Site icon Vistara News

Serial murder | ತಾರತಮ್ಯ, ಧರ್ಮಾಧರಿತ ರಾಜಕಾರಣ ವಿರುದ್ಧ ಡಿವೈಎಫ್‌ಐ ಮನೆ ಮನೆ ಅಭಿಯಾನ

Mane mane Abhiyana

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆ ರಾಜಕಾರಣ, ಸರಕಾರ ಹಾಗೂ ಶಾಸಕರುಗಳ ಧರ್ಮಾಧಾರಿತ ತಾರತಮ್ಯ, ಕೊಲೆಗೀಡಾದವರ, ಜೈಲು ಪಾಲಾದವರ ಪೋಷಕರ ನೋವು, ಮತ್ತು ಜಿಲ್ಲೆಯಲ್ಲಿ ಹಿಂದು, ಮುಸ್ಲಿಂ ಸೌಹಾರ್ದತೆಯ ಅಗತ್ಯಗಳನ್ನು ಮುಂದಿಟ್ಟು ಡಿವೈಎಫ್ಐ ಘಟಕಗಳು ʻಮನೆ ಮನೆ ಅಭಿಯಾನʼ ಕೈಗೊಂಡಿವೆ.

ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು, ಬೆಳ್ಳಾರೆ ಕಳಂಜದ ಮಸೂದ್‌ ಮತ್ತು ಸುರತ್ಕಲ್‌ನ ಮೊಹಮ್ಮದ್‌ ಫಾಝಿಲ್‌ ಅವರು ಹತ್ತೇ ದಿನಗಳಲ್ಲಿ ಕೊಲೆಯಾಗಿದ್ದಾರೆ. ಆದರೆ, ಅವರಿಗೆ ಪರಿಹಾರ ನೀಡುವುದು, ಕುಟುಂಬಕ್ಕೆ ಸಾಂತ್ವನ ಹೇಳುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಸರಕಾರ ತಾರತಮ್ಯ ಮಾಡುತ್ತಿದೆ ಎಂದು ಡಿವೈಎಫ್‌ಐ ಆರೋಪಿಸಿದೆ.

ಸುರತ್ಕಲ್‌ನಲ್ಲಿ ಫಾಝಿಲ್ ಕೊಲೆ ನಡೆದು ಹತ್ತು ದಿನಗಳೇ ಕಳೆದಿವೆ. ಕೊಲೆಯಲ್ಲಿ ನೇರ ಭಾಗಿಗಳಾದ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಕೊಲೆ ಮಾಡುವಂತೆ ಕುಮ್ಮಕ್ಕು ಕೊಟ್ಟವರು ಇನ್ನೂ ಹೊರಗೆ ಇದ್ದು ಅವರನ್ನೂ ಕಾನೂನು ಶಿಕ್ಷಗೆ ಒಳಪಡಿಸಬೇಕು ಎಂದು ಆಗ್ರಹಿಸಲಾಗಿದೆ.

ಸರಕಾರ ಫಾಝಿಲ್ ಕುಟುಂಬಕ್ಕೆ ನಿಯಮ ಪ್ರಕಾರ ನೀಡಬೇಕಾದ ಪರಿಹಾರದ ಕುರಿತು ಮಾತಾಡುತ್ತಿಲ್ಲ. ಕೊಲೆಯಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರಕಾರ ಒದಗಿಸಿದ ಪರಿಹಾರ ಧನದಂತೆ, ಫಾಝಿಲ್ ಹಾಗೂ ಮಸೂದ್ ಕುಟುಂಬಕ್ಕೂ ಪರಿಹಾರ ನೀಡಬೇಕು . ಈ ಕುರಿತು ಮುಖ್ಯಮಂತ್ರಿಗಳಾಗಲಿ, ಉಸ್ತುವಾರಿ ಸಚಿವರು, ಶಾಸಕರುಗಳಾಗಲಿ ಮಾತಾಡದೆ ಮೌನ ವಹಿಸಿರುವುದು, ತಾರತಮ್ಯ ಆಚರಿಸುವುದು ಎಷ್ಟು ಸರಿ ಎಂದು ಡಿವೈಎಫ್ ಐ ಪ್ರಶ್ನೆ ಮಾಡಿದೆ.

ನಿಷೇಧಾಜ್ಞೆ ನೆಪದಲ್ಲಿ ಬೀದಿಗಿಳಿದು ನ್ಯಾಯ ಕೇಳಲು ಅವಕಾಶಗಳಿಲ್ಲ. ಹೀಗಾಗಿ ಮನೆಮನೆ ಅಭಿಯಾನದ‌ ಮೂಲಕ ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯಲಾಗುತ್ತಿದೆ ಎಂದಿರುವ ಡಿವೈಎಫ್‌ಐ ಫಾಝಿಲ್, ಮಸೂದ್ ಮನೆಗೆ ಕನಿಷ್ಠ ಶಾಸಕರಾದರೂ ಸಾಂತ್ವನದ ಭೇಟಿ ನೀಡಬೇಕು, ಪರಿಹಾರ ಧನ ಒದಗಿಸಬೇಕು, ಪ್ರವೀಣ್ ನೆಟ್ಟಾರು, ಫಾಝಿಲ್ ಕೊಲೆಯ ಹಿಂದಿನ ಸೂತ್ರಧಾರರ ಬಂಧನ ಆಗಬೇಕು, ರಹಸ್ಯಗಳು ಬಯಲಾಗಬೇಕು ಎಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.

“ಬೀದಿಗಿಳಿಯಲು, ಪ್ರತಿಭಟನೆ ನಡೆಸಲು ಅನುಮತಿ ಇಲ್ಲದಿದ್ದರೂ ಮನೆಗಳ ಒಳಗಡೆ ಕುಳಿತಾದರೂ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು. ಸಮಾಜದ ಗಮನ ಸಳೆಯಬೇಕು, ಆಳುವವರ ಮೇಲೆ ʻರಾಜಧರ್ಮʼದ ಒತ್ತಡ ಹೇರಬೇಕು. ಇಲ್ಲದಿದ್ದಲ್ಲಿ ಚು‌‌ನಾವಣೆಯ ಹೊಸ್ತಿಲಲ್ಲಿ ಮತ್ತಷ್ಟು ಅನಾಹುತ, ಮತ್ತಷ್ಟು ಕಣ್ಣೀರಿಗೆ ಸಾಕ್ಷಿಯಾಗಬೇಕಾದೀತು” ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಎಚ್ಚರಿಸಿದ್ದಾರೆ.

ಡಿವೈಎಫ್‌ಐ ಕಾರ್ಯಕರ್ತರು ಸರಕಾರ ತಾರತಮ್ಯ, ಜನರಿಗೆ ನ್ಯಾಯ ಮತ್ತು ಧರ್ಮಾಧರಿತ ರಾಜಕಾರಣ ಮಾಡದೆ ರಾಜಧರ್ಮ ಪಾಲಿಸಬೇಕು ಎಂದು ಆಗ್ರಹಿಸುವ ಫಲಕಗಳನ್ನು ಹಿಡಿದುಕೊಂಡು ಮನೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ Praveen Nettaru | ಪ್ರವೀಣ್‌ ಮನೆಗೆ ಹೋದ ಕಾಂಗ್ರೆಸ್‌ ನಾಯಕರಿಗೆ ತೀವ್ರ ತರಾಟೆ, ಧಿಕ್ಕಾರದ ಕೂಗು

Exit mobile version