Site icon Vistara News

Congress Guarantee: 7ನೇ ಗ್ಯಾರಂಟಿ ಸದ್ಯಕ್ಕಿಲ್ಲ ಎಂದ ಸಿದ್ದರಾಮಯ್ಯ: ಮುಂದಿನ ವರ್ಷ ಸ್ತ್ರೀಶಕ್ತಿ ಸಾಲಮನ್ನಾ ಭಾಗ್ಯ

women self help group members protest in bengaluru

ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು (Congress Guarantee) ಘೋಷಣೆ ಮಾಡಿದ್ದ ಕಾಂಗ್ರೆಸ್‌ ಇದೀಗ ಮತ್ತಷ್ಟು ಆಶ್ವಾಸನೆಗಳನ್ನು ಈಡೇರಿಸಬೇಕು ಎಂದು ಮತದಾರರು ಒತ್ತಾಯಿಸುತ್ತಿದ್ದಾರೆ. ಅದರಂತೆ, ಏಳನೇ ಗ್ಯಾರಂಟಿ ಎನ್ನಲಾಗುತ್ತಿರುವ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾವನ್ನು ಈ ವರ್ಷ ಮಾಡಲಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಚುನಾವಣೆ ವೇಳೆ ಕಾಂಗ್ರೆಸ್‌ ಪ್ರಮುಖವಾಗಿ ಐದು ಗ್ಯಾರಂಟಿ ಘೋಷಿಸಿತ್ತು. ಅದರಂತೆ ಪ್ರತಿ ಮನೆಯ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡುವ ಗೃಹಜ್ಯೋತಿ, ಮನೆಯೊಡತಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ, ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆ, ನಿರುದ್ಯೋಗಿಗಳಿಗೆ ಭತ್ಯೆ ಹಾಗೂ ಮಹಿಳೆಯರಿಗೆ ಉಚಿತ ಬಸ್‌ ಸೇವೆಯನ್ನು ಘೋಷಣೆ ಮಾಡಲಾಗಿತ್ತು. ಈ ಪೈಕಿ ಉಚಿತ ಬಸ್‌ ಸೇವೆಗೆ ಈಗಾಗಲೆ ಚಾಲನೆ ನೀಡಲಾಗಿದೆ, ಗೃಹಜ್ಯೋತಿ ಯೋಜನೆಗೆ ನೋಂದಣಿ ನಡೆಯುತ್ತಿದೆ.

ಇದೆಲ್ಲದರ ನಡುವೆ, ಅಂಗನವಾಡಿ ಕಾರ್ಯಕರ್ತೆಯರು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ಹಾಗೂ ಸಹಾಯಕರಿಯರಿಗೆ ಮಾಸಿಕ 10 ಸಾವಿರ ರೂ. ನೀಡುವುದಾಗಿ ಕಾಂಗ್ರೆಸ್‌ ಚುನಾವಣೆ ಸಮಯದಲ್ಲಿ ಘೋಷಿಸಿತ್ತು. ಅದನ್ನು ಈಡೇರಿಸಬೇಕು ಎಂದು ಆಗ್ರಹ ಕೇಳಿಬರುತ್ತಿದೆ. ಇದನ್ನು ಕಾಂಗ್ರೆಸ್‌ನ ಆರನೇ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಇದೀಗ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ತ್ರೀಶಕ್ತಿ ಸಂಘದ ಸದಸ್ಯರು ಕುಮಾರಕೃಪಾ ರಸ್ತೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ಮನೆಯೆದುರು ಬುಧವಾರ ಬೆಳಗ್ಗೆಯಿಂದಲೇ ಪ್ರತಿಭಟನೆಗೆ ಕುಳಿತಿದ್ದರು. ಇದನ್ನು ಕಾಂಗ್ರೆಸ್‌ನ ಏಳನೇ ಗ್ಯಾರಂಟಿ ಯೋಜನೆ ಎನ್ನಲಾಗುತ್ತಿದೆ. ಸಂಪುಟ ಸಭೆ ಮುಗಿಸಿ ಆಗಮಿಸಿದ ಸಿದ್ದರಾಮಯ್ಯ, ಸದಸ್ಯರನ್ನು ಭೇಟಿ ಮಾಡಿದರು. ಭೇಟಿಯ ನಂತರ ಸ್ತ್ರೀಶಕ್ತಿ ಸಂಘದ ಸದಸ್ಯರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಇದನ್ನೂ ಓದಿ: ಸ್ತ್ರೀಶಕ್ತಿ ಕಟ್ಟಿದ ಶ್ರೇಯಸ್ಸು ಮೋಟಮ್ಮ ಅವರಿಗೆ ಸಲ್ಲಬೇಕು: ಎಸ್‌.ಎಂ. ಕೃಷ್ಣ

ಮುಂದಿನ ವರ್ಷ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಸಾಲಮನ್ನಾ ಬಗ್ಗೆ ಘೋಷಣೆ ಮಾಡಿರೋದು ಸತ್ಯ. ಮುಂದಿನ ವರ್ಷ ಅದನ್ನು ಜಾರಿ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಈ ಸಾಲಮನ್ನಾಕ್ಕೆ 2,400 ಕೋಟಿ ರೂ. ಬೇಕಾಗುತ್ತದೆ. ಹೀಗಾಗಿ ಈ ವರ್ಷ ಆಗೋದಿಲ್ಲ. ಮುಂದಿನ ವರ್ಷ ಮಾಡ್ತೀನಿ ಎಂದು ಸಿಎಂ ತಿಳಿಸಿದ್ದಾರೆ. ಸಂಘದ ಮಹಿಳೆಯರ ಜತೆ ಚರ್ಚೆ ಮಾಡಿ ನಾವು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

Exit mobile version