ಬೆಳಗಾವಿ: ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಅಭ್ಯಾಸ ಮಾಡುತ್ತಿದ್ದ ೧೪ ವರ್ಷದ ಬಾಲಕಿಯೊಬ್ಬಳನ್ನು ಅಪಹರಣ ಮಾಡಿದ ಯುವಕನೊಬ್ಬ ಆಕೆಯನ್ನು ಗುಜರಾತಿಗೆ ಕರೆದೊಯ್ದು ಅತ್ಯಾಚಾರ (Sexual Assault) ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿಯ ಕೆ.ಎಚ್. ಕಾಂಗ್ರಾಳಿಯ ಆಕಾಶ ದೋಡಿಯಾ (19) ಬಂಧಿತ ಆರೋಪಿಯಾಗಿದ್ದಾನೆ. ಅಹಮದಾಬಾದ್‌ನಲ್ಲಿ ತನ್ನ ಸಂಬಂಧಿಕರ ಮನೆಗೆ ಕರೆದೊಯ್ದಿದ್ದ ಈತ ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಎರಡು ದಿನಗಳ ಕಾಲ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಇದರಿಂದ ಬಾಲಕಿ ತೀವ್ರವಾಗಿ ಘಾಸಿಗೊಳಗಾಗಿದ್ದಾಳೆ. ಈ ವಿಷಯವು ಬಾಲಕಿಯನ್ನು ರಕ್ಷಣೆ ಮಾಡಿ ಕರೆತಂದಾಗ ಬೆಳಕಿಗೆ ಬಂದಿದೆ.
ಇದನ್ನೂ ಓದಿ | Tiger Attack | ಗುಂಡ್ಲುಪೇಟೆ ಸುತ್ತಮುತ್ತ ಹುಲಿ ಹಾವಳಿ; ಜಾನುವಾರುಗಳು ಬಲಿ, ಜನರಲ್ಲಿ ಹೆಚ್ಚಿದ ಆತಂಕ
ಬಾಲಕಿ ತಂದೆಯು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲು ಮಾಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಳಿಕ ಆಕೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಇರುವುದು ಗೊತ್ತಾಗಿದೆ. ಹೀಗಾಗಿ ಕಾರ್ಯಾಚರಣೆ ನಡೆಸಿ ಅಲ್ಲಿ ಯುವಕನ ಸಂಬಂಧಿಕರ ಮನೆಗೆ ತೆರಳಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಖಡೇಬಜಾರ್ ಎಸಿಪಿ ಚಂದ್ರಪ್ಪ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಬೆಳಗಾವಿಯ ಜೈಲಿಗಟ್ಟಲಾಗಿದೆ. ಆತನ ವಿರುದ್ಧ ಬೆಳಗಾವಿ ಕ್ಯಾಂಪ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಬಾಲಕಿಯನ್ನು ರಕ್ಷಣೆ ಮಾಡಿ ಬೆಳಗಾವಿಗೆ ಕರೆತರಲಾಗಿದ್ದು, ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಆಕಾಶ್ ಗುಜರಾತ್ ಮೂಲದವನಾಗಿದ್ದು, ಪೋಷಕರೊಂದಿಗೆ ಬೆಳಗಾವಿಯಲ್ಲಿ ಕಂಗ್ರಾಳಿಯಲ್ಲಿ ವಾಸವಾಗಿದ್ದ.
ಇದನ್ನೂ ಓದಿ | Suicide Case | ಚಿತ್ರದುರ್ಗದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ?