ವಿಧಾನಸಭೆ: ರಾಜ್ಯದಲ್ಲಿ ಈಗಾಗಲೆ ಉನ್ನತ ಶಿಕ್ಷಣ ಸಂಸ್ಥೆಗಳು ಈಗಾಗಲೆ ದುಃಸ್ಥಿತಿಯಲ್ಲಿದ್ದರೂ, ಅಪಾರ ಭ್ರಷ್ಟಾಚಾರ ಕಣ್ಮುಂದೆ ಇದ್ದರೂ ಮತ್ತೆ ಸರ್ಕಾರ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಮುಂದಾಗಿದೆ ಎಂದು ವಿಧಾನಸಭೆಯಲ್ಲಿ ಬುಧವಾರ ಸಾಕಷ್ಟು ಚರ್ಚೆ ನಡೆಯಿತು.
ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ತಲಾ ಒಂದು ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಕೊಡಗು, ಚಾಮರಾಜನಗರ, ಹಾಸನ, ಹಾವೇರಿ, ಬೀದರ್ ಹಾಗೂ ಕೊಪ್ಪಳದಲ್ಲಿ ತಲಾ ಒಂದು ವಿಶ್ವವಿದ್ಯಾಲಯ ಹಾಗೂ ಮಂಡ್ಯದ ಯೂನಿಟರಿ ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ವಿಸ್ತಾರ ಮಾಡುವ ಮಸೂದೆಗೆ ಒಪ್ಪಿಗೆ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಸ್ತಾವನೆ ಸಲ್ಲಿಸಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈಗಿರುವ ವಿಶ್ವವಿದ್ಯಾಲಯಗಳ ಸ್ಥಿತಿ ಏನು? ಅವುಗಳು ಈಗಾಗಲೆ ಭಯಾನಕ ಪರಿಸ್ಥಿತಿಯಲ್ಲಿವೆ. ಅವುಗಳಿಗೆ ಮೂಲಸೌಕರ್ಯ ಇಲ್ಲ, ವಿದ್ಯಾಭ್ಯಾಸ ಗುಣಮಟ್ಟವೂ ಇಲ್ಲ. ಕರ್ನಾಟಕ ಸೇರಿ ದೇಶದ ವಿವಿಧೆಡೆಯಿಂದ ಕೆನಡಾ ಸೇರಿ ವಿವಿಧೆಡೆಗೆ ಶಿಕ್ಷಣಕ್ಕೆ ತೆರಳುತ್ತಿದ್ದಾರೆ ಎಂದರು.
ಕಾಂಗ್ರೆಸ್‌ನ ಯು.ಟಿ. ಖಾದರ್ ಮಾತನಾಡಿ, ಇಂದು ವಿಶ್ವವಿದ್ಯಾಲಯಗಳಲ್ಲಿ ಅನೇಕ ದೋಷಗಳಿವೆ. ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯನ್ನು ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ನಡೆಸುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಕುರಿತಂತೆಯೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.
ಕಾಂಗ್ರೆಸ್‌ನ ಎಂ.ಬಿ. ಪಾಟೀಲ್ ಮಾತನಾಡಿ, ಈಗಾಗಲೆ ಕರ್ನಾಟಕ ವಿವಿ, ಮಹಿಳಾ ವಿವಿ ಸೇರಿ ಅನೇಕ ವಿವಿಗಳು ಸಂಕಷ್ಟದಲ್ಲಿವೆ. ಯಾವುದೇ ಮೂಲಸೌಕರ್ಯ ಇಲ್ಲದೆ ಸೊರಗುತ್ತಿವೆ. ಇಂತಹ ಸಮಯದಲ್ಲಿ ಹೊಸ ವಿವಿ ಏಕೆ ಎಂದರು.
ಜೆಡಿಎಸ್‌ನ ಎ.ಟಿ. ರಾಮಸ್ವಾಮಿ ಮಾತನಾಡಿ, ಈ ಹಿಂದೆ ಸರ್ಕಾರವೇ ಗಣ್ಯರನ್ನು ಗುರುತಿಸಿ ಕುಲಪತಿ ಆಗುವಂತೆ ಕೋರುತ್ತಿತ್ತು. ಆದರೆ ಈಗ ವಿಸಿಗಳಾಗಲು ಸರ್ಕಾದ ಕಾಲಿಗೆ ಬೀಳುವ ಪರಿಸ್ಥಿತಿ ಇದೆ ಎಂದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ಈಶ್ವರ ಖಂಡ್ರೆ, ವಿಸಿಗಳ ನೇಮಕಾತಿಗೆ ಐದು, ಹತ್ತು, ಇಪ್ಪತ್ತು ಕೋಟಿ ರೂ. ರೇಟ್ ಫಿಕ್ಸ್ ಆಗಿದೆ ಎಂದರು.
ಬಿಜೆಪಿಯ ಅರವಿಂದ ಬೆಲ್ಲದ್ ಮಾತನಾಡಿ, ವಿಸಿಗಳಾಗಲು ಇಷ್ಟೊಂದು ಬೇಡಿಕೆ ಇರುವುದೇ ಅವರಿಗೆ ನೇಮಕಾತಿ ಹಾಗೂ ಕಟ್ಟಡ ನಿರ್ಮಾಣ ಅಧಿಕಾರ ಇರುವುದರಿಂದ. ಹಾಗಾಗಿ ನೇಮಕಾತಿ ಮತ್ತು ನಿರ್ಮಾಣ ಅಧಿಕಾರವನ್ನು ವಿಸಿಗಳಿಂದ ಹಿಂಪಡೆಯಬೇಕು, ಖಾಸಗಿ ವಿವಿಗಳೂ ಸೇರಿ ಸಮಾನ ಪರೀಕ್ಷಾ ನಿಯಮ ರೂಪಿಸಬೇಕು. ಆಗ ಮಾತ್ರ ಅಕಡೆಮಿಕ್ ಆಸಕ್ತಿ ಉಳ್ಳವರು ವಿಸಿಗಳಾಗಲು ಬರುತ್ತಾರೆ ಎಂದರು.
ಸ್ಪೀಕರ್ ಕಾಗೇರಿಯವರು ಮತ್ತೆ ಮಾತನಾಡಿ, ವಿಶ್ವವಿದ್ಯಾಯಲಗಳ ಗುಣಮಟ್ಟ ಹೆಚ್ಚಿಸುವ ಕೆಲಸ ಆಗುತ್ತಿಲ್ಲ. ಅನೇಕ ವರ್ಷ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ಕೆಲಸ ಮಾಡಿರುವುದರಿಂದ, ಈ ಸಮಸ್ಯೆಯನ್ನು ಅತ್ಯಂತ ನೋವಿನಿಂದ ಹೇಳುತ್ತಿದ್ದೇನೆ. ಪಿಎಚ್‌ಡಿ ಪಡೆಯುವಾಗಲೂ ಸುಲಿಗೆ ಮಾಡಲಾಗುತ್ತಿದೆ ಎಂದರು.
ಕಾಂಗ್ರೆಸ್‌ನ ಕೃಷ್ಣಬೈರೇಗೌಡ ಮಾತನಾಡಿ, ವಿಸಿಗಳ ನೇಮಕಾತಿ ಮಾಡುವಂತೆ ಇದೇ ಶಾಸಕರು ಸಚಿವರ ಬಳಿಗೆ ಬರುತ್ತಾರೆ. ನಾನು ಕೃಷಿ ಸಚಿವನಾಗಿದ್ದಾಗಲೂ ಅನೇಕ ಶಾಸಕರು ಬರುತ್ತಿದ್ದರು. ಇದೇ ಸಮಯದಲ್ಲಿ, ಏಳು ಹೊಸ ವಿವಿಗಳಿಗೆ ಕೇವಲ 14 ಕೋಟಿ ರೂ. ಮೀಸಲಿಡುವ ಮೂಲಕ ಸರ್ಕಾರ, ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಒಂದು ವಿವಿ ಸ್ಥಾಪನೆಗೆ ನೂರಾರು ಕೋಟಿ ರೂ. ಬೇಕಾಗುತ್ತದೆ. ಅಂತಹದ್ದರಲ್ಲಿ ಈ ವಿವಿಗಳು ಮತ್ತೆ ಅದೇ ಲೋಪಗಳಿಂದ ಬಳಲುತ್ತವೆ. ವಿವಿಗಳಲ್ಲಿ ನೇಮಕಾತಿ ಸೇರಿ ಅನೇಕ ವಿಚಾರಗಳಲ್ಲಿ ಕಂಡುಕೇಳರಿಯದಷ್ಟು ಭ್ರಷ್ಟಾಚಾರ ನಡೆದಿದೆ. ಇದೆಲ್ಲವೂ ಸಿಎಜಿ ವರದಿಗಳಲ್ಲೂ ಉಲ್ಲೇಖ ಆಗಿದೆ ಎಂದು ಹೇಳಿದರು.
ಕೊನೆಯದಾಗಿ ಮಾತನಾಡಿದ ಅಶ್ವತ್ಥನಾರಾಯಣ, ಪ್ರತಿ ಜಿಲ್ಲೆಯಲ್ಲೂ ವಿವಿಗಳನ್ನು ಸ್ಥಾಪಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು. ಹಿಂದಿನ ವಿವಿಗಳಂತೆ ಈ ʼನ್ಯೂ ಏಜ್ʼ ವಿವಿಗಳಲ್ಲ. ಇಲ್ಲಿ ಡೇಟಾ ಎಂಟ್ರಿಗೆ ಸಾವಿರಾರು ಜನರನ್ನು ತೆಗೆದುಕೊಳ್ಳಬೇಕಿಲ್ಲ, ಅಂಕಪಟ್ಟಿ ಮುದ್ರಣವೇ ಇಲ್ಲದೆ ಡಿಜಿಟಲ್ ರೂಪದಲ್ಲಿರುತ್ತದೆ. ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಹೊಸ ವಿವಿಗಳಿಗೆ ಎಲ್ಲ ಸೌಕರ್ಯ ನೀಡಲಾಗುತ್ತದೆ, ಮಸೂದೆಗೆ ಒಪ್ಪಿಗೆ ನೀಡಿ ಎಂದರು. ನಂತರ ಸದನದಲ್ಲಿ ಮಸೂದೆಗೆ ಒಪ್ಪಿಗೆ ನೀಡಲಾಯಿತು.
ಇದನ್ನೂ ಓದಿ | ಯಲಹಂಕದಲ್ಲಿ ಕ್ರೀಡಾ ವಿಶ್ವವಿದ್ಯಾಲಯ: ಕ್ರೀಡಾ ಸಚಿವ ನಾರಾಯಣಗೌಡ