ಬೆಂಗಳೂರು: ರಾತ್ರಿ ಸಂಚಾರಕ್ಕೆ ಬೆಂಗಳೂರು ಸೇಫ್ ಅಲ್ಲ ಎಂಬ ವಿಚಾರ ಮತ್ತೆ ರುಜುವಾತಾಗಿದೆ. ಆನ್‌ಲೈನ್ ಬುಕ್ಕಿಂಗ್ ಆ್ಯಪ್ ಮೂಲಕ ತಡ ರಾತ್ರಿ ಹೊರಟಿದ್ದ ಯುವತಿಯೊಬ್ಬಳನ್ನು ಬೈಕ್ ಚಾಲಕ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ತನ್ನ ಸ್ನೇಹಿತನನ್ನೂ ಕರೆಸಿಕೊಂಡು ಲೈಂಗಿಕ ದೌರ್ಜನ್ಯ (Sexual Assault) ನಡೆಸಿದ್ದಾನೆ. ಇಬ್ಬರೂ ಸೇರಿ ಬೆಳಗಿನ ಜಾವದ ವರೆಗೂ ಚಿತ್ರಹಿಂಸೆಯನ್ನು ಕೊಟ್ಟಿದ್ದಾರೆ. ದುರಂತವೆಂದರೆ ಈ ಕೃತ್ಯವು ಪ್ರಮುಖ ಆರೋಪಿಯ ಪ್ರೇಯಸಿ ಮುಂದೆಯೇ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಆರೋಪಿಗಳಿಬ್ಬರು ಸೇರಿದಂತೆ ಈ ಕೃತ್ಯಕ್ಕೆ ಸಹಕರಿಸಿದ ಪ್ರಮುಖ ಆರೋಪಿಯ ಪ್ರೇಯಸಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಅರ್ಫಾತ್ (೨೪) ಹಾಗೂ ಶಹಬುದ್ದೀನ್ (26) ಎಂದು ಹೇಳಲಾಗಿದೆ. ಈ ಕೃತ್ಯ ೪ ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಱಪಿಡೊ ಬೈಕ್ ಸವಾರ ಹಾಗೂ ಆತನ ಗೆಳೆಯನಿಂದ ಅತ್ಯಾಚಾರ ನಡೆದಿದೆ.
ಏನಿದು ಪ್ರಕರಣ?
ಎಸ್.ಜಿ. ಪಾಳ್ಯದಿಂದ ಯುವತಿಯೊಬ್ಬಳು ತನ್ನ ಸ್ನೇಹಿತೆಯ ಮನೆಗೆ ಹೋಗಬೇಕು ಎಂದು ಆನ್‌ಲೈನ್ ಆ್ಯಪ್ ಮೂಲಕ ಱಪಿಡೊ ಬೈಕ್ ಅನ್ನು ಬುಕ್ ಮಾಡಿದ್ದಾಳೆ. ಆಗ ಸುಮಾರು ರಾತ್ರಿ 12.45 ಆಗಿತ್ತು. ನಿಗದಿತ ಸ್ಥಳಕ್ಕೆ ಬಂದ ಱಪಿಡೊ ಬೈಕ್ ಚಾಲಕ ಯುವತಿಯನ್ನು ಬೈಕ್ ಹತ್ತಿಸಿಕೊಂಡಿದ್ದಾನೆ. ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿಗೆ ಬೈಕ್ ತೆರಳಬೇಕಿತ್ತು. ಆದರೆ, ಆತ ಅಲ್ಲಿಗೆ ಕರೆದೊಯ್ಯದೆ ನೇರವಾಗಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ, ಯುವತಿ ಪಾನಮತ್ತಳಾಗಿದ್ದರಿಂದ ಆಕೆ ಅರೆಪ್ರಜ್ಞಾವಸ್ಥೆಯಲ್ಲಿದ್ದಳು ಎನ್ನಲಾಗಿದೆ.
ಇದನ್ನೂ ಓದಿ | Sexual assault | ಅತ್ಯಾಚಾರಕ್ಕೆ ಯತ್ನಿಸಲು ಬಂದು ಮಹಿಳೆಗೆ ಥಳಿಸಿದ; ದೂರು ದಾಖಲಿಸಿಕೊಳ್ಳಲು ಮೀನಮೇಷ
ಬಳಿಕ ರ‍್ಯಾಪಿಡೋ ಚಾಲಕ ಹಾಗೂ ಆತನ ಸ್ನೇಹಿತ ಸೇರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮುಂಜಾನೆವರೆಗೂ ಈ ದುರುಳರು ದುಷ್ಕೃತ್ಯ ಎಸಗಿದ್ದಾಗಿದ್ದಾರೆನ್ನಲಾಗಿದೆ. ಈ ಕೃತ್ಯ ಎಸಗುವ ವೇಳೆ ಮೊದಲ ಆರೋಪಿಯ ಪ್ರೇಯಸಿ ಸಹ ಮನೆಯಲ್ಲಿಯೇ ಇದ್ದಳು ಎನ್ನಲಾಗಿದೆ. ಸದ್ಯ ಮೂವರನ್ನು ವಶಕ್ಕೆ ಪಡೆದಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಬಾಯ್ ಫ್ರೆಂಡ್ ಮೀಟ್ ಮಾಡೋಕೆ ಹೊರಟಿದ್ದಳು
ಸಂತ್ರಸ್ತ ಯುವತಿ ಬಾಯ್ ಫ್ರೆಂಡ್ ಮೀಟ್ ಮಾಡಲು ರ‍್ಯಾಪಿಡೋವನ್ನು ಬುಕ್ ಮಾಡಿದ್ದಳು ಎಂದು ತನಿಖೆ ವೇಳೆ ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿದ್ದ ಯುವತಿ ರ‍್ಯಾಪಿಡೋ ಪಿಕ್ ಮಾಡಿದ್ದವನ ಬಳಿ ಸಿಗರೇಟ್ ಕೇಳಿದ್ದಳು. ಆಗ ಆತನ ಬಳಿ ಸಿಗರೇಟ್ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಗರೇಟ್ ಖರೀದಿಗಾಗಿ ಬೈಕ್ ಚಾಲಕ ಅಂಗಡಿಯೊಂದರ ಮುಂದೆ ನಿಲ್ಲಿಸಿದ್ದಾನೆ. ಆತನ ಬಳಿ ಇದ್ದ ಫೋನ್ ಪೇ ಕಾರ್ಯನಿರ್ವಹಿಸದೇ ಇರುವುದರಿಂದ ಸ್ನೇಹಿತನಿಗೆ ಪೋನ್ ಮಾಡಿ ಹಣ ಕೇಳಿದ್ದ. ಹಣ ಯಾಕೆ ಎಂದು ಸ್ನೇಹಿತ ಪ್ರಶ್ನೆ ಮಾಡಿದಾಗ ಹುಡುಗಿ ಕುಡಿದ ಮತ್ತಿನಲ್ಲಿ ಇರುವುದನ್ನು ಹೇಳಿಕೊಂಡಿದ್ದ. ಹಾಗೇ ಅವರ ಮಾತುಕತೆ ಸಾಗಿದ್ದು, ಈ ಯುವತಿಯನ್ನು ಅತ್ಯಾಚಾರ ಮಾಡುವ ಪ್ಲ್ಯಾನ್ ಮಾಡಿದ್ದಾರೆ.
ಕೊನೆಗೆ ಆ ರ‍್ಯಾಪಿಡೋ ಡ್ರೈವರ್ ತಾನಿದ್ದ ರೂಮಿಗೆ ಯುವತಿಯನ್ನು ಕರೆದೊಯ್ದಿದ್ದ. ತನ್ನ ಸ್ನೇಹಿತನೂ ಅಲ್ಲಿಗೆ ಬಂದಿದ್ದ. ಅದೇ ರೂಮ್‌ನಲ್ಲಿ ಮೊದಲ ಆರೋಪಿಯ ಗರ್ಲ್ ಫ್ರೆಂಡ್ ಸಹ ಇದ್ದಳು. ಸ್ನೇಹಿತನ ಜತೆಗೂಡಿ ಯುವತಿಯನ್ನು ಅತ್ಯಾಚಾರ ಎಸಗಿದ್ದಾನೆ. ಇಬ್ಬರು ಸೇರಿ ಗ್ಯಾಂಗ್ ರೇಪ್ ಮಾಡಿ ಏನೂ ತಿಳಿಯದಂತೆ ನಟಿಸಿದ್ದರು. ಆದರೆ, ಈ ವೇಳೆ ಯುವತಿಗೆ ಪ್ರಜ್ಞೆ ಇರಲಿಲ್ಲ ಎನ್ನಲಾಗಿದೆ. ಮುಂಜಾನೆ ಪ್ರಜ್ಞೆ ಬಂದ ಬಳಿಕ ಯುವತಿ ತನ್ನ ಬಾಯ್ ಫ್ರೆಂಡ್‌ಗೆ ಕರೆ ಮಾಡಿ ಕರೆಸಿಕೊಂಡು ಮನೆಗೆ ಹೋಗಿದ್ದಳು. ಯುವತಿ ಮನೆಗೆ ಹೋದ ಬಳಿಕ ದೇಹದಲ್ಲಿ ನೋವು ಕಂಡು ಬಂದಿದೆ. ಹೀಗಾಗಿ ಬಾಯ್ ಫ್ರೆಂಡ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗುವುದಾಗಿ ಹೇಳಿದ್ದಾಳೆ. ಅಲ್ಲಿ ಚಿಕಿತ್ಸೆಗೆ ಒಳಗಾದಾಗ ಅತ್ಯಾಚಾರ ನಡೆದಿದೆ ಎನ್ನುವುದು ಖಾತ್ರಿಯಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಮೊದಲ ಆರೋಪಿಯ ಪ್ರೇಯಸಿ ಈ ವೇಳೆ ಏನು ಮಾಡುತ್ತಿದ್ದಳು ಎಂಬ ಅಂಶವನ್ನು ಬಹಿರಂಗ ಮಾಡಿಲ್ಲ.
ರಾತ್ರಿ ಸಂಚಾರ ಎಷ್ಟು ಸೇಫ್?
ಇದೀಗ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ಯುವತಿಯರು ಸಂಚಾರ ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಉದ್ಭವಿಸಿದ್ದು, ಘಟನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.
ಇದನ್ನೂ ಓದಿ | Religious Conversion | ಅನಧಿಕೃತ ಪ್ರಾರ್ಥನಾಲಯ ನಿರ್ಮಿಸಿ ಮತಾಂತರ ಆರೋಪ: ಹಿಂದು ಕಾರ್ಯಕರ್ತರಿಂದ ಮುತ್ತಿಗೆ