ಬೆಂಗಳೂರು: ರಾಜ್ಯಾದ್ಯಂತ ಮೇ 10ರಂದು ಮತದಾನ (Karnataka Election) ನಡೆಯಲಿದೆ. ಇದಕ್ಕಾಗಿ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ಪಕ್ಷಗಳು ಪ್ರಮುಖ ನಾಯಕರನ್ನು ರಾಜ್ಯಕ್ಕೆ ಕರೆಸಿದ್ದಾರೆ. ಆದರೆ, 80 ವರ್ಷ ದಾಟಿದ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ಮಾತ್ರ ಏಪ್ರಿಲ್ 29ರಿಂದಲೇ ಮತದಾನ ಮಾಡಬಹುದಾಗಿದೆ. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ಮನೆಯಿಂದಲೇ ಮತದಾನ ಮಾಡಲು ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದಲ್ಲಿ 80 ವರ್ಷ ದಾಟಿದ 80,250 ಜನ ಮನೆಯಿಂದಲೇ ಹಕ್ಕು ಚಲಾಯಿಸುವದಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಹಾಗೆಯೇ, 19,279 ವಿಶೇಷ ಚೇತನರು ಕೂಡ ಮನೆಯಿಂದಲೇ ಮತದಾನ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದಾರೆ. 80 ವರ್ಷ ದಾಟಿದ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ಏಪ್ರಿಲ್ 29ರಿಂದ ಮೇ 6ರ ಸಂಜೆ 6 ಗಂಟೆವರೆಗೆ ಮತದಾನ ಮಾಡಬಹುದಾಗಿದೆ.
ಹೇಗೆ ಮಾಡಲಿದ್ದಾರೆ ಮತದಾನ?
ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ಮನೆಯಿಂದಲೇ ಮತದಾನ ಮಾಡಬಹುದಾಗಿದೆ. ಇಬ್ಬರು ಚುನಾವಣೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವಿಡಿಯೊಗ್ರಾಫರ್ ಒಳಗೊಂಡ ತಂಡವು ಮೊದಲಿಗೆ ನೋಂದಣಿ ಮಾಡಿಕೊಂಡ ಮತದಾರರ ಮನೆಗೆ ತೆರಳಿ, ಅವರ ಗುರುತಿನ ಚೀಟಿ ಪರಿಶೀಲಿಸುತ್ತಾರೆ. ಇದಾದ ಬಳಿಕ ತಂಡವು ನೋಂದಣಿ ಮಾಡಿಸಿಕೊಂಡವರಿಂದ ಮತದಾನ ಮಾಡಿಸಿಕೊಳ್ಳುತ್ತಾರೆ. ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿಯೇ ಮತದಾನ ಪ್ರಕ್ರಿಯೆ ನಡೆಯಲಿದೆ. ಆದರೂ, ಚುನಾವಣೆ ಅಧಿಕಾರಿಗಳು ಗೌಪ್ಯತೆ ಕಾಪಾಡಲಿದ್ದಾರೆ. ಇಡೀ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಲಾಗುತ್ತದೆ. ಈ ಮತಗಳನ್ನು ಕೂಡ ಏಪ್ರಿಲ್ 13ರಂದೇ ಎಣಿಕೆ ಮಾಡಲಾಗುತ್ತದೆ.
ಇದನ್ನೂ ಓದಿ: Karnataka Election : ರಂಗೋಲಿ ಬಿಡಿಸಿ ಮತದಾನದ ಬಗ್ಗೆ ಅರಿವು ಮೂಡಿಸಿದ ವನಿತೆಯರು
ರಾಜ್ಯದಲ್ಲಿ 5,30,85,566 ಸಾಮಾನ್ಯ ಮತದಾರರಿದ್ದು, 47,488 ಸೇವಾ ಮತದಾರರು ಸೇರಿ ಒಟ್ಟು 5,31,33,054 ಮತದಾರರಿದ್ದಾರೆ. ಇವರಲ್ಲಿ ಪುರುಷರು 2,67,28,053 ಇದ್ದರೆ, ಮಹಿಳಾ ಮತದಾರರ ಸಂಖ್ಯೆ 2,64,00,074 ಇದೆ. ಒಟ್ಟು ಮತದಾರರ ಪೈಕಿ 571,281 ವಿಶೇಷ ಚೇತನರಿದ್ದರೆ, 3,35,387 ಪುರುಷರಿದ್ದರೆ, 2,35,833 ಮಹಿಳೆಯರಿದ್ದಾರೆ. ಇತರೆ 61 ಮತದಾರರಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಮತದಾನ ಮಾಡುವವರ ಸಂಖ್ಯೆ 11,71,558 ಇದೆ. ಇವರಲ್ಲಿ 6,45,140 ಯುವಕರಾದರೆ, 5,26,237 ಯುವತಿಯರಾಗಿದ್ದಾರೆ. ಇವರೆಲ್ಲ ಮೇ 10ರಂದು ಮತ ಚಲಾಯಿಸಿದ್ದಾರೆ.