೇಷ್ಮಾ ದಂಪತಿಗಳ ಪುತ್ರನಾಗಿರುವ ಯಕ್ಷಿತ್ (14) 8ನೇ ತರಗತಿಯಲ್ಲಿ ಓದುತ್ತಿದ್ದ. ಜನವರಿ ನಾಲ್ಕರಂದು ಆತ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳಲು ಏನೂ ಅರಿಯದ ಆರು ವರ್ಷದ ತಮ್ಮನ ಜತೆಗೆ ನಡೆದ ಜಗಳ ಕಾರಣ ಎಂದು ಹೇಳಲಾಗಿದೆ.

ಎಲ್ಲ ಮನೆಗಳಲ್ಲಿ ಇರುವಂತೆ ಮಕ್ಕಳಾದ ಅಣ್ಣ-ತಮ್ಮರ ನಡುವೆ ಸಣ್ಣ ಪುಟ್ಟ ಜಗಳಗಳು ನಡೆಯುತ್ತಿದ್ದವು. ಅದು ತಂದೆ-ತಾಯಿ ಸಮಾಧಾನ ಮಾಡುವಲ್ಲಿಗೆ ಸರಿ ಹೋಗುತ್ತಿತ್ತು. ಆದರೆ, ಮೊನ್ನೆ ನಡೆದ ಜಗಳದಲ್ಲಿ ತಮ್ಮ ಯಕ್ಷಿತ್‌ನ ಹೊಟ್ಟೆಗೆ ಕಚ್ಚಿ ಗಾಯ ಮಾಡಿದ್ದ. ಇದರಿಂದ ತೀವ್ರವಾಗಿ ನೊಂದ ಯಕ್ಷಿತ್‌ ʻನಿನಗೆ ನಾನು ಇರುವುದರಿಂದ ಸಮಸ್ಯೆ ಅಲ್ವಾ? ಇನ್ನು ನಾನೇ ಇರುವುದಿಲ್ಲʼ ಎಂದು ಹೇಳಿ ತಮ್ಮನ ಎದುರೆ ಆತ್ಮಹತ್ಯೆ ಮಾಡಿಕೊಂಡಿದ್ದ.

ಇದನ್ನೂ ಓದಿ : Self Harming : ಯಾರೂ ಹೆಣ್ಣು ಕೊಡುತ್ತಿಲ್ಲ ಎಂಬ ಬೇಸರ; ವಿಷ ಸೇವಿಸಿ ಪ್ರಾಣಬಿಟ್ಟ ಯುವಕ

ಉಜಿರೆ ಖಾಸಗಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯಕ್ಷಿತ್‌ ಆತ್ಮಹತ್ಯೆ ಮಾಡಿಕೊಳ್ಳಲು ತನ್ನ ತಾಯಿಯ ಸೀರೆಯನ್ನೇ ಬಳಸಿಕೊಂಡಿದ್ದ. ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು. ಇದೀಗ ಅದೇ ಪೊಲೀಸರು ತಂದೆಯ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Exit mobile version