Site icon Vistara News

Self harming : ಕುಡುಕ ಗಂಡನ ಕಿರುಕುಳಕ್ಕೆ ಬೇಸತ್ತು ಇಬ್ಬರು ಮಕ್ಕಳ ಜತೆ ವಿಷ ಸೇವಿಸಿದ ತಾಯಿ; ಮಗಳು ಮೃತ್ಯು

Suicide attempt by family in Chamaaj nagar

ಚಾಮರಾಜನಗರ: ಕುಡಿದು ಬಂದು ನಿತ್ಯ ಜಗಳವಾಡುತ್ತಿದ್ದ ಗಂಡನ ಹಿಂಸೆಯಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾವೂ ವಿಷ ಸೇವಿಸಿದ (Suicide attempt) ಘಟನೆ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ. ಈ ಘಟನೆಯಲ್ಲಿ ಒಬ್ಬ ಮಗಳು ವಿಷ ಸೇವನೆಯಿಂದ ಮೃತಪಟ್ಟಿದ್ದು, ತಾಯಿ ಮತ್ತು ಮಗನ ಸ್ಥಿತಿ ಗಂಭೀರವಾಗಿದೆ.

ಚಾಮರಾಜನಗರ ಜಿಲ್ಲೆ (Chamarajanagara News) ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ಘಟನೆ ನಡೆದಿದ್ದು, ಅಲ್ಲಿನ ನಿವಾಸಿ ಮಾದೇಶ ಎಂಬಾತನ ಪತ್ನಿಯೇ ಗಂಡನ ಕಿರುಕುಳ ತಾಳಲು (Domestic violence) ಸಾಧ್ಯವಾಗದೆ ಈ ರೀತಿ ಸಾವಿಗೆ ಮುಂದಾದವರು. ತಾಯಿ ಶೀಲಾ (35), ಮಗ ಯಶವಂತ (14) ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೆ, ಸಿಂಧು (8) ಮೃತಪಟ್ಟಿದ್ದಾಳೆ.

ಮಾದೇಶ ಮತ್ತು ಶೀಲಾಗೆ ಮದುವೆಯಾಗಿ ಹತ್ತು ವರ್ಷಗಳೇ ಸಂದಿವೆ. ಆದರೆ, ಆಕೆಯ ಪಾಲಿಗೆ ಒಂದು ದಿನವೂ ನೆಮ್ಮದಿ ಇರಲಿಲ್ಲ. ಕುಡುಕ ಗಂಡನ ಹಿಂಸೆಯಿಂದ ತತ್ತರಿಸಿದ್ದ ಆಕೆ ಮಕ್ಕಳು ದೊಡ್ಡವರಾದ ಮೇಲಾದರೂ ಸರಿ ಹೋಗಬಹುದು ಎಂದು ಕಾದಿದ್ದಳು. ಆದರೆ, ಈ ಹಿಂಸೆ ನಿತ್ಯ ನರಕವನ್ನೇ ಸೃಷ್ಟಿಸುವ ವಿದ್ಯಮಾನಗಳು ಮುಂದುವರಿಯುತ್ತಲೇ ಇದ್ದವು.

ಮಾದೇಶ ಪ್ರತಿನಿತ್ಯ ಕುಡಿದು ಬರುತ್ತಿದ್ದ ಕಾರಣಕ್ಕೆ ಜಗಳ ನಡೆಯುತ್ತಿತ್ತು. ಅವನು ಮನೆಗೆ ಯಾಕಪ್ಪಾ ಬರುತ್ತಾನೆ ಎನ್ನುವಷ್ಟು ಭಯ ಸೃಷ್ಟಿಯಾಗುತ್ತಿತ್ತು. ಅಪ್ಪ ಬರುತ್ತಾನೆ ಎಂದರೆ ಮಕ್ಕಳು ಮುದುಡಿ ಮಲಗಬೇಕಾದ ಸ್ಥಿತಿ ನಿರ್ಮಾಣವಾಗುತ್ತಿತ್ತು.

ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನ ನಡೆದ ಮನೆಯ ಮುಂದೆ ಬಂಧುಗಳ ರೋದನ

ಮಂಗಳವಾರ ರಾತ್ರಿಯೂ ಇಂಥಹುದೇ ಘಟನೆ ನಡೆದಿತ್ತು. ತಲೆಗೆ ನಶೆಯೇರಿಸಿಕೊಂಡಿದ್ದ ಗಂಡ ಮತ್ತು ಹೆಂಡತಿ ಮಧ್ಯೆ ದೊಡ್ಡ ಮಟ್ಟದ ಜಗಳ ಆಗಿದೆ. ಇದರಿಂದ ತೀರಾ ನೊಂದ ಶೀಲಾ ಇನ್ನು ಇವನ ಜತೆಗೆ ಬದುಕುವುದು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದು ಅತಿರೇಕದ ಕ್ರಮಕ್ಕೆ ಮುಂದಾಗಿದ್ದಾಳೆ.

ಬೆಳಗ್ಗೆ ಆರು ಗಂಟೆಯ ಹೊತ್ತಿಗೆ ಮಕ್ಕಳಿಬ್ಬರನ್ನು ಎಬ್ಬಿಸಿ ಅವರಿಗೆ ಹಾಲಿನ ನೆಪದಲ್ಲಿ ವಿಷವನ್ನೇ ಉಣಿಸಿದ್ದಾಳೆ. ತಾನೂ ಅದನ್ನೇ ಸೇವಿಸಿದ್ದಾಳೆ. ಆದರೆ, ಸ್ವಲ್ಪ ಹೊತ್ತಿನಲ್ಲಿ ಅವರೆಲ್ಲರನ್ನೂ ವಾಂತಿ ಮಾಡಲು ಆರಂಭಿಸಿದ್ದು ನೋಡಿ ಅಕ್ಕಪಕ್ಕದವರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರು.

ಆದರೆ, ಅಷ್ಟು ಹೊತ್ತಿಗೇ ಎಂಟು ವರ್ಷದ ಮಗಳು ವಾಂತಿ ಮಾಡಿಕೊಂಡು, ಕರುಳು ಕತ್ತರಿಸಿ ಪ್ರಾಣ ಬಿಟ್ಟಿದ್ದಾಳೆ. ಉಳಿದಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗ ಮತ್ತು ತಾಯಿ ಶೀಲಾ ಪರಿಸ್ಥಿತಿಯೂ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಮಗಳೂ ಪ್ರಾಣ ಕಳೆದುಕೊಂಡರೂ ಆಸ್ಪತ್ರೆಗೂ ಬಾರದ ತಂದೆ

ಸಿಂಧು ಸಾವನ್ನಪ್ಪಿದ್ದಾಳೆ. ಮತ್ತು ತಾಯಿ ಶೀಲಾ ಹಾಗೂ ಪುತ್ರ ಯಶವಂತ್‌ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮುದ್ದು ಕಂದಮ್ಮನ ಕಳೆದುಕೊಂಡು ಸಂಬಂಧಿಕರು ದಿಗ್ಭ್ರಮೆಗೆ ಒಳಗಾಗಿದ್ದಾರೆ. ಇಷ್ಟೆಲ್ಲ ಆದರೂ ಮಾದೇಶ ಆಸ್ಪತ್ರೆಗೂ ಬಂದಿಲ್ಲ. ಹೀಗಾಗಿ ಮಾದೇಶ್ ವಿರುದ್ದ ಶೀಲಾ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ ಹಲವು ಕಡೆಗಳಲ್ಲಿ ಕುಡಿತದ ಹಿನ್ನೆಲೆಯಲ್ಲಿ ಸಂಸಾರಗಳು ಮೂರಾಬಟ್ಟೆಯಾಗಿರುವ ವಿದ್ಯಮಾನಗಳು ನಿತ್ಯ ವರದಿಯಾಗುತ್ತಿವೆ. ಇದರ ಜತೆಗೆ ಕುಡಿತದ ಮತ್ತಿನಲ್ಲಿ ಪತ್ನಿಯನ್ನು ಕೊಲೆ ಮಾಡುವುದು, ಕಂಡವರ ಜತೆ ಜಗಳ ಮಾಡುವುದು, ಹೊಡೆದಾಟಕ್ಕೆ ಇಳಿಯುವ ವಿದ್ಯಮಾನಗಳು ನಿತ್ಯ ನಡೆಯುತ್ತಲೇ ಇದೆ. ಪೊಲೀಸ್‌ ಠಾಣೆಗಳಲ್ಲಿ ದಾಖಲಾಗುವ ಹೆಚ್ಚಿನ ಅಪರಾಧ ಪ್ರಕರಣಗಳ ಹಿಂದೆ ಕುಡಿತದ್ದೇ ಹಾವಳಿ ಕಂಡುಬರುತ್ತಿದೆ.

ಇದನ್ನೂ ಓದಿ: Kidnap Case : ಹಾಡಹಗಲೇ ಟ್ಯೂಷನ್‌ಗೆ ಹೊರಟಿದ್ದ 9 ವರ್ಷದ ಬಾಲಕಿಯ ಅಪಹರಣ ಯತ್ನ

Exit mobile version