ಬಳ್ಳಾರಿ : ತಂದೆ ಮಾಡಿದ ಸಾಲಕ್ಕೆ ಮಕ್ಕಳನ್ನು ಜೀತಕ್ಕೆ ಇಟ್ಟುಕೊಂಡಿದ್ದ ಅಮಾನವೀಯ ಘಟನೆಯ ಆರೋಪದ ಹಿನ್ನೆಲೆಯಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬ್ರೂಸ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ರೂಪನಗುಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ನಗರದ ನಾಗರಾಜ್ ಎಂಬ ವ್ಯಕ್ತಿ ಮುನ್ನಿ ಹಾಗೂ ಅವರ ಪತಿ ದಾದು ಎಂಬುವರ ಬಳಿ 30 ಸಾವಿರ ರೂ. ಸಾಲ ಮಾಡಿದ್ದರು. ಎರಡು ತಿಂಗಳ ಹಿಂದೆ ಅನಾರೋಗ್ಯದಿಂದ ನಾಗರಾಜ್ ಮೃತಪಟ್ಟಿದ್ದಾನೆ.
ಆದರೆ 30 ಸಾವಿರ ರೂ. ಸಾಲ ವಾಪಸ್ ಕೊಡಲು ನಾಗರಾಜ್ ಪತ್ನಿ ಸುನಿತಾ ಪರದಾಡಿ, ಅನಿವಾರ್ಯ ಎಂಬಂತೆ ಮುನ್ನಿ ಹಾಗೂ ಬೀಬಿ ಎನ್ನುವ ಮಹಿಳೆಯರ ಮನೆಯಲ್ಲಿ ಇಬ್ಬರು ಮಕ್ಕಳು ಪಾತ್ರೆ ತೊಳೆಯುವ ಕೆಲಸ ಮಾಡಲು ಜೀತಕ್ಕೆ ಬಿಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | ಅಕ್ರಮ ಮರಳು ದಂಧೆ ಮಾಹಿತಿ ಕೊಟ್ಟ ವಿದ್ಯಾರ್ಥಿಗೆ ಚಿತ್ರಹಿಂಸೆ, ಜಿಲ್ಲಾಧಿಕಾರಿಗೆ ದೂರು
ಚಿತ್ರಹಿಂಸೆಯ ಆರೋಪ…
9 ವರ್ಷದ ಬಾಲಕಿ ಹಾಗೂ 15 ವರ್ಷದ ಬಾಲಕನನ್ನು ಇಟ್ಟುಕೊಂಡು ಕೆಲಸ ನೆಪದಲ್ಲಿ ಹೊಡೆಯುವುದು, ಬರೆ ಹಾಕಿ ಸುಡುವುದು ಸೇರಿದಂತೆ ಚಿತ್ರಹಿಂಸೆ ಮಾಡಿದ್ದಾರೆಂಬುದು ಮಕ್ಕಳ ತಾಯಿಯ ಆರೋಪವಾಗಿದೆ.
ಮಹಿಳಾ ಕಾರ್ಯಕರ್ತೆಯರಿಂದ ಪತ್ತೆ…
ಗುರುವಾರ ತಡ ರಾತ್ರಿ ಬಳ್ಳಾರಿ ಕಾಂಗ್ರೆಸ್ ನ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಅವರು ಮಹಿಳಾ ಕಾರ್ಯಕರ್ತರೊಂದಿಗೆ ಮುನ್ನಿಯವರ ಮನೆಗೆ ತೆರಳಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮನೆಯವರೊಂದಿಗೆ ವಾಗ್ವಾದ
ಕೂಡಲೇ ಸುತ್ತಮುತ್ತಲ ಜನರು ಜಮಾವಣೆಯಾಗಿದ್ದರು. ಈ ಸಂದರ್ಭದಲ್ಲಿ ಮುನ್ನಿ ಮನೆಯವರು ಮತ್ತು ಮಂಜುಳ ಮಧ್ಯೆ ವಾಗ್ವಾದವಾಗಿದೆ. ಪೊಲೀಸರು ಆಗಮಿಸಿ ಸ್ಥಳೀಯರಿಂದ ಮತ್ತು ಮಕ್ಕಳ ತಾಯಿಯಿಂದ ವಾಸ್ತವ ಮಾಹಿತಿಯನ್ನು ಪಡೆದಿದ್ದಾರೆ.
ಆರೋಪವನ್ನು ಒಪ್ಪದ ಮುನ್ನಿ ಕುಟುಂಬ
ಮಕ್ಕಳನ್ನು ನಮ್ಮ ಮನೆಯಲ್ಲಿ ಬಿಡು ಅಂತಾ ಹೇಳಲಿಲ್ಲ. ಸಾಲ ಕಟ್ಟುವವರೆಗೂ ಇಲ್ಲೆ ಇರಲಿ ಎಂದು ಅವರೇ ಬಿಟ್ಟಿದ್ದರು. ಅವರಿಗೆ ಊಟ ಹಾಕಿ ನಾವೇ ಇಟ್ಟುಕೊಂಡಿದ್ದೇವೆ ಎಂದು ವಾದ ಮಾಡುತ್ತಿದ್ದಾರೆ.
ನಾಲ್ವರ ಮೇಲೆ ದೂರು ದಾಖಲು
ಮಕ್ಕಳ ತಾಯಿ ನೀಡಿರುವ ದೂರಿನ ಮೇರೆಗೆ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಮುನ್ನಿ, ದಾದು ಸೇರಿದಂತೆ ನಾಲ್ಕು ಜನರ ಮೇಲೆ ಪ್ರಕರಣ ದಾಖಲಾಗಿದೆ. ಮಕ್ಕಳನ್ನು ರಕ್ಣಣೆ ಮಾಡಲಾಗಿದೆ. ಈ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Indore ragging | ರ‍್ಯಾಗಿಂಗ್ ಹೆಸರಿನಲ್ಲಿ ಅಸಹಜ ಸೆಕ್ಸ್‌ಗೆ ಒತ್ತಾಯ: ಇಂದೋರ್ ವಿದ್ಯಾರ್ಥಿಗಳ ದೂರು