Site icon Vistara News

Congress Guarantee: ಸೇವಾ ಸಿಂಧುಗೆ ʼಗ್ಯಾರಂಟಿʼ ಲೋಡ್‌ ಆತಂಕ: ಕೋಟ್ಯಂತರ ಜನರ ಅರ್ಜಿ ಭಾರ ತಡೆಯಬಲ್ಲದೇ?

#image_title

ಬೆಂಗಳೂರು: ಈಗಾಗಲೆ ಕಾಂಗ್ರೆಸ್‌ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಚಾಲನೆ ನೀಡಿದೆ. ಸರ್ಕಾರಿ ಆದೇಶಗಳಾಗಿ ಮಾರ್ಗಸೂಚಿಯೂ ಬಿಡುಗಡೆಯಾಗಿವೆ. ಆದರೆ ಯೋಜನೆಗಳ ಲಾಭ ಪಡೆಯಲು ಅರ್ಜಿ ಸಲ್ಲಿಕೆ ಮಾಡಬೇಕಾಗಿರುವ ಸೇವಾ ಸಿಂಧು ಪೋರ್ಟಲ್‌ ಸಾಮರ್ಥ್ಯದ ಕುರಿತು ಅನುಮಾನಗಳು ಆರಂಭವಾಗಿವೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಆತಂಕ ವ್ಯಕ್ತವಾಗಿದೆ.

ಮಾಸಿಕ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆ, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ, ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆ, ಬಿಪಿಎಲ್‌ ಕಾರ್ಡ್‌ದಾರರಿಗೆ ಮಾಸಿಕ 10 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಹಾಗೂ ನಿರುದ್ಯೋಗ ಪದವೀಧರರಿಗೆ ಮಾಸಿಕ ಭತ್ಯೆ ನೀಡುವ ಯುವನಿಧೀ ಯೋಜನೆಗಳಿಗೆ ಈಗಾಗಲೆ ಆದೇಶ ಹೊರಡಿಸಲಾಗಿದೆ.

3.5 ಕೋಟಿ ಜನರಿಗೆ ಅನುಕೂಲ
ಮೊದಲಿಗೆ ಶಕ್ತಿ ಯೋಜನೆಯು ಚಾಲನೆಗೊಳ್ಳಲಿದ್ದು, ಸೇವಾ ಸಿಂಧು ಪೋರ್ಟಲ್‌ ಮೂಲಕ ಮಹಿಳೆಯರು ಅರ್ಜಿ ಸಲ್ಲಿಸಬೇಕು. ನಂತರದ ಎಲ್ಲ ಯೋಜನೆಳಿಗೂ ಸೇವಾ ಸಿಂಧು ಮೂಲಕವೇ ಅರ್ಜಿ ಪಡೆಯಲು ನಿರ್ಧರಿಸಲಾಗಿದೆ. ಆದರೆ ಇದೀಗ ಸೇವಾ ಸಿಂಧು ಪೋರ್ಟಲ್‌ ಸಾಮರ್ಥ್ಯ ಅಷ್ಟು ಪ್ರಮಾಣದಲ್ಲಿ ಇಲ್ಲ.

2018ರಲ್ಲಿ ಸೇವಾ ಸಿಂಧು ಯೋಜನೆ ಆರಂಭವಾದಾಗ ಅದರಲ್ಲಿ 23 ಯೋಜನೆಗಳ ಸೇವೆಯನ್ನು ಪಡೆಯಲು ಅವಕಾಶವಿತ್ತು. ವಿವಿಧ ಇಲಾಖೆಗಳ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಜನರು ಅಲೆದಾಡಬೇಕಾಗಿದ್ದ ಸ್ಥಿತಿಯನ್ನು ಇದು ತಪ್ಪಿಸಿತು. ಇದರಿಂದ ಉತ್ತೇಜಿತಗೊಂಡ ಸರ್ಕಾರ ಅನೇಕ ಇಲಾಖೆಗಳ ಯೋಜನೆಗಳನ್ನು ಇದರಲ್ಲಿ ಸೇರಿಸುತ್ತ ಬಂದಿದೆ. ಕೇವಲ ಐದು ವರ್ಷದಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಒಟ್ಟು 88 ಇಲಾಖೆಗಳ 866 ಸೇವೆಗಳಿಗೆ ಇಲ್ಲಿಂದ ಅರ್ಜಿ ಸಲ್ಲಿಸಬಹುದಾಗಿದೆ. ಇದೀಗ ಪ್ರತಿದಿನ ಸರಾಸರಿ 50 ಸಾವಿರ ಬಳಕೆದಾರರು ಸೇವಾಸಿಂಧು ಪೋರ್ಟಲ್‌ಗೆ ಭೇಟಿ ನೀಡುತ್ತಿದ್ದಾರೆ. ಐದು ವರ್ಷದಲ್ಲಿ ಒಟ್ಟು 3.5 ಕೋಟಿ ಜನರಿಗೆ ಪೋರ್ಟಲ್‌ ಮೂಲಕ ಸೇವೆ ಲಭಿಸಿದೆ.

ಹಲವು ಪಟ್ಟು ಹೆಚ್ಚಳ:
ಸದ್ಯ ನಾಗರಿಕರು ಭೇಟಿ ನೀಡುತ್ತಿರುವ ಪ್ರಮಾಣಕ್ಕೆ ಸೇವಾ ಸಿಂಧು ಪೋರ್ಟಲ್‌ ಸರ್ವರ್‌ ಸಾಮರ್ಥ್ಯ ಸರಿಯಾಗಿದೆ. ಯಾವುದೇ ತೊಂದರೆ ಇಲ್ಲದೆ ಸೇವೆ ಪಡೆಯಬಹುದಾಗಿದೆ. ಆದರೆ ಇದೀಗ ಸರ್ಕಾರ ಜಾರಿ ಮಾಡುತ್ತಿರುವ ಗ್ಯಾರಂಟಿ ಯೋಜನೆಗಳ ಕಾರಣಕ್ಕೆ ಹತ್ತಾರು ಪಟ್ಟು ಹೆಚ್ಚು ಜನರು ಪೋರ್ಟಲ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ.

ರಾಜ್ಯದೆಲ್ಲೆಡೆ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ಎಂದರೆ ಗರಿಷ್ಠ ಎಂದರೆ ರಾಜ್ಯದ ಮೂರು ಕೋಟಿಗೂ ಹೆಚ್ಚು ಮಹಿಳೆಯರು ಇದಕ್ಕೆ ಅರ್ಹರು. ಅದೇ ರೀತಿ ರಾಜ್ಯದಲ್ಲಿರುವ ಒಂದು ಕೋಟಿಗೂ ಹೆಚ್ಚು ಕುಟುಂಬದಿಂದ ತಲಾ ಒಬ್ಬ ಮಹಿಳೆಯು ಗೃಹಲಕ್ಷ್ಮಿ ಯೋಜನೆಗೆ ಅರ್ಹರು. ರಾಜ್ಯದ 2.14 ಕೋಟಿ ವಿದ್ಯುತ್‌ ಆರ್‌ಆರ್‌ ಸಂಖ್ಯೆ ಇರುವ ಮನೆಗಳು ಗೃಹಜ್ಯೋತಿ ಯೋಜನೆಗೆ ಅರ್ಹವಾಗಿವೆ. ಇದರ ಜತೆಗೆ ಒಂದು ಕೋಟಿಗೂ ಹೆಚ್ಚು ಪಡಿತರ ಅಕ್ಕಿಗೆ ಹಾಗೂ ಲಕ್ಷಾಂತರ ಸಂಖ್ಯೆಯ ಯುವಕರು ನಿರುದ್ಯೋಗ ಭತ್ಯೆಗೆ ಅರ್ಹರಾಗಲಿದ್ದಾರೆ. ಇದೆಲ್ಲವನ್ನೂ ಲೆಕ್ಕ ಮಾಡಿದರೆ ಪ್ರತಿದಿನದ ಸರಾಸರಿಯಲ್ಲಿ ಕನಿಷ್ಟ ಏಳೆಂಟು ಪಟ್ಟು ಹೆಚ್ಚು ಜನರು ಸೇವಾಸಿಂಧು ಪೋರ್ಟಲ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಸೇವಾ ಸಿಂಧು ಪೋರ್ಟಲ್‌ ಅನ್ನು ಕರ್ನಾಟಕ ಸರ್ಕಾರದ ಇ ಆಡಳಿತ ಇಲಾಖೆಯ ʼಕರ್ನಾಟಕ ಎಲೆಕ್ಟ್ರಾನಿಕ್‌ ಡೆಲಿವರಿ ಆಫ್‌ ಸಿಟಿಜನ್‌ ಸರ್ವೀಸಸ್‌ (KEDCS) ನಿರ್ದೇಶನಾಲಯ ಈ ಪೋರ್ಟಲ್‌ ನಿರ್ವಹಣೆ ಮಾಡುತ್ತಿದೆ.

ಗೃಹಲಕ್ಷ್ಮಿ ಯೋಜನೆ ಜಾರಿ ಕುರಿತು ಸಿಎಂ ಸಿದ್ದರಾಮಯ್ಯ ಅಧಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಆಗಸ್ಟ್‌ 1 ರಂದು ಗೃಹಜ್ಯೋತಿ ಯೋಜನೆಗೆ ಚಾಲನೆ ಸಿಗಲಿದೆ. ಆಗಸ್ಟ್‌ 17-18 ರಂದು ಗೃಹಲಕ್ಷ್ಮಿ ಯೋಜನೆ ಚಾಲನೆಗೆ ತಯಾರಿ ಮಾಡಿಕೊಳ್ಳಿ. ಅರ್ಜಿ ಸಲ್ಲಿಸಿದ ನಂತರ ಅನುಮೋದನೆ ಪ್ರಕ್ರಿಯೆ ಸರಳವಾಗಿರಲಿ. ಸುಖಾಸುಮ್ಮನೆ ತಿರಸ್ಕರಿಸುವಂತೆ ಇರಬಾರದು. ಒಂದೇ ಸಾರಿ ಕೋಟ್ಯಂತರ ಜನರು ಅರ್ಜಿ ಸಲ್ಲಿಕೆಗೆ ಬಂದಾಗ ಸರ್ವರ್‌ ಹ್ಯಾಂಗ್‌ ಆಗದಂತೆ ಸೇವಾ ಸಿಂಧು ಪೋರ್ಟಲ್‌ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ ಎಂದು ಇ ಆಡಳಿತ ಇಲಾಖೆ ಅಧೀಕಾರಿಗಳಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ.

5 ಲಕ್ಷಕ್ಕೆ ಹೆಚ್ಚಳ:
ಸರ್ಕಾರದ ನಿರ್ದೇಶನದ ಮೇರೆಗೆ ಅಧಿಕಾರಿಗಳು ಈಗಾಗಲೆ ಕಾರ್ಯಪ್ರವೃತ್ತವಾಗಿದ್ದಾರೆ. ಪ್ರತಿದಿನ ಸುಮಾರು 5 ಲಕ್ಷ ಜನರನ್ನು ನಿರ್ವಹಣೆ ಮಾಡುವಷ್ಟು ಸಾಮರ್ಥ್ಯಕ್ಕೆ ಹೆಚ್ಚಳ ಮಾಡಲು ಮುಂದಾಗಿದ್ದಾರೆ. ಹೆಚ್ಚಿನ ಸಾಮರ್ಥ್ಯದ ಸರ್ವರ್‌ಗೆ ಪೋರ್ಟಲ್‌ ಅನ್ನು ವರ್ಗಾವಣೆ ಮಾಡುವ ಪ್ರಕ್ರಿಯೆ ಒಂದೆರಡು ದಿನದಲ್ಲಿ ಪೂರ್ಣವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Congress Guarantee: ಇದು ಸರ್ಕಾರ, ಸರ್ಕಾರ ನಡೆಸೋದು ನಾವು: ಗ್ಯಾರಂಟಿ ಕಂಡೀಷನ್‌ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಉತ್ತರ

Exit mobile version