ಬೆಂಗಳೂರು: ಹಿರಿಯ ಪತ್ರಕರ್ತ, ಕನ್ನಡಪ್ರಭದ ಮಾಜಿ ಸಂಪಾದಕ ಕೆ. ಸತ್ಯನಾರಾಯಣ (87) ಅವರು ಭಾನುವಾರ ಬೆಳಗ್ಗೆ ನಿಧನರಾದರು.
ಬೆಂಗಳೂರಿನ ಜಯನಗರದ ಎಲ್‌ಐಸಿ ಕಾಲೊನಿಯ ನಿವಾಸದಲ್ಲಿ ಕೆ. ಸತ್ಯನಾರಾಯಣ ಅವರು ಕೊನೆಯುಸಿರೆಳೆದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ತಾಯ್ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಪ್ರವೇಶಿಸಿದ್ದ ಕೆ. ಸತ್ಯನಾರಾಯಣ ಅವರು ಕನ್ನಡಪ್ರಭ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಇಳಿ ವಯಸ್ಸಿನಲ್ಲೂ ಸತತವಾಗಿ ಅಂಕಣಗಳನ್ನು ಬರೆದು ಸಮಕಾಲೀನ ಆಗುಹೋಗುಗಳಿಗೆ ಸ್ಪಂದಿಸಿದ್ದರು. ಕೆ. ಸತ್ಯನಾರಾಯಣ ಅವರಿಗೆ 87 ವರ್ಷ ಭರ್ತಿಯಾದಾಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ವತಿಯಿಂದ ಗೌರವ ಸಮರ್ಪಣೆ ಕಾರ್ಯಕ್ರಮ ನಡೆದಿತ್ತು.
ಕೆ.ಸತ್ಯನಾರಾಯಣ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ
ಕೆ. ಸತ್ಯನಾರಾಯಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸತ್ಯನಾರಾಯಣ ಅವರು ತಾಯಿ ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದರು.
ಇಳಿವಯಸ್ಸಿನಲ್ಲೂ ಬರೆಯುತ್ತಿದ್ದ ಅಂಕಣಗಳ ಮೂಲಕ ಸಮಕಾಲೀನ ರಾಜಕೀಯ, ವಾಣಿಜ್ಯ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು. ಮೌಲ್ಯಾಧಾರಿತ ಪತ್ರಿಕೋದ್ಯಮದ ಸಂಕೇತವಾಗಿದ್ದ ಅವರು ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಟಿ.ಎಸ್.ಆರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರ ನಿಧನ ಕನ್ನಡ ಪತ್ರಿಕೋದ್ಯಮಕ್ಕೆ ದೊಡ್ಡ ನಷ್ಟವಾಗಿದ್ದು, ಹಳೆ ತಲೆಮಾರಿನ ಪತ್ರಿಕೋದ್ಯಮದ ಕೊಂಡಿಯೊಂದು ಕಳಚಿಕೊಂಡತಾಗಿದೆ.
ಸತ್ಯನಾರಾಯಣರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮ ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಸಂತಾಪ ಸೂಚಿಸಿದರು.
ಸತ್ಯನಾರಾಯಣ ಕನ್ನಡ ಮಾಧ್ಯಮ ಲೋಕದ ಆಸ್ತಿ- ಎಚ್‌ಡಿಕೆ
ಕನ್ನಡ ಪ್ರಭ ಪತ್ರಿಕೆಯ ವಿಶ್ರಾಂತ ಸಂಪಾದಕರಾಗಿದ್ದ ಕೆ. ಸತ್ಯನಾರಾಯಣ (ಸತ್ಯ) ಅವರು ನಿಧನರಾದ ಸುದ್ದಿ ಕೇಳಿ ದುಃಖವಾಯಿತು. ಕನ್ನಡ ಮಾಧ್ಯಮ ಲೋಕದ ಆಸ್ತಿ, ಸತ್ಯನಿಷ್ಠ ಪತ್ರಿಕೋದ್ಯಮದ ಅನನ್ಯ ಕೊಂಡಿಯಾಗಿದ್ದ ಅವರು, ಹೊಸ ತಲೆಮಾರಿನ ಪತ್ರಕರ್ತರ ಪಾಲಿಗೆ ನಿಜಕ್ಕೂ ದಂತಕಥೆ. ಅವರು ಅಷ್ಟು ಸ್ವಚ್ಛವಾಗಿ ವೃತ್ತಿ ಜೀವನವನ್ನು ನಿಭಾಯಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ನಾನು ಅವರ ‘ಸಮಕಾಲೀನ’ ಅಂಕಣದ ಓದುಗ. ಬದುಕಿನ ಕೊನೆ ದಿನಗಳಲ್ಲೂ ಅವರು ಬರೆಯುತ್ತಿದ್ದರು ಎಂದು ಕೇಳಿದ್ದೆ. ಅವರ ಬರಹಗಳು ಸಕಾಲಿಕ ಮತ್ತು ವಿಚಾರಪೂರ್ಣವಾಗಿರುತ್ತಿದ್ದವು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಇಂದು ಸಂಜೆ 6 ಗಂಟೆಗೆ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಕೆ.ಸತ್ಯನಾರಾಯಣ ಅವರ ಅಂತ್ಯಕ್ರಿಯೆ ನಡೆಯಲಿದೆ. ಜಯನಗರದಲ್ಲಿರುವ ಅವರ ನಿವಾಸದಲ್ಲಿ ಸಂಜೆ 5.30ರ ವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಬಹುದು ಎಂದು ಅವರ ಅಣ್ಣನ ಮಗ ವೆಂಕೋಬರಾವ್ ತಿಳಿಸಿದ್ದಾರೆ.