Site icon Vistara News

Pocso Case | ಪೋಕ್ಸೋ ಆರೋಪಿಗೆ 7 ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ಕೊಡುವಂತಿಲ್ಲ ಎಂದ ಹೈಕೋರ್ಟ್

sexual assault

ಬೆಂಗಳೂರು: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ದುಷ್ಟರನ್ನು ಶಿಕ್ಷಿಸುವುದಕ್ಕಾಗಿಯೇ ಇರುವ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ (Pocso Case) ಅಡಿ ಆರೋಪಿಗಳಿಗೆ ನಿಗದಿತ ಕನಿಷ್ಠ ಶಿಕ್ಷೆಯ ಅವಧಿಯಾದ ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸುವಂತಿಲ್ಲ. ಈ ರೀತಿ ಶಿಕ್ಷೆ ಕಡಿಮೆ ಮಾಡುವ ಅಧಿಕಾರ ವಿಶೇಷ ನ್ಯಾಯಾಲಯಕ್ಕೆ ಇಲ್ಲ ಎಂದು ಹೈಕೋರ್ಟ್‌ನ ಕಲಬುರಗಿ ಪೀಠ ಹೇಳಿದೆ.

ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಾಲವಾಡಿ ನಿವಾಸಿ ಶೇಖ್ ರೌಫ್ ಎಂಬಾತನಿಗೆ ವಿಚಾರಣಾಧೀನ ಪೋಕ್ಸೊ ವಿಶೇಷ ನ್ಯಾಯಾಲಯವು ಏಳು ವರ್ಷದ ಬದಲಾಗಿ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಭಾಲ್ಕಿ ಟೌನ್ ಠಾಣಾ ಪೊಲೀಸರು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.

ಆರೋಪಿ ಶೇಖ್ ರೌಫ್ ಅನ್ನು ದೋಷಿಯಾಗಿ ತೀರ್ಮಾನಿಸಿರುವ ಪೋಕ್ಸೊ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಆತನಿಗೆ ವಿಧಿಸಲಾಗಿದ್ದ ಐದು ವರ್ಷ ಜೈಲು ಶಿಕ್ಷೆಯನ್ನು ಏಳು ವರ್ಷಕ್ಕೆ ಹೆಚ್ಚಿಸಿದೆ. ಅಲ್ಲದೆ, ಪೋಕ್ಸೊ ಕಾಯಿದೆಯ ಸೆಕ್ಷನ್ 4 ಅಡಿಯಲ್ಲಿ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಅಪರಾಧ ಕೃತ್ಯಕ್ಕೆ ಕನಿಷ್ಠ ಏಳು ವರ್ಷ ಜೈಲು ಶಿಕ್ಷೆ ನಿಗದಿಪಡಿಸಲಾಗಿದೆ. ಈ ಅಂಶಗಳನ್ನು ನಿರ್ಲಕ್ಷಿಸಿ ವಿಶೇಷ ನ್ಯಾಯಾಲಯ ಆರೋಪಿಗೆ ಕೇವಲ ಐದು ವರ್ಷ ಜೈಲು ಶಿಕ್ಷೆ ವಿಧಿಸಿರುವ ಕಾನೂನು ಬಾಹಿರ ಎಂದಿದೆ.

ಏಳು ವರ್ಷದ ಹಿಂದಿನ ಪ್ರಕರಣವಿದು
12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಶೇಖ್‌ ರೌಫ್‌ ಅನ್ನು ಅಪರಾಧಿಯಾಗಿ ಪರಿಗಣಿಸಿದ್ದ ಪೋಕ್ಸೊ ವಿಶೇಷ ನ್ಯಾಯಾಲಯ, ಆತನಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ, 2015ರ ಸೆಪ್ಟೆಂಬರ್‌ 7ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಭಾಲ್ಕಿ ಟೌನ್ ಪೊಲೀಸರು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಸರ್ಕಾರದ ವಿಶೇಷ ಅಭಿಯೋಜಕರು “ಶೇಖ್ ರೌಫ್ ಎಸಗಿರುವ ಅಪರಾಧ ಕೃತ್ಯವನ್ನು ಪ್ರಾಸಿಕ್ಯೂಷನ್ ಎಲ್ಲಾ ಸಾಕ್ಷ್ಯಾಧಾರಗಳ ಸಹಿತ ಸಾಬೀತುಪಡಿಸಿತ್ತು. ಅದನ್ನು ಪರಿಗಣಿಸಿದ ಪೋಕ್ಸೊ ನ್ಯಾಯಾಲಯವು ಶೇಖ್‌ ರೌಫ್ ಅನ್ನು ದೋಷಿಯಾಗಿ ತಿರ್ಮಾನಿಸಿದೆ. ಹೀಗಿದ್ದರೂ ಅಪರಾಧಿಗೆ ಶಿಕ್ಷೆ ಮತ್ತು ದಂಡ ಮೊತ್ತವನ್ನು ಕಾಯಿದೆ ಅಡಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಕಡಿಮೆ ವಿಧಿಸಿರುವುದು ಸರಿಯಲ್ಲ. ಈ ರೀತಿ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಲು ವಿಶೇಷ ನ್ಯಾಯಾಲಯಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ವಾದಿಸಿದ್ದರು. ಇದನ್ನು ಹೈಕೋರ್ಟ್‌ ಪೀಠ ಪುರಸ್ಕರಿಸಿದೆ.

ಇದನ್ನೂ ಓದಿ | Allahabad High Court | ಇಬ್ಬರು ವಯಸ್ಕರು ಒಟ್ಟಿಗೆ ವಾಸಿಸುವುದು ಅನೈತಿಕವಲ್ಲ: ಅಲಹಾಬಾದ್ ಹೈಕೋರ್ಟ್

Exit mobile version