ಹಾಸನ: ಬೆಂಗಳೂರಿನ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕನೊಬ್ಬನಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual Assault) ಪ್ರಕರಣ ಕಂಡುಬಂದ ಬೆನ್ನಲ್ಲೇ ಜಿಲ್ಲೆಯ ಬೇಲೂರು ತಾಲೂಕಿನ ಖಾಸಗಿ ಶಾಲೆಯ ಮುಖ್ಯ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದು, ಸ್ಥಳೀಯರು ಧರ್ಮದೇಟು ನೀಡಿದ್ದಾರೆ.
ಬೇಲೂರು ತಾಲೂಕಿನ ಖಾಸಗಿ ಶಾಲೆಯೊಂದರ ಮುಖ್ಯ ಶಿಕ್ಷಕ ನರೇಂದ್ರ ಎಂಬಾತನಿಂದ ಈ ಕೃತ್ಯ ನಡೆದಿದೆ. ವಿದ್ಯಾರ್ಥಿನಿಯರನ್ನು ತನ್ನ ಆಫೀಸ್ ರೂಂಗೆ ಕಸ ಗುಡಿಸುವುದಕ್ಕೆಂದು ಕರೆಸಿಕೊಳ್ಳುತ್ತಿದ್ದ ಈತ ಅವರ ಮೇಲೆ ಪದೇ ಪದೆ ಅಸಭ್ಯವಾಗಿ ವರ್ತಿಸುವ ಮೂಲಕ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ಇದರಿಂದ ವಿದ್ಯಾರ್ಥಿನಿಯರು ತೀವ್ರವಾಗಿ ನೊಂದಿದ್ದರು. ಪಾಠ ಮಾಡಬೇಕಾದ ಮುಖ್ಯ ಶಿಕ್ಷಕರೇ ಈ ರೀತಿಯಾಗಿ ವರ್ತನೆ ಮಾಡಿದರೆ ಯಾರಿಗೆ ದೂರು ಹೇಳುವುದು ಎಂಬ ಗೊಂದಲದಲ್ಲಿ ಹಾಗೂ ಆತಂಕದಲ್ಲಿ ವಿದ್ಯಾರ್ಥಿನಿಯರು ಇದ್ದರು ಎನ್ನಲಾಗಿದೆ.
ಸಹಪಾಠಿಗಳ ಬಳಿ ನೋವು ತೋಡಿಕೊಂಡ ವಿದ್ಯಾರ್ಥಿನಿಯರು
ಕೊನೆಗೆ ಈ ಮುಖ್ಯ ಶಿಕ್ಷಕನ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿಯರು ಸಹಪಾಠಿಗಳ ಜತೆ ಆಗುತ್ತಿರುವ ನೋವನ್ನು ಹೇಳಿಕೊಂಡಿದ್ದಾರೆ. ಈ ವಿಷಯ ಬಳಿಕ ಪೋಷಕರಿಗೂ ತಿಳಿದಿದ್ದು, ಸರಿಯಾಗಿ ವಿಚಾರಿಸಿದಾಗ ಶಿಕ್ಷಕನ ಅಸಭ್ಯ ಕೃತ್ಯ ಬೆಳಕಿಗೆ ಬಂದಿದೆ.
ಪೋಷಕರಿಂದ ಧರ್ಮದೇಟು
ಬಳಿಕ ಪೋಷಕರು ವಿದ್ಯಾರ್ಥಿನಿಯರ ಸಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಮುಖ್ಯ ಶಿಕ್ಷಕನಿಗೆ ಪೊಲೀಸ್ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ, ಆ ಶಿಕ್ಷಕ ಬರಲಿಲ್ಲ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಪೋಷಕರು ಮುಖ್ಯ ಶಿಕ್ಷಕನಿಗೆ ಧರ್ಮದೇಟು ನೀಡಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೇಲೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Sexual Assault | 13 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದೈಹಿಕ ಶಿಕ್ಷಣ ಶಿಕ್ಷಕ; ಎಲ್ಲೆಲ್ಲೋ ಮುಟ್ಟುತ್ತಿದ್ದ