ಗದಗ: ಸೆಲ್ಫಿ ತೆಗೆಯಲು ಹೋದ ಯುವಕನೊಬ್ಬ (Selfie Craze) ಸಮುದ್ರ ಪಾಲಾದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ಬಳಿ ತ್ರಾಸಿ ಬೀಚ್ನಲ್ಲಿ (Trasi Beach in Kundapura) ನಡೆದಿದೆ. ಗದಗ ಜಿಲ್ಲೆ (Gadaga News) ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಪೀರಸಾಬ ನದಾಫ್ (22) ಎಂಬವರೇ ಮೃತಪಟ್ಟ ಯುವಕ.
ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದಿಂದ ಕೂಲಿ ಕೆಲಸಕ್ಕೆಂದು ಉಡುಪಿಗೆ ಬಂದು ಉಳಿದುಕೊಂಡಿದ್ದರು ಪೀರಸಾಬ ನದಾಫ್. ಕೆಲಸಗಳ ನಡುವೆ ಬಿಡುವು ಮಾಡಿಕೊಂಡ ಪೀರಸಾಬ ಮಂಗಳವಾರ ಮಧ್ಯಾಹ್ನ ತ್ರಾಸಿ ಸಮುದ್ರ ತೀರಕ್ಕೆ ಹೋಗಿದ್ದರು. ಅಲ್ಲಿ ಅವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ದೊಡ್ಡದೊಂದು ತೆರೆ ಅಪ್ಪಳಿಸಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಆವತ್ತು ಎಷ್ಟು ಹುಡುಕಿದರೂ ಅವರಾಗಲೀ, ಅವರ ಶವವಾಗಲೀ ಸಿಕ್ಕಿರಲಿಲ್ಲ. ಇದೀಗ ಬುಧವಾರ ಶೋಧ ಕಾರ್ಯಾಚರಣೆ ವೇಳೆ ಪೀರಸಾಬ್ ಮೃತದೇಹ ಪತ್ತೆಯಾಗಿದೆ
ಪೀರಸಾಬ್ ಅವರದು ಬಡ ಕುಟುಂಬ. ಅವರ ತಂದೆ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಹೀಗಾಗಿ ಮನೆಗೆ ಆಧಾರವಾಗುವ ಹೊಣೆಗಾರಿಗೆ 22 ವರ್ಷದ ಪೀರಸಾಬ್ ಮೇಲೆ ಬಿದ್ದಿತ್ತು. ಇದನ್ನೆಲ್ಲ ನಿಭಾಯಿಸುವುದಕ್ಕಾಗಿ ಕೆಲಸ ಹುಡುಕಿಕೊಂಡು ಉಡುಪಿಗೆ ಬಂದಿದ್ದ. ಅಲ್ಲಿ ಒಳ್ಳೆಯದು ಎನ್ನಬಹುದಾದ ಕೆಲಸವೊಂದು ಸಿಕ್ಕಿತ್ತು.
ಈ ನಡುವೆ, ಅಕ್ಕನ ಮದುವೆಯನ್ನೂ ನಿಶ್ಚಯ ಮಾಡಿಕೊಂಡಿದ್ದರು. ಅಕ್ಕನ ಮದುವೆ ಮಾಡಿ ಅದಕ್ಕೆ ಮಾಡುವ ಸಾಲವನ್ನು ಹೇಗಾದರೂ ಕಟ್ಟಿಕೊಂಡು ಬಳಿಕ ತಾನೂ ಒಂದು ಮದುವೆ ಮಾಡಿಕೊಂಡು ಅಮ್ಮನನ್ನು ಚೆನ್ನಾಗಿ ನೋಡಿಕೊಂಡಿರಬೇಕು ಎನ್ನುವ ಸಾವಿರ ಕನಸುಗಳನ್ನು ಹೊತ್ತುಕೊಂಡಿದ್ದರು ಪೀರಸಾಬ. ಆದರೆ, ಅವೆಲ್ಲ ಕನಸುಗಳನ್ನು ಆ ಒಂದು ಹೆದ್ದೆರೆ ಕೊಚ್ಚಿಕೊಂಡು ಹೋಗಿತ್ತು. ಅಕ್ಕನನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವ ಸಡಗರದಲ್ಲಿ ಹುಡುಗ, ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಇದರೊಂದಿಗೆ ಇಡೀ ಕುಟುಂಬದ ಕನಸುಗಳಿಗೆ ಹೊಡೆತ ಬಿದ್ದಿದೆ.
ಚಿಕ್ಕಬಳ್ಳಾಪುರ: ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ, ವಕೀಲ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಇಲ್ಲಿನ ಗುಡಿಬಂಡೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷರೂ ಆಗಿರುವ ವಕೀಲ ಜಿ.ಎಂ. ಅನಿಲ್ ಕುಮಾರ್ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಡಿಬಂಡೆಯ ಸ್ವಂತ ಮನೆಯಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ಅನಿಲ್ ಕುಮಾರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿದ್ದರು. ಬಳಿಕ ಪಟ್ಟಣ ಪಂಚಾಯತಿ ಸದಸ್ಯರಾಗಿ ನಂತರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಗುಡಿಬಂಡೆ ಪಟ್ಟಣದ ಕೆ.ಎಚ್.ಬಿ ಕಾಲೋನಿಯಲ್ಲಿ ಅವರ ಮನೆಯಿದ್ದು, ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿಗೆ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಸ್ಥಳಕ್ಕೆ ಗುಡಿಬಂಡೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Terrorists in Bengaluru : ಉಗ್ರ ಸಂಚು ಬಯಲಾಗಿದ್ದು ಪರಪ್ಪನ ಅಗ್ರಹಾರದಿಂದ; ಸುಳಿವು ನೀಡಿದ್ದು ಒಂದು Phone Call!