ಬೆಂಗಳೂರು: ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ಅವರು ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ಹೊಸ ಬಾಂಬ್ ಸಿಡಿಸಿದ್ದು, ಹಿರಿಯ ಸಚಿವರ ತಲ್ಲಣಕ್ಕೆ ಕಾರಣವಾಗಿದೆ. ಸಿಎಂ ಹಾಗೂ ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ. ಆದರೆ, ಹಿರಿಯ ಸಚಿವರು (ಇದೇ ಮೊದಲ ಬಾರಿಗೆ ಸಚಿವರಾದವರು ಬಿಟ್ಟು) ಉಳಿದವರೆಲ್ಲರೂ ಎರಡೂವರೆ ವರ್ಷಕ್ಕೆ ಅಧಿಕಾರವನ್ನು ಇತರರಿಗೆ ಬಿಟ್ಟು ಕೊಟ್ಟು ಮೇಲ್ಪಂಕ್ತಿ ಹಾಕಿ ಕೊಡಬೇಕು. ಈ ಕೆಲಸವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಮಾಡಬೇಕು ಎಂದು ಕೆ.ಎಚ್. ಮುನಿಯಪ್ಪ (KH Muniyappa) ಹೇಳಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ (Karnataka Politics) ಹೊಸ ಬದಲಾವಣೆಯನ್ನು ತರಬೇಕು ಎಂದು ಹೇಳಿದ್ದಾರೆ.
ಕೆಪಿಸಿಸಿ ನೂತನ ಕಟ್ಟಡದಲ್ಲಿ ಸೋಮವಾರ (ಆಗಸ್ಟ್ 14) ಏರ್ಪಡಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರ ಹಂಚಿಕೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸರ್ಕಾರ ರಚನೆಯಾಗಿ ಮೂರು ತಿಂಗಳೂ ಆಗುವಷ್ಟರಲ್ಲಿ ಕೆ.ಎಚ್. ಮುನಿಯಪ್ಪ ನೀಡಿರುವ ಇಂಥದ್ದೊಂದು ಹೇಳಿಕೆಯು ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಜತೆಗೆ ಅಧಿಕಾರ ಬದಲಾವಣೆಯ ಚರ್ಚೆಗೆ ಮತ್ತೆ ಚಾಲನೆ ಸಿಕ್ಕಿದೆ.
ಇದನ್ನೂ ಓದಿ: Karnataka Politics : ಮೇಲ್ಮನೆ ನಾಮನಿರ್ದೇಶನ; ಡಿಕೆಶಿ ವಿರೋಧಕ್ಕೆ ಉಮಾಶ್ರೀ ಔಟ್?
ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಸ್ಪಷ್ಟ ಬಹುಮತದಿಂದ ಅಧಿಕಾರವನ್ನು ಹಿಡಿದರೂ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ತೀವ್ರ ಹೆಣಗಾಡಬೇಕಾಯಿತು. ತಮಗೇ ಮುಖ್ಯಮಂತ್ರಿ ಪಟ್ಟ ಸಿಗಬೇಕು ಎಂದು ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದು ಕುಳಿತಿದ್ದರಿಂದ ಸಿಎಂ ಆಯ್ಕೆ ವಿಚಾರವು ಸುದೀರ್ಘವಾಗಿ ಎಳೆಯಲ್ಪಟ್ಟಿತ್ತು. ಕೊನೆಗೆ ಸೋನಿಯಾಗಾಂಧಿ ಮಟ್ಟದಲ್ಲಿ ಪರಿಹಾರ ಸೂತ್ರ ಕಂಡುಕೊಂಡು ಸಿಎಂ ಆಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡರೆ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಎರಡೂವರೆ ವರ್ಷಕ್ಕೆ 50:50 ಅಧಿಕಾರ ಹಂಚಿಕೆ ಸೂತ್ರವನ್ನು ಮಾಡಲಾಗಿದ್ದು, ಬಳಿಕ ಡಿ.ಕೆ. ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಈ ನಡುವೆ ಸಿಎಂ ಆಪ್ತರು ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ಹೇಳಿಕೆ ನೀಡಿದ್ದರಿಂದ ಡಿಕೆ ಬ್ರದರ್ಸ್ ಗರಂ ಆಗಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಈಗ ಮತ್ತೆ ಅಧಿಕಾರ ಹಂಚಿಕೆಯ ಮಾತು ಕೇಳಿ ಬಂದಿದೆ. ಸಿಎಂ, ಡಿಸಿಎಂ ಆಯ್ಕೆ ವಿಚಾರವು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಕೆ.ಎಚ್. ಮುನಿಯಪ್ಪ ಹೇಳಿಕೆ ನೀಡಿದರೂ, ಅಧಿಕಾರ ಅನುಭವಿಸಿರುವ ಹಿರಿಯ ಸಚಿವರು ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು ಎಂಬ ಸಲಹೆಯು ಪಕ್ಷದ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಬೇರೆಯವರಿಗೆ ಸಿಗಲಿ ಅವಕಾಶ: ಕೆ.ಎಚ್. ಮುನಿಯಪ್ಪ
ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ, ಸಿಎಂ, ಡಿಸಿಎಂ ಆಯ್ಕೆ ಮಾಡುವುದು ಹೈಕಮಾಂಡ್ ನಿರ್ಧಾರವಾಗಿದೆ. ಆದರೆ, ಎರಡೂವರೆ ವರ್ಷದ ಬಳಿಕ ಹಿರಿಯ ಸಚಿವರು ಬೇರೆಯವರಿಗೆ ಅವಕಾಶ ನೀಡುವುದು ಒಳ್ಳೆಯದು. ನಾವು ಬೇರೆಯವರಿಗೆ ಅವಕಾಶವನ್ನು ಮಾಡಿಕೊಡಬೇಕು. ಈಗ ಹೊಸತಾಗಿ ಮಂತ್ರಿಯಾದವರು ಬಿಟ್ಟು ಉಳಿದ ಎಲ್ಲರೂ ಅಧಿಕಾರವನ್ನು ಅಧಿಕಾರ ಸಿಗದವರಿಗೆ ಬಿಟ್ಟುಕೊಡಬೇಕು ಎಂದು ಸಲಹೆ ನೀಡಿದರು. ಮುನಿಯಪ್ಪ ಅವರು ಈ ಹೇಳಿಕೆ ನೀಡುತ್ತಿದ್ದಂತೆ ಅಲ್ಲಿ ಸೇರಿದ್ದ ಕಾಂಗ್ರೆಸ್ ಶಾಸಕರು, ಕೆಪಿಸಿಸಿ ಜಿಲ್ಲಾಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕರ್ತರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಡಿಸಿಎಂ ಭಾಷಣದ ವೇಳೆ ನಿದ್ದೆಗೆ ಜಾರಿದ ಸಿಎಂ!
ಅಧಿಕಾರ ಹಂಚಿಕೆ ಹೀಗಾಗಬೇಕು ಎಂದ ಮುನಿಯಪ್ಪ
ಇನ್ನು ಪಕ್ಷದಲ್ಲಿ ಉಳಿದವರಿಗೂ ಅವಕಾಶಗಳು ಸಿಗಬೇಕಾಗಿದೆ. ಅಧಿಕಾರ ಹಂಚಿಕೆಯನ್ನು ಎರಡು ಭಾಗ ಮಾಡಬೇಕು. ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೂ ಮುಖ್ಯವಾದ ಸಮಿತಿಗಳಿಗೆ ನೇಮಕ ಮಾಡಬೇಕು. ಈ ಮೂಲಕ ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಕೊಟ್ಟಂತಾಗುತ್ತದೆ. ಇವರಿಂದ ತೆರವಾದ ಸ್ಥಾನಕ್ಕೆ ಉಳಿದ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕು ಎಂದು ಕೆ.ಎಚ್. ಮುನಿಯಪ್ಪ ಸಲಹೆ ನೀಡಿದರು.
ಇದನ್ನೂ ಓದಿ: Commission Politics : ಡಿಕೆಶಿ 15 ಪರ್ಸೆಂಟ್ ಕಮಿಷನ್ ಕೇಳಿಲ್ಲ; ಬಿಬಿಎಂಪಿ ಗುತ್ತಿಗೆದಾರರು ಉಲ್ಟಾ!
ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಜೆ. ಜಾರ್ಜ್, ವೀರಪ್ಪ ಮೊಯ್ಲಿ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ರಾಮಲಿಂಗಾ ರೆಡ್ಡಿ, ಜಿ.ಸಿ. ಚಂದ್ರಶೇಖರ ಇತರರು ವೇದಿಕೆಯಲ್ಲಿದ್ದರು.