Site icon Vistara News

Sexual Assault | 13 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದೈಹಿಕ ಶಿಕ್ಷಣ ಶಿಕ್ಷಕ; ಎಲ್ಲೆಲ್ಲೋ ಮುಟ್ಟುತ್ತಿದ್ದ

sexual harrasement

ಬೆಂಗಳೂರು: ಇದು ದೈಹಿಕ ಶಿಕ್ಷಣ ಶಿಕ್ಷಕನೊಬ್ಬನ ಕಾಮಾಂಧತೆಯ ಪ್ರಕರಣ. ಮಕ್ಕಳಿಗೆ ದೈಹಿಕ ಚಟುವಟಿಕೆಯನ್ನು ಹೇಳಿಕೊಟ್ಟು ಸದೃಢರನ್ನಾಗಿ ಮಾಡುವ ಜವಾಬ್ದಾರಿ ಹೊತ್ತಿರುವ ಈತ ಕಂಡ ಕಂಡ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual Assault) ಎಸಗಿರುವುದು ಬೆಳಕಿಗೆ ಬಂದಿದೆ. ಶಿಕ್ಷಣ ನೀಡುವ ನೆಪದಲ್ಲಿ ಮುಟ್ಟಬಾರದ ಜಾಗದಲ್ಲೆಲ್ಲ ಮುಟ್ಟಿ ಅಸಭ್ಯ ವರ್ತನೆ ತೋರಿದ್ದಾನೆ. ಈಗ ದೌರ್ಜನ್ಯಕ್ಕೊಳಗಾದ ೧೩ ಬಾಲಕಿಯರು ನೀಡಿದ ದೂರಿನನ್ವಯ ಬಂಧಿತನಾಗಿರುವ ಈತನ ವಿರುದ್ಧ ೧೬೪ ಅಡಿ ಹೇಳಿಕೆ ದಾಖಲಿಸಲು ಪೊಲೀಸರು ಕೋರ್ಟ್‌ ಮೊರೆ ಹೋಗಿದ್ದಾರೆ.

ಆರೋಪಿ ಆಂಜಿನಪ್ಪ

ಬಾಗೇಪಲ್ಲಿ ಮೂಲದ ಆಂಜಿನಪ್ಪ ಬಂಧಿತ ಆರೋಪಿಯಾಗಿದ್ದಾನೆ. ಈ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ಎಂಟು ತಿಂಗಳ ಹಿಂದಷ್ಟೇ ಹೆಬ್ಬಾಳಕ್ಕೆ ವರ್ಗಾವಣೆಯಾಗಿದ್ದ. ಆದರೆ, ಬಂದ ಕೂಡಲೇ ತನ್ನ ಚಾಳಿಯನ್ನು ಆರಂಭಿಸಿದ್ದು, ಸತತವಾಗಿ ಇಲ್ಲಿಯವರೆಗೂ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗುತ್ತಲೇ ಬಂದಿದ್ದಾನೆ ಎನ್ನಲಾಗಿದೆ.

ದೈಹಿಕ ಶಿಕ್ಷಣದ ನೆಪದಲ್ಲಿ ಹತ್ತಿರ ಬರುವ ಇಲ್ಲವೇ ಕರೆಸಿಕೊಳ್ಳುವ ಈತ ಬಾಲಕಿಯರಿಗೆ ಮುಟ್ಟಬಾರದ ಜಾಗದಲ್ಲೆಲ್ಲ ಮುಟ್ಟುತ್ತಿದ್ದ ಎಂದು ಹೇಳಲಾಗಿದೆ. ಇದರಿಂದ ಮುಜುಗರಕ್ಕೊಳಪಡುವ ವಿದ್ಯಾರ್ಥಿನಿಯರು ತಪ್ಪಿಸಿಕೊಳ್ಳುತ್ತಿದ್ದರು. ಕೊನೆಗೆ ಇವನ ಕಾಟ ವಿಪರೀತವಾಗುತ್ತಿದ್ದಂತೆ ಪೋಷಕರ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ | Murugha Seer | ಪ್ರಚೋದನೆ, ಕಳವು ಪ್ರಕರಣದಲ್ಲಿ ಮಾಜಿ ಶಾಸಕ ಎಸ್.ಕೆ. ಬಸವರಾಜನ್‌ ಬಂಧನ; 4 ದಿನ ಕಸ್ಟಡಿಗೆ

ಬಾಲಕಿಯರು ವಿಷಯವನ್ನು ಮನೆಯಲ್ಲಿ ತಿಳಿಸುತ್ತಿದ್ದಂತೆ ಎಚ್ಚೆತ್ತ ಪೋಷಕರು ತಕ್ಷಣವೇ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದರು. ಬಳಿಕ ಹೆಬ್ಬಾಳ ಪೊಲೀಸರಿಗೂ ದೂರು ನೀಡಲಾಗಿದೆ. ಈ ವೇಳೆ ೧೩ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ದೂರು ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ಶಿಕ್ಷಕ ಆಂಜಿನಪ್ಪನನ್ನು ಬಂಧಿಸಿದ್ದರು.

೧೬೪ ಅಡಿ ಹೇಳಿಕೆ ದಾಖಲಿಗೆ ಪೊಲೀಸರ ಮನವಿ
ಈಗಾಗಲೇ ಆಂಜಿನಪ್ಪನನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ಆತನಿಂದ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ಬಾಲಕಿಯರಿಂದ ೧೬೪ ಅಡಿ ಹೇಳಿಕೆ ದಾಖಲು ಮಾಡಿಕೊಳ್ಳುವ ಸಲುವಾಗಿ ಸಿದ್ಧತೆ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದ್ದಾರೆ. ಕೋರ್ಟ್‌ ಅನುಮತಿ ನೀಡಿದರೆ ಬಾಲಕಿಯರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತದೆ.

ಶಿಕ್ಷಕನ ಹಿನ್ನೆಲೆ ಕೆದಕಲು ಮುಂದಾದ ಪೊಲೀಸರು
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಶಾಲೆಯಲ್ಲಿ ಇನ್ನೂ ಎಷ್ಟು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಬಗ್ಗೆ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಅಲ್ಲದೆ, ಶಿಕ್ಷಕ ಆಂಜಿನಪ್ಪ ಈ ಹಿಂದೆ ಕೆಲಸ ಮಾಡುತ್ತಿದ್ದ ಶಾಲೆಗಳಲ್ಲಿಯೂ ಇಂತಹ ಕೃತ್ಯವನ್ನು ಎಸಗುತ್ತಿದ್ದನೇ ಎಂಬ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ.

ಈ‌ ಮೊದಲು ಆಂಜಿನಪ್ಪ ಹಾಸನ, ದೇವನಹಳ್ಳಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಪೊಲೀಸರ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳ ಪೊಲೀಸರು ಆಂಜಿನಪ್ಪ ಕೆಲಸ ಮಾಡಿದ ಎಲ್ಲ ಶಾಲೆಗಳಿಗೂ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ | Murugha Seer | ಮುರುಘಾಶ್ರೀ ವಿರುದ್ಧ ಸುಳ್ಳು ದೂರಿಗೆ ಪಿತೂರಿ; ಮಠದ ಅಡುಗೆ ಸಹಾಯಕಿ ಬಂಧನ

Exit mobile version