ಹಾವೇರಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ(ಶೀಘ್ರಗತಿ ನ್ಯಾಯಾಲಯ-1) ನ್ಯಾಯಾಧೀಶರಾದ ನಿಂಗೌಡ ಪಾಟೀಲ ಅವರು ತೀರ್ಪು ನೀಡಿದ್ದಾರೆ.
ಮಾಗೋಡ ಗ್ರಾಮದ ಹನಮಂತಗೌಡ ಶಿವಲಿಂಗಗೌಡ ಪಾಟೀಲ ಎಂಬ ಆರೋಪಿ ಶಿಕ್ಷೆಗೆ ಒಳಗಾದವನು. ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಈತನ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಣೇಬೆನ್ನೂರು ಗ್ರಾಮೀಣ ವೃತ್ತದ ತನಿಖಾಧಿಕಾರಿ ಸಿಪಿಐ ಸುರೇಶ ಸಗರಿ ಅವರು ತನಿಖೆ ಮಾಡಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಯಾಧೀಶರು ಐಪಿಸಿ ಸೆಕ್ಷನ್ 376(ಎ)(ಬಿ), ಪೋಕ್ಸೋ ಅಧಿನಿಯಮ-2012 ರಡಿ ಅನ್ವಯ 20 ವರ್ಷಗಳ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಈ ದಂಡದ ಹಣದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ನೊಂದ ಬಾಲಕಿಗೆ 30 ಸಾವಿರ ರೂಪಾಯಿ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಪರಿಹಾರ ನಿಧಿಯಿಂದ ನೊಂದ ಬಾಲಕಿಗೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಆದೇಶ ಮಾಡಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸಿದ್ಧಾರೂಢ ಎಂ ಗೆಜ್ಜಿಹಳ್ಳಿ ವಾದ ಮಂಡಿಸಿದ್ದರು.
ಇದನ್ನೂ ಓದಿ | Firing Case | ಕೈಯಲ್ಲಿದ್ದ ನಾಡಬಂದೂಕು ಮಿಸ್ ಫೈರ್; ಗುಂಡು ಎದೆಗೆ ಹೊಕ್ಕಿ ರೈತ ಸಾವು