ಚಿತ್ರದುರ್ಗ: ಚಳ್ಳಕೆರೆ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಬಿ.ಉಮೇಶ್ ವಿರುದ್ಧ ಯುವತಿಯ ಮೇಲೆ ಅತ್ಯಾಚಾರ ಮಾಡಿದ, ಮೋಸಗೈದ ಆರೋಪ ಹೊರಿಸಿ ಎಫ್‌ಐಆರ್ ದಾಖಲಾಗಿದೆ.
ಅವರು ತಮ್ಮ ಸಂಬಂಧಿಯೇ ಆಗಿರುವ ಯುವತಿ ಸಹಾಯ ಕೇಳಿ ಠಾಣೆಗೆ ಹೋದ ಬಳಿಕ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದಲ್ಲದೆ, ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಈಗಾಗಲೇ ಮದುವೆಯಾಗಿ ಇಬ್ಬರು ಹೆಂಡತಿಯರಿದ್ದಾರಂತೆ. ಮೂರನೆಯವಳಾಗಿ ಬಾ ಎನ್ನುವುದು ಇನ್ಸ್‌ಪೆಕ್ಟರ್ ಅವರು ನೀಡಿರುವ ಆಹ್ವಾನ ಎಂದು ಯುವತಿಯ ದೂರಿನಲ್ಲಿ ತಿಳಿಸಲಾಗಿದೆ.
ಚಿತ್ರದುರ್ಗ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ತಲೆಮರೆಸಿಕೊಂಡಿದ್ದಾರೆ. ಅವರ ಕೈಕೆಳಗಿನ ಪೊಲೀಸರೇ ಈಗ ಅವರಿಗಾಗಿ ಹುಡುಕಾಡುವ ಪ್ರಸಂಗ ಬಂದಿದೆ.
ಐದು ವರ್ಷಗಳ ಇತಿಹಾಸ!
ಹಾಗಂತ ಇದೇನೂ ನಿನ್ನೆ ಮೊನ್ನೆ ನಡೆದ ಕೇಸಲ್ಲ. ಇದಕ್ಕೆ ಬರೋಬ್ಬರಿ ಐದು ವರ್ಷಗಳ ಇತಿಹಾಸ ಇದೆ. ಕೇವಲ ಒಮ್ಮೆ ನಡೆದಿರುವ ಅತ್ಯಾಚಾರವೂ ಅಲ್ಲ. ಐದು ಬಾರಿ ತಾನು ಗರ್ಭಪಾತ ಮಾಡಿಸಿಕೊಳ್ಳುವಂತೆ ಬಲವಂತ ಮಾಡಿದ್ದಾರೆ ಎಂದು ಯುವತಿಯೇ ದೂರಿನಲ್ಲಿ ತಿಳಿಸಿದ್ದಾರೆ.
ಐದು ವರ್ಷದ ಹಿಂದೆ ಉಮೇಶ್ ದಾವಣಗೆರೆಯಲ್ಲಿ ಇನ್ಸ್‌ಪೆಕ್ಟರ್ ಅಗಿದ್ದರು. ಉಮೇಶ್ ಅವರು ಯುವತಿಯ ಸೋದರ ಮಾವನ ಮಗನೇ. ಯುವತಿಯ ಮನೆಗೆ ಸಂಬಂಧಿಸಿದ ಒಂದು ನಿವೇಶನದ ಸಮಸ್ಯೆ ಇತ್ತು. ಹೇಗೂ ಸಂಬಂಧಿಕರೇ ಪೊಲೀಸ್ ಆಗಿದ್ದಾರೆ ಎಂಬ ನಂಬಿಕೆಯಲ್ಲಿ ಯುವತಿ ಉಮೇಶ್ ಅವರ ಬಳಿಗೆ ಹೋಗಿದ್ದಾರೆ ಎನ್ನಲಾಗಿದೆ.
ಆಗ ದಾವಣಗೆರೆಗೆ ಬನ್ನಿ ಮಾತನಾಡೋಣ ಎಂದು ಕರೆಸಿಕೊಂಡ ಉಮೇಶ್ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಕರೆದಾಗಲೆಲ್ಲ ಬರಬೇಕು ಎನ್ನುವ ಒತ್ತಡ ಹೇರಿದ್ದರು. ಅಲ್ಲಿಗೆ ಹೋಗದೆ ಇದ್ದಾಗ ಶಿವಮೊಗ್ಗಕ್ಕೆ ಬಂದು ಅಲ್ಲೂ ಬಲಾತ್ಕಾರ ಮಾಡಿದ್ದಾರಂತೆ.
ಆಗ ಯುವತಿ ಶಿವಮೊಗ್ಗದಲ್ಲಿ ಬಿಇಡಿ ಶಿಕ್ಷಣ ಓದುತ್ತಿದ್ದರು. ಈ ರೀತಿ ಒತ್ತಡದಿಂದ, ಬಲವಂತದಿಂದ ಆಗಾಗ ಆಕೆಯನ್ನು ಬಳಸಿಕೊಳ್ಳಲಾಗಿದೆ ಎನ್ನಲಾಗುತ್ತಿದ್ದು, ಪರಿಣಾಮವಾಗಿ ಯುವತಿಗೆ ಐದು ಬಾರಿ ಗರ್ಭಪಾತ ಮಾಡಿಸಬೇಕಾಗಿ ಬಂತು ಎನ್ನಲಾಗಿದೆ.
ಇಷ್ಟೆಲ್ಲ ಮಾಡಿರುವ ಉಮೇಶ್‌ಗೆ ಈಗಾಗಲೇ ಇಬ್ಬರು ಹೆಂಡತಿಯರು ಇದ್ದಾರಂತೆ. ನಿರಂತರ ಅತ್ಯಾಚಾರ ಮತ್ತು ಗರ್ಭಪಾತಕ್ಕೆ ನ್ಯಾಯ ಕೇಳಿದರೆ ಈಗಾಗಲೇ ಇಬ್ಬರಿದ್ದಾರೆ. ನೀನು ಮೂರನೇ ಹೆಂಡತಿಯಾಗಿರು, ನೋಡಿಕೊಳ್ಳುತ್ತೇನೆ ಎಂದಿದ್ದರಂತೆ ಉಮೇಶ್.
ಕರೆದಾಗಲೆಲ್ಲ ಬಂದಿಲ್ಲ, ಏನೇನೋ ಪ್ರಶ್ನೆ ಕೇಳಿ ಕಿರಿಕಿರಿ ಮಾಡುತ್ತಾಳೆ ಎಂದು ತಿಳಿಯುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಉಮೇಶ್ ಬೆದರಿಕೆ ಹಾಕಲು ಶುರು ಮಾಡಿದ್ದಾರೆ ಎನ್ನಲಾಗಿದೆ. ʻʻದಾವಣಗೆರೆಯ ನಿವೇಶನ ನಿಮಗೆ ಸಿಗದಂತೆ ಮಾಡುತ್ತೇನೆ. ನಿಮ್ಮ ತಂದೆ ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದಾರೆʼʼ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೀಗ ಪೊಲೀಸರು ಅತ್ಯಾಚಾರಕ್ಕೆ ಸಂಬಂಧಿಸಿ ಕಲಂ 376 ಕ್ಲಾಸ್ (2)(ಕೆ)(ಎನ್) ಹಾಗೂ ಐಪಿಡಿ 323, 504, 506 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Viral video | ಅಮ್ಮ ಚಾಕೋಲೇಟ್ ಕದ್ದಿದ್ದಾಳೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಮೂರು ವರ್ಷದ ಪುಟಾಣಿ!