| ವೀರೇಶ್ ಹಿರೇಮಠ, ಬೆಂಗಳೂರು
ಕೋವಿಡ್ ಸುಳಿಯಿಂದ ಹೊರಬರುವುದಕ್ಕೂ ಮೊದಲೇ ದೇಶಕ್ಕೆ ಈಗ ಮತ್ತೊಂದು ಹೆಮ್ಮಾರಿ ಕಾಲಿಟ್ಟಿದೆ. ಇದು ಭಾರತದಲ್ಲಷ್ಟೇ ಅಲ್ಲ ಪ್ರಪಂಚದೆಲ್ಲೆಡೆ ಆವರಿಸುತ್ತಿದ್ದು ಇದರ ಆತಂಕದಿಂದ ಸಿಲಿಕಾನ್ ಸಿಟಿ ಜನರು ಕೂಡ ಹೊರತಾಗಿಲ್ಲ. ಪಶ್ಚಿಮ ಆಫ್ರಿಕಾ, ಐರೋಪ್ಯ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್ ರಾಜ್ಯಕ್ಕೂ ಕಾಲಿಡುವ ಆತಂಕ ಎದುರಾಗಿದೆ. ಈಗಾಗಲೇ ದೇಶದಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಬೆಂಗಳೂರು-ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ಮಂಕಿಪಾಕ್ಸ್ ವಾರ್ಡ್ ಆಸ್ಪತ್ರೆ !
ದೆಹಲಿಯಲ್ಲಿ ಒಂದು ಹಾಗೂ ಕೇರಳದಲ್ಲಿ ಮೂರು ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಿರುವ ಆರೋಗ್ಯ ಇಲಾಖೆ ಇದನ್ನು ಎದುರಿಸಲು ಸಿದ್ಧತೆ ಆರಂಭಿಸಿದೆ. ಕೋವಿಡ್‌ನಷ್ಟು ವೇಗದಲ್ಲಿ ಮಂಕಿಪಾಕ್ಸ್ ವೈರಸ್ ಹರಡಲ್ಲ. ಹಾಗೆಂದು ನಿರ್ಲಕ್ಷ್ಯ ಮಾಡದ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದೆ. ಈಗಾಗಲೇ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಾದ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆ.ಸಿ. ಜನರಲ್ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಈ ವಾರ್ಡ್‌ಗಳಿಗೆ ಮಂಕಿಪಾಕ್ಸ್ ವಾರ್ಡ್‌ಗಳೆಂದು ಹೆಸರಿಡಲಾಗಿದೆ. ಎರಡು ಆಸ್ಪತ್ರೆಗಳಲ್ಲಿ ತಲಾ ನಾಲ್ಕು ಬೆಡ್‌ಗಳಿರುವ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಒಂದು ವೇಳೆ ಮಂಕಿಪಾಕ್ಸ್ ಸೋಂಕಿತರ ಸಂಖ್ಯೆಗಳಲ್ಲಿ ಏರಿಕೆಯಾದರೆ ಬೆಡ್‌ಗಳ ಸಂಖ್ಯೆ ಜಾಸ್ತಿ ಮಾಡಲಾಗುತ್ತದೆ.
ಇದನ್ನೂ ಓದಿ | Monkeypox: ಮಂಕಿ ಪಾಕ್ಸ್ ಭಾರತಕ್ಕೆ ಬಂದಿಲ್ಲ, ಆದರೂ ಎಲ್ಲೆಡೆ ಕಟ್ಟೆಚ್ಚರ ವಹಿಸಲು ಸೂಚನೆ
ಮಂಕಿ ಪಾಕ್ಸ್ ಎಂದರೇನು?
ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು, ಅದು ರೋಡಂಟ್ಸ್ ಮತ್ತು ಪ್ರೈಮೆಟ್‌ಗಳಂತಹ ಕಾಡು ಪ್ರಾಣಿಗಳಲ್ಲಿ ಹುಟ್ಟುತ್ತದೆ ಮತ್ತು ಸಾಂದರ್ಭಿಕವಾಗಿ ಮನುಷ್ಯರಿಗೆ ಹರಡುತ್ತದೆ. ಈ ರೋಗ ಮನುಷ್ಯರಿಗೆ ಹರಡಿರುವ ಪ್ರಕರಣಗಳು, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡು ಬಂದಿದ್ದು, ಅಲ್ಲಿ ಮಂಕಿಪಾಕ್ಸ್ ಸಾಮಾನ್ಯವಾಗಿದೆ ಎನ್ನಲಾಗುತ್ತಿದೆ.
ಇದು ಹೇಗೆ ಹರಡುತ್ತದೆ?
ಮಂಕಿ ಪಾಕ್ಸ್ ಸಾಮಾನ್ಯವಾಗಿ ವ್ಯಕ್ತಿಯು ಸೋಂಕಿತ ಪ್ರಾಣಿಯ ಸಂಪರ್ಕಕ್ಕೆ ಬಂದರೆ, ಅಂದರೆ ಸೋಂಕಿತ ಪ್ರಾಣಿ ಉಗುರಿನಿಂದ ಪರಚಿದರೆ, ಅದರ ಗಾಯದಿಂದ ಸೋರುತ್ತಿರುವ ನೀರು ಅಥವಾ ದ್ರವ ಮನುಷ್ಯನ ಚರ್ಮದ ಮೇಲೆ ಬಿದ್ದರೆ ಅಥವಾ ಸೋಂಕಿತ ಪ್ರಾಣಿ ಮನುಷ್ಯನನ್ನು ಕಚ್ಚಿದರೆ, ಹೀಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಕ್ಕೆ ಬರುವ ಮನುಷ್ಯನಿಗೆ ಅಂಟಿಕೊಳ್ಳುತ್ತದೆ.
ಮಂಕಿ ಪಾಕ್ಸ್ ಕಾಯಿಲೆಯ ಸೂಚನೆಗಳು ಮತ್ತು ರೋಗಲಕ್ಷಣಗಳು
ಜ್ವರ, ಮೈ ಕೈ ನೋವು, ತಲೆ ನೋವು, ಬೆನ್ನು ನೋವು, ಮೈ ನಡುಗುವುದು, ವಿಪರೀತ ದೈಹಿಕ ಆಯಾಸ, ದುಗ್ಧರಸ ಗ್ರಂಥಿಗಳು ಊದಿಕೊಂಡಿರುವುದು ಇತ್ಯಾದಿ. ಈ ಮೇಲಿನ ಎಲ್ಲ ರೋಗಲಕ್ಷಣಗಳು ಒಬ್ಬ ವ್ಯಕ್ತಿಯಲ್ಲಿ ಕಂಡು ಬಂದ ನಂತರದಲ್ಲಿ ಮುಖದ ಮೇಲೆ ಇದ್ದಕ್ಕಿದ್ದಂತೆ ದದ್ದುಗಳು ಉಂಟಾಗಲು ಪ್ರಾರಂಭವಾಗಿ ಕ್ರಮೇಣವಾಗಿ ಮೈ ತುಂಬ ಹರಡುತ್ತವೆ. ಮೊದಲಿಗೆ ಯಾವುದೇ ಬಣ್ಣದಿಂದ ಕೂಡಿಲ್ಲದ ಹಾಗೆ ಕಂಡು ಬರುವ ದದ್ದುಗಳು ಆನಂತರದಲ್ಲಿ ಗಟ್ಟಿಯಾಗುತ್ತವೆ, ದಪ್ಪ ಆಗುತ್ತವೆ ಜತೆಗೆ ಅವುಗಳಲ್ಲಿ ನೀರು ಸಹ ತುಂಬಿಕೊಳ್ಳುತ್ತದೆ. ಕೆಲವೊಮ್ಮೆ ಕೀವು ಸಹ ತುಂಬಿಕೊಳ್ಳುತ್ತದೆ.
ಆರೋಗ್ಯ ಇಲಾಖೆ ಕೈಕೊಂಡ ಕ್ರಮಗಳು
- ಸರ್ಕಾರಿ ಆಸ್ಪತ್ರೆಯಲ್ಲಿ ತಲಾ ಒಂದೊಂದು ಐಸೂಲೇಷನ್ ವಾರ್ಡ್ ಓಪನ್
- ವಿದೇಶದಿಂದ ಬರುವವರಿಗೆ ಸೋಂಕಿನ ಲಕ್ಷಣವಿದ್ದರೆ ಐಸೂಲೇಟ್‌ಗೆ ಶಿಫ್ಟ್.
- ಏರ್ ಪೋರ್ಟ್‌ಗಳಲ್ಲಿ ಸರ್ವಲೆನ್ಸ್ ಚುರುಕುಗೊಳಿಸಲು ಡಿಎಚ್ಒಗಳಿಗೆ ಸೂಚನೆ
- ರಾಜ್ಯದ ಯಾವುದಾದರೂ ಆಸ್ಪತ್ರೆಯಲ್ಲಿ ಈ ರೋಗ ಲಕ್ಷಣ ಇರುವ ರೋಗಿಗಳು ಪತ್ತೆಯಾದರೆ ಅಧಿಕಾರಿಗಳಿಗೆ ತಿಳಿಸಲು ಸೂಚನೆ
- ಸೋಂಕಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವುದು
- ಹೊರ ರಾಜ್ಯದ ಪ್ರಯಾಣಿಕರ ಮೇಲೆ ಗಮನ ಹರಿಸಲು ಅಧಿಕಾರಿಗಳಿಗೆ ಸೂಚನೆ
- ರಾಜ್ಯದ DHO ಮತ್ತು CHO ಹಾಗೂ ಜಿಲ್ಲಾ ಆಸ್ಪತ್ರೆಗಳ ನಿರ್ದೇಶಕರ ಜತೆ ಸಭೆ
- ಮಂಕಿಪಾಕ್ಸ್ ನಿಯಂತ್ರಣಕ್ಕೆ ಸಲಹೆ, ಸೂಚನೆ ನೀಡಿರುವ ಆರೋಗ್ಯ ಇಲಾಖೆ
- ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ಎರಡು ಬೆಡ್‌ಗಳ ವಾರ್ಡ್ ಮೀಸಲಿರಿಸಲು ಸೂಚನೆ
ಮಂಕಿ ಪಾಕ್ಸ್ ಬಗ್ಗೆ ಭಯ ಬೇಡ
ಪಶ್ಚಿಮ ಆಫ್ರಿಕಾ, ಯುರೋಪ್ ರಾಷ್ಟ್ರಗಳಲ್ಲಿ ಭಾರಿ ಪ್ರಮಾಣದಲ್ಲಿ ಮಂಕಿ ಪಾಕ್ಸ್ ಕಾಯಿಲೆ ಕಂಡು ಬಂದಿದೆ. ಒಟ್ಟು ದೇಶದಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಮಂಕಿಪಾಕ್ಸ್‌ನಿಂದ ಯಾರೂ ಆತಂಕ ಪಡುವುದು ಬೇಡ. ಇದು ಒಬ್ಬರಿಂದ ಒಬ್ಬರಿಗೆ ಹರಡಲ್ಲ. ರೋಗ ಲಕ್ಷಣಗಳು ಇದರೆ ಟೆಸ್ಟ್ ಮಾಡಿಸಿಕೊಳ್ಳಿ. ಇದಕ್ಕೆ ಚಿಕಿತ್ಸೆ ಇದೆ ಭಯಪಡುವ ಅಗತ್ಯವಿಲ್ಲವೆಂದು ಎಂದು ಬೆಂಗಳೂರಿನ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ರಾಧಾಕೃಷ್ಣ ತಿಳಿಸಿದ್ದಾರೆ.
ಇದನ್ನೂ ಓದಿ | ದೆಹಲಿಗೂ ಬಂತು ಮಂಕಿಪಾಕ್ಸ್; ವಿದೇಶ ಪ್ರಯಾಣವನ್ನೇ ಮಾಡದವನಿಗೆ ಸೋಂಕು