Site icon Vistara News

Sexual Harassment | ಮಹಿಳೆಯನ್ನು ಡ್ಯಾನ್ಸ್ ಬಾರ್‌ನಲ್ಲಿ ಇರಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಖದೀಮನ ಬಂಧನ

Sexual Harassment

ಬೆಂಗಳೂರು: ಮಹಿಳೆಗೆ ಹೆಚ್ಚಿನ ಹಣ ಸಂಪಾದನೆಗೆ ದಾರಿ ತೋರಿಸುತ್ತೇನೆ ಎಂದು ಡ್ಯಾನ್ಸ್ ಬಾರ್‌ಗೆ ಹಾಕಿ, ಲೈಂಗಿಕ ಕಿರುಕುಳ (Sexual Harassment) ನೀಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಜ್ಯುವೆಲ್ಲರಿ ಶಾಪ್‌ ಕೆಲಸಗಾರ ಸಮರ್ ಪ್ರಮಾಣಿಕ್ ಬಂಧಿತ ಆರೋಪಿ. ಬಂಗಾಳಿ ಮಹಿಳೆ ಸಂತ್ರಸ್ತೆಯಾಗಿದ್ದಾರೆ. ಮಹಿಳೆ ನಗರದ ಯಲಹಂಕದ ಯೂನಿಸೆಕ್ಸ್ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಗ್ರಾಹಕನಾಗಿ ಆಗಾಗ ಬ್ಯೂಟಿ ಪಾರ್ಲರ್‌ಗೆ ತೆರಳುತ್ತಿದ್ದ ಆರೋಪಿ, ಮಹಿಳೆಯ ಜತೆ ಸ್ನೇಹ ಬೆಳೆಸಿದ್ದಾನೆ. ನಂತರ ಆಕೆಗೆ ಹೆಚ್ಚಿನ ಹಣ ಸಂಪಾದನೆಗೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ, ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ | Sexual harrassment | 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದುಷ್ಕರ್ಮಿಗೆ ಪತ್ನಿಯಿಂದಲೂ ಬೆಂಬಲ?

ಬಳಿಕ ಮಹಿಳೆಯನ್ನು ಎರಡು ಡ್ಯಾನ್ಸ್ ಬಾರ್‌ಗಳಲ್ಲಿ ಕೆಲಸಕ್ಕೆ ತಳ್ಳಿ ಲಕ್ಷಾಂತರ ರೂಪಾಯಿ ಹಣ ಕಿತ್ತುಕೊಂಡಿದ್ದಾನೆ. ಸಮರ್‌ನ ಕಿರುಕುಳ ತಾಳಲಾರದೆ ಅನಾರೋಗ್ಯದ ನೆಪ ಹೇಳಿ ಪಶ್ಚಿಮ ಬಂಗಾಳದ ಸ್ವಂತ ಊರಿಗೆ ತೆರಳಿದ್ದಾರೆ. ಅಲ್ಲಿ ಮಹಿಳೆಯ ಕಷ್ಟ ತಿಳಿದು ಮತ್ತೆ ಡ್ಯಾನ್ಸ್ ಬಾರ್‌ನಲ್ಲಿ ಕೆಲಸ ಮಾಡಬೇಡ ಎಂದು ಯುವಕನೊಬ್ಬ ಮದುವೆಯಾಗಿದ್ದ. ಆರು ತಿಂಗಳ ಬಳಿಕ‌ ದಂಪತಿ ನಗರದ ಕೊಡಿಗೇಹಳ್ಳಿಗೆ ಬಂದು ನೆಲೆಸಿದ್ದರು.

ಮಹಿಳೆ ನಗರಕ್ಕೆ ಬಂದ ವಿಚಾರ ತಿಳಿದ ಸಮರ್ ತನ್ನ ಜತೆ ದೈಹಿಕ ಸಂಪರ್ಕ ಬೆಳೆಸುವಂತೆ ಮತ್ತೆ ಪೀಡಿಸುತ್ತಿದ್ದ. ಆಕೆಯ ಜತೆಗಿದ್ದ ಹಳೆಯ ಖಾಸಗಿ ಫೋಟೊಗಳನ್ನು ಕುಟುಂಬಸ್ಥರಿಗೆ ತೋರಿಸುವುದಾಗಿ ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದ. ಇದಕ್ಕೆ ಮಹಿಳೆ‌ ಸ್ಪಂದಿಸದ ಹಿನ್ನೆಲೆಯಲ್ಲಿ ಸ್ನೇಹಿತರಿಗೆಲ್ಲ ಮಹಿಳೆಯ ಖಾಸಗಿ ಫೋಟೊ, ವಿಡಿಯೊಗಳನ್ನು ವೈರಲ್ ಮಾಡಿದ್ದ.

ನಿರಂತರ ಕಿರುಕುಳ ಹಿನ್ನೆಲೆಯಲ್ಲಿ ಮಹಿಳೆ, ಈಶಾನ್ಯ ವಿಭಾಗ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಹಲಸೂರು ಬಳಿಯ ಮನೆಗೆ ತೆರಳಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ | Santro Ravi case | ಸಮಗ್ರ ತನಿಖೆ ಹೇಳಿಕೆ, ರಾಜಕೀಯ ವಾಕ್ಸಮರ ನಡುವೆಯೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ ಸ್ಯಾಂಟ್ರೊ ರವಿ

Exit mobile version